Advertisement
ಕೊಳ್ನಾಡು ಗ್ರಾಮದ ಕರೈ ಜಂಕ್ಷನ್ ಸುತ್ತಮುತ್ತಲಿನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮತ್ತು ಮರ ಪಕ್ಕದಲ್ಲಿ ಹಾದು ಹೋಗಿದ್ದ ಎಚ್.ಟಿ. ಲೈನ್ ಮೇಲೆ ಮರ ಬಿದ್ದಿದೆ. ಈ ರಭಸಕ್ಕೆ 8 ವಿದ್ಯುತ್ ಕಂಬಗಳು ಉರುಳಿದ್ದು, ಇನ್ನೂ ಕೆಲವು ಕಂಬಗಳು ರಸ್ತೆಗೆ ವಾಲಿ ನಿಂತಿವೆ. ಪರಿಣಾಮವಾಗಿ ವಿಟ್ಲ ಸಾಲೆತ್ತೂರು ರಸ್ತೆ ಸಂಚಾರ ಅರ್ಧ ಗಂಟೆ ಕಾಲ ಸ್ಥಗಿತಗೊಂಡಿತ್ತು. ವಾಹನಗಳನ್ನು ಬೇರೆ ರಸ್ತೆ ಮೂಲಕ ಕಳುಹಿಸಲಾಯಿತು.
ಕೊಳ್ನಾಡು ಗ್ರಾಮ ಪಂಚಾಯತ್, ಅರಣ್ಯ ಇಲಾಖೆ ಹಾಗೂ ಕರೈ ಫ್ರೆಂಡ್ಸ್ ತಂಡದ ಕಾರ್ಯಕರ್ತರು ಜತೆಯಾಗಿ ಕಾರ್ಯಾಚರಣೆ ನಡೆಸಿ ಮರ ಹಾಗೂ ವಿದ್ಯುತ್ ಕಂಬಗಳನ್ನು ರಸ್ತೆಯಿಂದ ತೆರವುಗೊಳಿಸಿದರು. ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಅವರು ಮೆಸ್ಕಾಂ ಇಲಾಖೆಗೆ ಮಾಹಿತಿ ನೀಡಿದ್ದು, ಕಂಬಗಳ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸದಸ್ಯ ಪವಿತ್ರ ಪೂಂಜ, ಮೆಸ್ಕಾಂ ಶಾಖಾಧಿಕಾರಿ ಪ್ರಸನ್ನ ಮೊದಲಾದವರು ಭೇಟಿ ನೀಡಿ ತುರ್ತು ಕಾಮಗಾರಿಗೆ ಕ್ರಮಕೈಗೊಂಡಿದ್ದಾರೆ.
Related Articles
ಸುರತ್ಕಲ್-ಸಾಲೆತ್ತೂರು-ಕಬಕ ರಾಜ್ಯ ಹೆದ್ದಾರಿಯ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದೆ. ಈ ಸಂದರ್ಭ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಹಾಗೂ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು ಕೊಳ್ನಾಡು ಗ್ರಾ.ಪಂ. ನಿರ್ಣಯ ಕೈಗೊಂಡು ಪತ್ರ ಬರೆಯಲಾಗಿತ್ತು. ಆದರೆ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ನಿರ್ಲಕ್ಷ್ಯ ವಹಿಸಿದ್ದು, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಲೋಕೋಪಯೋಗಿ ಇಲಾಖೆಯಲ್ಲಿ ವಿಚಾರಿಸಿದಾಗ ಈಗಾಗಲೇ ಮೆಸ್ಕಾಂ ಇಲಾಖೆಗೆ 64 ಲಕ್ಷ ರೂ. ಹಣ ಪಾವತಿಸಲಾಗಿದೆ ಎಂದು ತಿಳಿಸಿದೆ. ಆದರೆ ಮೆಸ್ಕಾಂ ಇಲಾಖೆಯವರು ನಮಗೆ ಹಣ ಪಾವತಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಎರಡು ಇಲಾಖೆಗಳ ಹೊಂದಾಣಿಕೆ ಸಮಸ್ಯೆಯಿಂದ ಕಂಬಗಳ ಸ್ಥಳಾಂತರ ವಾಗಿಲ್ಲ ಎಂದು ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಉದಯವಾಣಿಗೆ ತಿಳಿಸಿದ್ಧಾರೆ.
Advertisement