Advertisement

3ನೇ ಬಾರಿಯೂ ನಡೆಯದ ಚುನಾವಣೆ

12:24 AM Dec 31, 2019 | Lakshmi GovindaRaj |

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಯ ಸದಸ್ಯ ಸ್ಥಾನಕ್ಕೆ ಪಕ್ಷೇತರರು ಸೇರಿದಂತೆ ಪಾಲಿಕೆಯ ಯಾವುದೇ ಸದಸ್ಯರು ಸೋಮವಾರ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಚುನಾವಣೆಯನ್ನು ಮೂರನೇ ಬಾರಿಯೂ ಮುಂದೂಡಲಾಯಿತು.

Advertisement

ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ಸಭೆ ನಡೆಸುವುದಕ್ಕೆ ನಗರದ ಶಾಸಕರು, ಸಂಸದರು, ಬಿಬಿಎಂಪಿ ಸದಸ್ಯರು ಸೇರಿದಂತೆ ಕೌನ್ಸಿಲ್‌ನ ಒಟ್ಟು ಸದಸ್ಯರಲ್ಲಿ 1/3 ರಷ್ಟು ಸದಸ್ಯರು ಹಾಜರಿರಬೇಕು. ಆದರೆ, ಸಮಿತಿ ಚುನಾವಣೆ ಸಭೆಗೆ ಸದಸ್ಯರು ಹಾಜರಾಗದ ಕಾರಣ ಪ್ರಾದೇಶಿಕ ಆಯುಕ್ತ ತುಷಾರ್‌ ಗಿರಿನಾಥ್‌ ಚುನಾವಣಾ ಸಭೆಯನ್ನು ಮುಂದೂಡಿದರು.

ಈ ಹಿಂದೆ ಅ.1 ಹಾಗೂ ಡಿ.4 ರಂದು ಸಹ ಪಾಲಿಕೆ ಸದಸ್ಯರು ಸ್ಥಾಯಿ ಸಮಿತಿ ಸದಸ್ಯಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರು ಚುನಾವಣೆ ಮುಂದೂಡಿದ್ದರು.ಸೋಮವಾರವೂ ಯಾವುದೇ ಸದಸ್ಯರು ಸ್ಥಾಯಿ ಸಮಿತಿ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ. ಹೀಗಾಗಿ, ಅನಿವಾರ್ಯವಾಗಿ ಚುನಾವಣೆ ಮುಂದೂಡಲಾಯಿತು.

ನಿಗದಿಯಂತೆ ಸೋಮವಾರ ಬೆಳಗ್ಗೆ 11.30ಕ್ಕೆ ಬಿಬಿಎಂಪಿ ಕೌನ್ಸಿಲ್‌ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತ (ಪ್ರಭಾರಿ) ತುಷಾರ್‌ ಗಿರಿನಾಥ್‌, ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೇಜಾವರ ಶ್ರೀಗಳಿಗೆ ಸಂತಾಪ ಸೂಚಿಸಿ, ಚುನಾವಣೆ ಮುಂದೂಡಲಾಯಿತು.

ನಷ್ಟ ಭರಿಸಲು ವಿಪಕ್ಷದ ಗೌರವಧನ ತ್ಯಾಗ: ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆಯಿಂದ ಪಾಲಿಕೆಗೆ ನಷ್ಟವುಂಟಾಗಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಸದಸ್ಯರ ಗೌರವಧನ ಬಿಟ್ಟುಕೊಡಲಾಗುವುದು ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್‌ ವಾಜಿದ್‌, ಆಡಳಿತ ಪಕ್ಷದ ವೈಫ‌ಲ್ಯದಿಂದ ಸಾರ್ವಜನಿಕರ ತೆರಿಗೆ ಹಣ ಪೋಲಾಗಿದೆ. ಬಿಜೆಪಿಯಲ್ಲಿನ ಒಳಜಗಳ, ಭಿನ್ನಾಭಿಪ್ರಾಯದಿಂದ ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆಯಾಗಿದೆ.

Advertisement

ಇದರಿಂದ ಪಾಲಿಕೆಗೆ ನಷ್ಟವುಂಟಾಗಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಪಾಲಿಕೆ ಸದಸ್ಯರ ಗೌರವಧನವನ್ನು ಬಿಟ್ಟುಕೊಡಲಿದ್ದೇವೆ. ಎಷ್ಟು ತಿಂಗಳ ಗೌರವಧನ ಬಿಟ್ಟುಕೊಡಬೇಕು ಎನ್ನುವ ಬಗ್ಗೆ ಮಂಗಳವಾರ ಚರ್ಚೆ ಮಾಡಲಾಗುವುದು. ಅಂದಾಜು 20 ಲಕ್ಷ ರೂ. ನೀಡುವ ಗುರಿ ಇದೆ. ಈ ನಷ್ಟಕ್ಕೆ ಪಾಲಿಕೆಯ ಆಡಳಿತ ಪಕ್ಷದ ನಾಯಕರು ನೇರ ಕಾರಣ.ಹೀಗಾಗಿ, ಅವರೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಬಿಬಿಎಂಪಿಯ ಸ್ಥಾಯಿ ಸಮಿತಿಗಳ ಚುನಾವಣೆ ಎರಡು ಬಾರಿ ಮುಂದೂಡಿಕೆಯಾಗಿ ಪಾಲಿಕೆಗೆ 10 ಲಕ್ಷಕ್ಕೂ ಹೆಚ್ಚು ಮೊತ್ತ ನಷ್ಟವುಂಟಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಿಂದ ಟೀಕೆ ವ್ಯಕ್ತವಾಗಿದ್ದು ಆಡಳಿತ ಪಕ್ಷಕ್ಕೆ ಮುಜುಗರವುಂಟು ಮಾಡಲು ಪಾಲಿಕೆಯ ವಿರೋಧ ಪಕ್ಷದ ನಾಯಕರು ಮುಂದಾಗಿದ್ದಾರೆ.

