ವಿಟ್ಲ: ಜಾಗದಲ್ಲಿ ವಿದ್ಯುತ್ ಲೈನ್ ಹಾದು ಹೋದ ವಿಚಾರಕ್ಕೆ ಸಂಬಂಧಿಸಿ ನಡೆದ ಹಲ್ಲೆ ಪ್ರಕರಣದಲ್ಲಿ ಇತ್ತಂಡದವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ. 13ರಂದು ವಿದ್ಯುತ್ ಲೈನ್ ಹಾದು ಹೋದ ವಿಚಾರದಲ್ಲಿ ಸಾಲೆತ್ತೂರು ಗ್ರಾಮದ ಚೆಂಬರಕಲ್ಲು ನಿವಾಸಿ ಕೃಷ್ಣ ನಾಯ್ಕ ಅವರ ಪತ್ನಿ ಲೀಲಾ (54) ದೂರುದಾರರಾಗಿದ್ದರು. ಈ ಪ್ರಕರಣದಲ್ಲಿ ಕುಶ, ಲವ, ನಾರಾಯಣ ನಾಯ್ಕ, ಕೃಷ್ಣ ನಾಯ್ಕ ಆರೋಪಿಗಳಾಗಿದ್ದಾರೆ. ಲೀಲಾ ಅವರು ತಮ್ಮ ಜಾಗದಲ್ಲಿ ವಿದ್ಯುತ್ ಲೈನ್ ಎಳೆದಿರುವ ವಿಚಾರವಾಗಿ ಕುಶ ನಾಯ್ಕ ಅವರನ್ನು ಪ್ರಶ್ನಿಸಿದಾಗ ಬೈದು, ಆಕೆಗೆ ಸ್ಕೂಟರಿನಿಂದ ತಾಗಿಸಿದ್ದಲ್ಲದೆ ಆಕೆಯ ಪುತ್ರ ಸುನಿಲ್‌ಗೆ ಹೊಡೆದು ದೂಡಿ ಹಾಕಿದ್ದರು. ಅದೇ ವೇಳೆ ಕಾರೊಂದರಲ್ಲಿ ಬಂದ ಕುಶನ ಸಹೋದರರಾದ ಲವ, ನಾರಾಯಣ ನಾಯ್ಕ, ಕೃಷ್ಣ ನಾಯ್ಕ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಕರೋಪಾಡಿ ಗ್ರಾಮದ ಪಡ್ಪು ಆನೆಕಲ್ಲು ನಿವಾಸಿ ರಾಮ ನಾಯ್ಕ ಅವರ ಪುತ್ರ ನಾರಾಯಣ ನಾಯ್ಕ ಅವರು ಪ್ರತಿದೂರು ನೀಡಿದ್ದು, ಪ್ರಕರಣದಲ್ಲಿ ಸುರೇಶ್, ಸುನೀಲ್, ರೋಹಿತ್, ಕೃಷ್ಣ ನಾಯ್ಕ ಆರೋಪಿಗಳಾಗಿದ್ದಾರೆ. ಕರೋಪಾಡಿ ಗ್ರಾಮದ ಪಡು³ವಿನಲ್ಲಿ ಆರೋಪಿಗಳಾದ ಸುರೇಶ್, ಸುನಿಲ್, ರೋಹಿತ್ ಹಾಗೂ ಕೃಷ್ಣ ನಾಯ್ಕ ಅವರು ಕುಶನ ಸ್ಕೂಟರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡ ನಾನು ಅಲ್ಲಿಗೆ ತೆರಳಿದಾಗ ನನ್ನ ಮೇಲೆಯೂ ತಂಡ ಹಲ್ಲೆ ನಡೆಸಿದ್ದು, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ನಾರಾಯಣ ನಾಯ್ಕ ಅವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪರಸ್ಪರ ಪ್ರಕರಣ ದಾಖಲಿಸಿಕೊಂಡಿದ್ದಾರೆ.