Advertisement

ದೇಶದ ಭವಿಷ್ಯ ನಿರ್ಧರಿಸಲಿದೆ ಚುನಾವಣೆ: ಸಿಂಧಿಯಾ

05:31 PM May 05, 2018 | Team Udayavani |

ಚಿಕ್ಕೋಡಿ: ವಿಧಾನಸಭೆ ಚುನಾವಣೆ ದೇಶದ ಭವಿಷ್ಯ ನಿರ್ಧರಿಸಲಿದ್ದು, ಈ ಫಲಿತಾಂಶದಿಂದ ಕೇಂದ್ರ ಸರಕಾರದ ದಿಸೆ ಹಾಗೂ ದೃಷ್ಟಿ ಬದಲಾಗಲಿದೆ ಎಂದು ಮಧ್ಯಪ್ರದೇಶದ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.

Advertisement

ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪ್ರಧಾನಿ ಮೋದಿ ಕಳೆದ ಐದು ವರ್ಷಗಳಿಂದ ದೇಶದ ಭವಿಷ್ಯ ಬದಲಾಯಿಸುವ ಕುರಿತು ಭಾಷಣ ಮಾಡುತ್ತಲೇ ದೇಶ ದೇಶ ಸುತ್ತುತ್ತಲೇ ಕಾಲ ಹರಣ ಮಾಡುತ್ತಿದ್ದಾರೆ. ಇದರಿಂದ ದೇಶದ ವ್ಯವಸ್ಥೆಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಬದಲಾವಣೆಯಾಗಿಲ್ಲ. ಭ್ರಷ್ಟಾಚಾರ ಬಗ್ಗೆ ಮಾತನಾಡುವ ಸರಕಾರ ಯಡ್ಡಿ-ರೆಡ್ಡಿ ಮೂಲಕ ಚುನಾವಣೆ ಎದುರಿಸುತ್ತಿದೆ ಎಂದರು.

ದೇಶದಲ್ಲಿ ಪ್ರತಿವರ್ಷ 12 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಲಿಲ್ಲ. ಕೇಂದ್ರ ನೀರವ ಮೋದಿ, ಲಲಿತ ಮೋದಿ, ವಿಜಯ ಮಲ್ಯ ಅಂತಹ ಉದ್ಯಮಿಗಳ ಸಾಲಮನ್ನಾ ಮಾಡಲು
ಮುಂದಾಗಿದ್ದಾರೆಯೇ ಹೊರತು ಅವರಿಗೆ ಬಡ ರೈತರು ನೆನಪಾಗಿಲ್ಲ. ರಾಜ್ಯ ಸರಕಾರ ಪ್ರತಿ ರೈತರ 50 ಸಾವಿರ ಸಾಲಮನ್ನಾ ಮಾಡಿದೆ. ಆದರೆ ಕೇಂದ್ರ ಸರಕಾರ ಡಿಜಿಟಲ್‌ ವ್ಯವಸ್ಥೆಗೆ ಒತ್ತು ನೀಡಿದೆ. ಆದರೆ ಎಟಿಎಂಗಳಲ್ಲಿಯೂ ಹಣ ಸಿಗದ ವಾತಾವರಣ ನಿರ್ಮಿಸಿದೆ ಎಂದರು.