ಅನರ್ಹತೆ ದೂರಿನ ಪರಿಶೀಲನೆ
ಬೆಂಗಳೂರು: ಕಾಂಗ್ರೆಸ್‌ ಪಕ್ಷದಿಂದ ಉಚ್ಛಾಟನೆ ಮಾಡಲಾಗಿರುವ 14 ಪಾಲಿಕೆ ಸದಸ್ಯರನ್ನು ಅಮಾನತು ಮಾಡುವಂತೆ ಬಿಬಿಎಂಪಿ ವಿರೋಧ ಪಕ್ಷದ ನಾಯಕರು ನೀಡಿರುವ ದೂರಿನ ಬಗ್ಗೆ ಪರಿಶೀಲಿಸಲಾಗುವುದು ಎಂದು ಪ್ರಾದೇಶಿಕ ಆಯುಕ್ತ (ಪ್ರಭಾರಿ) ತುಷಾರ್‌ ಗಿರಿನಾಥ್‌ ಹೇಳಿದರು.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ 14 ಸದಸ್ಯರನ್ನು ಅಮಾನತುಗೊಳಿಸುವಂತೆ ಅಬ್ದುಲ್‌ ವಾಜೀದ್‌, ಬಿಬಿಎಂಪಿ ಆಯುಕ್ತರಿಗೆ ದೂರು ನೀಡಿದ್ದಾರೆ. ಸ್ಥಳೀಯ ಸಂಸ್ಥೆಗಳ ನಿಯಮ 3(1)(ಎ) ಮತ್ತು (ಬಿ) ಅನ್ವಯ ಅನರ್ಹಗೊಳಿಸಲು ಅವಕಾಶವಿದೆ ಎಂದರು.

ವಿಪ್‌ ಉಲ್ಲಂಘನೆ, ಪಕ್ಷದ ಸೂಚನೆಗೆ ವ್ಯತಿರಿಕ್ತವಾಗಿ ನಡೆದುಕೊಂಡಿರುವ ಬಗ್ಗೆ ದೂರಿನ ಜತೆ ಯಾವುದೇ ದಾಖಲೆ ಸಲ್ಲಿಸಿಲ್ಲ. ಈ ಸಂಬಂಧ ದಾಖಲೆ ಸಲ್ಲಿಸುವಂತೆ ಸೂಚನೆ ನೀಡಲಾಗುವುದು. ಅಲ್ಲದೇ, ಪಕ್ಷ ವಿರೋಧಿ ಚಟುವಟಿಕೆ ನಡೆದ 15 ದಿನದಲ್ಲಿ ಆಯುಕ್ತರಿಗೆ ದೂರು ನೀಡಬೇಕು. ಈ ಎಲ್ಲ ಅಂಶ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ಇನ್ನು ಜೆಡಿಎಸ್‌ನ 4 ಸದಸ್ಯರ ಅಮಾನತು ಬಗ್ಗೆ ಯಾರೂ ದೂರು ನೀಡಿಲ್ಲ ಎಂದು ಹೇಳಿದರು.

ಆಯುಕ್ತರಿಂದ ತಪ್ಪು ಮಾಹಿತಿ: ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷ ನಾಯಕ ಅಬ್ದುಲ್‌ ವಾಜೀದ್‌, ಪ್ರಾದೇಶಿಕ ಆಯುಕ್ತರು ತಪ್ಪು ಮಾಹಿತಿ ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆದು 15 ದಿನದ ಒಳಗೆ ದೂರು ನೀಡಬೇಕು ಎನ್ನುವ ಯಾವುದೇ ನಿಯಮವಿಲ್ಲ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಸದಸ್ಯರನ್ನು ಪ್ರಾದೇಶಿಕ ಆಯುಕ್ತರು ಅಮಾನತುಗೊಳಿಸದೇ ಇದ್ದರೆ ಹೈಕೋರ್ಟ್‌ ಮೊರೆ ಹೋಗಲಾಗುವುದು ಎಂದು ಎಚ್ಚರಿಸಿದರು.

ಕೋರಂ ಇಲ್ಲದ ಕಾರಣ ಚುನಾವಣೆ ಮುಂದೂಡಲಾಗಿದೆ. ಮತ್ತೆ ಚುನಾವಣೆ ನಡೆಸುವ ಕುರಿತು ಪರಿಶೀಲಿಸಿ ದಿನಾಂಕ ಪ್ರಕಟಿಸಲಾಗುವುದು.
-ತುಷಾರ್‌ ಗಿರಿನಾಥ್‌, ಪ್ರಾದೇಶಿಕ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next