ಗುಂಡ್ಲುಪೇಟೆ (ಚಾಮರಾಜನಗರ): ಬೃಹದಾಕಾರದ ಮರವೊಂದು ವಿದ್ಯುತ್ ಕಂಬ ಮೇಲೆ ಉರುಳಿದ ಪರಿಣಾಮ 10ಕ್ಕು ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅವಘಡದ ವೇಳೆ ಕರೆಂಟ್ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸದಿರುವ ಘಟನೆ ತಾಲೂಕಿನ ಯಡವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಯಡವನಹಳ್ಳಿ ಗ್ರಾಮದಲ್ಲಿ ಮರ ನೆಲಕ್ಕುರುಳಿ ಈ ಮಾರ್ಗದಲ್ಲಿದ್ದ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ ಫಾರ್ಮರ್ ಮೇಲೆ ಬಿದ್ದಿದೆ. ಇದರ ಪರಿಣಾಮ ಹಲವು ಕಂಬಗಳು ರಸ್ತೆ ಮೇಲೆ ಉರುಳಿದರೆ ಒಂದು ವಿದ್ಯುತ್ ಕಂಬ ರಸ್ತೆ ಮೇಲೆ ಸಂಚಾರ ಮಾಡುತ್ತಿದ್ದ ವಾಹನವೊಂದರೆ ಮೇಲೆ ಬಿದ್ದಿದೆ. ಇದರಿಂದ ವಾಹನ ಜಖಂಗೊಂಡಿದ್ದು, ಚಾಲಕ ತಕ್ಷಣದಿಂದ ಕೆಳಗಿಳಿದು ಅಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಬೇಗೂರು ಠಾಣೆ ಪೊಲೀಸರು ಹಾಗೂ ಚೆಸ್ಕಾಂ ಇಲಾಖೆಯ ವಿಭಾಗೀಯ ಸಹಾಯ ಇಂಜಿನಿಯರ್ ದೌಡಾಯಿಸಿ ಧರೆಗುರುಳಿದ ಮರ ಹಾಗೂ ವಿದ್ಯುತ್ ಕಂಬಗಳ ತೆರವಿಗೆ ಮುಂದಾಗಿದ್ದಾರೆ.
ಚೆಸ್ಕಾಂ ಇಲಾಖೆಗೆ ಮನವಿ ಮಾಡಿದರೂ ನಿರ್ಲಕ್ಷ್ಯ-ಆರೋಪ:
ಮರ ಬೀಳುವ ಮುಸ್ಸೂಚನೆ ಇದ್ದ ಕಾರಣ ಯಡವನಹಳ್ಳಿ ಗ್ರಾಮಸ್ಥರು ಹಲವು ದಿನಗಳ ಹಿಂದೆ ಮರ ನೆಲಕ್ಕುರುಳಿಸುವಂತೆ ಚೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಹೀಗಿದ್ದರೂ ಸಹ ಚೆಸ್ಕಾಂ ಇಲಾಖೆಯವರು ಈ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ ಕಾರಣ ಇಂತಹ ಅವಘಡ ಸಂಭವಿದೆ. ಘಟನೆಗೆ ಸಂಪೂರ್ಣವಾಗಿ ಚೆಸ್ಕಾಂ ಅಧಿಕಾರಿಗಳೇ ಕಾರಣವಾಗಿದ್ದು, ಇದರಿಂದ ಆಗಿರುವ ನಷ್ಟವನ್ನು ಇಲಾಖೆ ಅಧಿಕಾರಿ ಭರಿಸಬೇಕೆಂದು ಸ್ಥಳೀಯರಾದ ಮಹದೇವಪ್ರಸಾದ್ ಒತ್ತಾಯಿಸಿದ್ದಾರೆ.