Advertisement
ಕಟ್ಟಡ ಕಾರ್ಮಿಕರಿಗೆ ಕಟ್ಟಡ ಕಾಮಗಾರಿಯಂತಹ ಕಷ್ಟದ ಕೆಲಸಕ್ಕಿಂತ ಶ್ರಮವಿಲ್ಲದ ಚುನಾವಣಾ ಪ್ರಚಾರಸಭೆ, ರ್ಯಾಲಿಗಳೇ ಈಗ ಪ್ರೀತಿಪಾತ್ರವಾಗಿದ್ದು, ರಾಜಕೀಯ ಪಕ್ಷಗಳಿಗೂ ಇವರು ಸುಲಭವಾಗಿ ದೊರೆಯುವುದರಿಂದ ನಿರ್ಮಾಣ ಕಾಮಗಾರಿಗಳ ಮೇಲೆ ಹೊಡೆತ ಬಿದ್ದಿದೆ.
Related Articles
Advertisement
ಸದಾ ಕಷ್ಟದ ಕೆಲಸಗಳಲ್ಲಿ ಭಾಗಿಯಾಗುವ ಕಾರ್ಮಿಕರಿಗೆ ರ್ಯಾಲಿ ಹಾಗೂ ಸಮಾವೇಶಗಳಲ್ಲಿ ಸಂಗೀತ, ನೃತ್ಯದಂತಹ ಮನರಂಜನೆ ಸಹ ದೊರೆಯುತ್ತದೆ. ಅಷ್ಟೇ ಅಲ್ಲ, ತಿಂಡಿ-ಊಟದ ಜತೆಗೆ ಯಾವುದೇ ಕಷ್ಟದ ಕೆಲಸವಿಲ್ಲದೆ ಒಂದಷ್ಟು ಹಣವೂ ಸಿಗುತ್ತದೆ.
ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಕಾರ್ಮಿಕರು ಕೆಲಸಕ್ಕೆ ಬಾರದೇ ಇರುವುದು ಸಾಮಾನ್ಯ. ಹೀಗಾಗಿ ಚುನಾವಣೆ ಮುಗಿಯುವವರೆಗೆ ಕಾಮಗಾರಿ ನಿಗದಿತ ಮಟ್ಟದಲ್ಲಿ ನಡೆಯುವುದು ಕಷ್ಟ ಎನ್ನುತ್ತಾರೆ ಕಟ್ಟಡ ನಿರ್ಮಾಣ ಗುತ್ತಿಗೆದಾರರೊಬ್ಬರು.
ಸಣ್ಣ ಗುತ್ತಿಗೆದಾರರಿಗೆ ಸಮಸ್ಯೆ: ದೊಡ್ಡ ಗುತ್ತಿಗೆದಾರರು ತಮ್ಮಲ್ಲಿ ಕಾಯಂ ಕಾರ್ಮಿಕರನ್ನು ಇಟ್ಟುಕೊಳ್ಳುತ್ತಾರೆ. ಆದರೆ, ಸ್ಥಳೀಯ ಹಾಗೂ ಸಣ್ಣ ಪ್ರಮಾಣದ ಕಟ್ಟಡ ನಿರ್ಮಾಣ ಗುತ್ತಿಗೆದಾರರು ಕೆಲಸ ಇದ್ದಾಗ ಮಾತ್ರ ಕಾರ್ಮಿಕರನ್ನು ಕರೆಸಿಕೊಳ್ಳುತ್ತಾರೆ.
ಹೀಗಾಗಿ ಅವರು ಹೆಚ್ಚಾಗಿ ಬೆಂಗಳೂರು ಹಾಗೂ ರಾಜ್ಯ ವಿವಿಧ ಜಿಲ್ಲೆಗಳ ಕಾರ್ಮಿಕರನ್ನು ಬಳಸಿಕೊಳ್ಳುತ್ತಾರೆ. ಆದರೆ, ಚುನಾವಣೆಯ ಹಿನ್ನೆಲೆಯಲ್ಲಿ ನಗರದಲ್ಲಿರುವ 4 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರ ಪೈಕಿ ಶೇ.70ರಷ್ಟು ಕಾರ್ಮಿಕರು ಕೆಲಸಕ್ಕೆ ಗೈರಾಗುತ್ತಿದ್ದು,
ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗದೆ ಗುತ್ತಿಗೆದಾರರು ತೊಂದರೆ ಅನುಭವಿಸುವಂತಾಗಿದೆ. ಇನ್ನು ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆಗಳು ಹೊರ ರಾಜ್ಯದ ಕಾರ್ಮಿಕರನ್ನು ಹೆಚ್ಚಾಗಿ ಕೆಲಸಕ್ಕೆ ನೇಮಿಸಿಕೊಳ್ಳುವುದರಿಂದ ಬೃಹತ್ ಯೋಜನೆಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಖಾಸಗಿ ಬಿಲ್ಡರ್ ಒಬ್ಬರು ಹೇಳುತ್ತಾರೆ.
ಎರಡು ತಿಂಗಳ ಹಿಂದೆ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ಒಪ್ಪಿಕೊಂಡಿದ್ದು, ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಮಾಲೀಕರಿಗೆ ಭರವಸೆ ನೀಡಿದ್ದೆ. ಆದರೆ, ಚುನಾವಣೆ ಘೋಷಣೆ ನಂತರ ಕಾರ್ಮಿಕರೇ ಸಿಗುತ್ತಿಲ್ಲ. ಹೀಗಾಗಿ ನಿರ್ಮಾಣ ಮುಂದೆ ಸಾಗುತ್ತಿಲ್ಲ.-ಮುನಾಚಾರಿ, ಗುತ್ತಿಗೆದಾರರು ನೀತಿ ಸಂಹಿತೆ ಜಾರಿಯಾದ ಬಳಿಕ ಕಟ್ಟಡ ನಿರ್ಮಾಣ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಗೈರಾಗಿರುವುದು ಕಂಡುಬಂದಿದೆ. ಕೆಲವರು ಚುಣಾವಣಾ ರ್ಯಾಲಿ ಹಾಗೂ ಸಮಾವೇಶದಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಹಣ ದೊರೆಯುತ್ತದೆ ಎಂಬ ಕಾರಣಕ್ಕೆ ಕೆಲಸಕ್ಕೆ ಗೈರಾಗಿರುವ ಸಾಧ್ಯತೆಯಿದೆ.
-ಎನ್.ಪಿ.ಸಾಮಿ, ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕೇಂದ್ರ ಒಕ್ಕೂಟದ ಅಧ್ಯಕ್ಷ * ವೆಂ.ಸುನೀಲ್‌ಕುಮಾರ್