Advertisement

12 ಸ್ಥಾಯಿ ಸಮಿತಿಗಳಿಗೆ ನಾಳೆ ಚುನಾವಣೆ

12:46 AM Dec 29, 2019 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ 12 ಸ್ಥಾಯಿ ಸಮಿತಿಗಳಿಗೆ ಡಿ.30ರಂದು ಚುನಾವಣೆ ನಡೆಸಲು ಕೆಂಪೇಗೌಡ ಪೌರ ಸಭಾಂಗಣ ದಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ. ಮೇಯರ್‌ ಆಯ್ಕೆ ವೇಳೆಯೇ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರ ಆಯ್ಕೆ ನಡೆಸ ಬೇಕಿತ್ತು. ಆದರೆ ಚುನಾವಣೆ ಗೊಂದಲದಿಂ ದಾಗಿ ಮುಂದೂಡಲಾಗಿತ್ತು.

Advertisement

ಡಿ.4ರಂದು ನಿಗದಿಯಾಗಿದ್ದ ಚುನಾವಣೆ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಯಲ್ಲಿ ಮತ್ತೂಮ್ಮೆ ಮುಂದೂಡಲ್ಪಟ್ಟಿತ್ತು. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ಮಾಡಿ ದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ 18 ಸದಸ್ಯರನ್ನು ಉಚ್ಚಾಟಿಸಿದ್ದು, ಇವರಿಗೆ ಸ್ಥಾಯಿ ಸಮಿತಿಯಲ್ಲಿ ಸ್ಥಾನ ನೀಡಬಾರದು

ಹಾಗೂ ಅವರ ಅನರ್ಹತೆ ನಿರ್ಧಾರವಾಗುವವರೆಗೆ ಸ್ಥಾಯಿ ಸಮಿತಿ ಚುನಾವಣೆ ಮುಂದೂಡುವಂತೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಆಯುಕ್ತರಿಗೆ ಶುಕ್ರವಾರ ಮನವಿ ಪತ್ರ ನೀಡಿದ್ದರು. ಆದರೆ, ಕೆಎಂಸಿ ಆ್ಯಕ್ಟ್ ಪ್ರಕಾರ ಪಕ್ಷದಿಂದ ಉಚ್ಚಾಟಿಸಿದರೂ ಹಕ್ಕು ಚಲಾವಣೆಗೆ ಯಾವುದೇ ಅಡ್ಡಿ ಇಲ್ಲದಿರುವುದರಿಂದ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ಪಡೆದಿದ್ದಾರೆ.

ಯಾವ್ಯಾವು ಸ್ಥಾಯಿ ಸಮಿತಿ?: ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ, ಅಪೀಲು ಸ್ಥಾಯಿ ಸಮಿತಿ, ತೋಟಗಾರಿಕೆ ಸ್ಥಾಯಿ ಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಆಡಳಿತ ಸುಧಾರಣಾ ಸ್ಥಾಯಿ ಸಮಿತಿ, ನಗರ ಯೋಜನೆ ಸ್ಥಾಯಿ ಸಮಿತಿ, ಬೃಹತ್‌ ಕಾಮಗಾರಿ ಸ್ಥಾಯಿ ಸಮಿತಿ, ವಾರ್ಡ್‌ ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ, ಶಿಕ್ಷಣ ಸ್ಥಾಯಿ ಸಮಿತಿ, ಆರೋಗ್ಯ ಸ್ಥಾಯಿ ಸಮಿತಿ, ಮಾರುಕಟ್ಟೆ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಮತ್ತು ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ.

ಏಳು ತಿಂಗಳ ಅವಧಿ: ಮೇಯರ್‌ ಮತ್ತು ಉಪಮೇಯರ್‌ ಅವಧಿಯಷ್ಟೇ ಸ್ಥಾಯಿ ಸಮಿತಿ ಸದಸ್ಯರ ಅವಧಿ ಇದ್ದು, ಮೇಯರ್‌ ಚುನಾವಣೆ ವೇಳೆ ನಡೆಯಬೇಕಾಗಿದ್ದ ಚುನಾವಣೆ ಮುಂದೂಡಿ ಡಿಸೆಂಬರ್‌ ತಿಂಗಳಾಂತ್ಯದಲ್ಲಿ ಚುನಾವಣೆ ನಡೆಯುವು ದರಿಂದ ಸದಸ್ಯರ ಅಧಿಕಾರಾವಧಿ ಏಳು ತಿಂಗಳು ಮಾತ್ರ ಇರಲಿದೆ. 2020 ಸೆಪ್ಟಂಬರ್‌ ತಿಂಗಳಾಂತ್ಯದಲ್ಲಿ ಮೇಯರ್‌ ಅವಧಿ ಮುಗಿಯಲಿದ್ದು, ನಂತರ ಪಾಲಿಕೆ ಚುನಾವಣೆ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next