ಸಂಸದ ಪ್ರಕಾಶ ಹುಕ್ಕೇರಿ ಮಾತನಾಡಿ, ರಾಜ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕಬ್ಬು ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡಲು 350 ರೂ.ನಂತೆ 850 ಕೋಟಿ ಸಹಾಯಧನ ಬಿಡುಗಡೆ ಮಾಡಿದ ಕೀರ್ತಿ ಕಾಂಗ್ರೆಸ್‌ ಸರಕಾರಕ್ಕೆ ಸಲ್ಲುತ್ತದೆ. ಚಿಕ್ಕೋಡಿ ಸದಲಗಾ ಮತಕ್ಷೇತ್ರದಲ್ಲಿ ಗಣೇಶ ಹುಕ್ಕೇರಿ 117 ಏತ ನೀರಾವರಿ ಯೋಜನೆಗಳ ಮೂಲಕ 16,832 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ. ವಿರೋಧಿ ಗಳು ನಾವು ಶಿಕ್ಷಣಕ್ಕೆ ಒತ್ತು ನೀಡಿಲ್ಲ ಎಂಬ ಆರೋಪ ಮಾಡುತ್ತಿದ್ದು, ಮತಕ್ಷೇತ್ರದಲ್ಲಿ ಎರಡು ಕೇಂದ್ರೀಯ ವಿದ್ಯಾಲಯ, ಜಿಟಿಟಿಸಿ ಕೇಂದ್ರ ಸೇರಿದಂತೆ 7 ವಿವಿಧ ವಸತಿ ಶಾಲೆಗಳನ್ನು ಮಂಜೂರು ಮಾಡಿಸಿರುವ ಮಾಹಿತಿ ಅವರಿಗಿಲ್ಲವೇ ಎಂದು ಸಂಸದ ಪ್ರಕಾಶ ಹುಕ್ಕೇರಿ ಹರಿಹಾಯ್ದರು.

ಕಾಂಗ್ರೆಸ್‌ನ ಸುಸ್ಥಿರ ಆಡಳಿತಕ್ಕೆ ರಾಜ್ಯದೆಲ್ಲೆಡೆ ಉತ್ತಮ ಜನಬೆಂಬಲ ವ್ಯಕ್ತವಾಗಿದೆ. ಚಿಕ್ಕೋಡಿ-ಸದಲಗಾ ಮತಕ್ಷೇತ್ರದಿಂದ ಗಣೇಶ ಹುಕ್ಕೇರಿ ಹಾಗೂ ನಿಪ್ಪಾಣಿ ಮತಕ್ಷೇತ್ರದಿಂದ ಕಾಕಾಸಾಹೇಬ ಪಾಟೀಲ ಆಯ್ಕೆಯ
ಜವಾಬ್ದಾರಿಯನ್ನು ವರಿಷ್ಠರು ನನಗೆ ನೀಡಿದ್ದು,  ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಲಿದೆ ಎಂದರು.

Advertisement

ಕಳೆದ ನಾಲ್ಕು ವರ್ಷಗಳ ಆಡಳಿತದಲ್ಲಿ ಗಣೇಶ ಹುಕ್ಕೇರಿ ಮತಕ್ಷೇತ್ರದ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿದ್ದು ಮುಂಬರುವ ದಿನಗಳಲ್ಲಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಆಯ್ಕೆಗೊಳಿಸಬೇಕು. ಮೇ 8ರಂದು ಕೇಂದ್ರದ ಪ್ರಭಾವಿ ನಾಯಕರು ಪ್ರಚಾರಕ್ಕಾಗಿ ಆಗಮಿಸಲಿದ್ದಾರೆ ಎಂದರು. ಜವಾಹರ ಸಹಕಾರಿ ಸಕ್ಕರೆ ಕಾರಖಾನೆ ಅಧ್ಯಕ್ಷ ಹಾಗೂ ಮಾಜಿ ಸಂಸದ ಕಲ್ಲಪ್ಪ ಅವಾಡೆ, ಮಾಜಿ ಸಚಿವ ವೀರಕುಮಾರ ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ರವೀಂದ್ರ ಮಿರ್ಜೆ, ಪುರಸಭೆ ಮಾಜಿ ಅಧ್ಯಕ್ಷರಾದ ರಾಮಾ ಮಾನೆ, ನರೇಂದ್ರ ನೇರ್ಲಿಕರ, ಪ್ರಭಾಕರ ಕೋರೆ, ಶೇಖರ ಮುಂಡೆ, ಸುದರ್ಶನ ಖೋತ, ಅನೀಲ ಪಾಟೀಲ, ಖಾದರ್‌ ಕಮತೆ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next