Advertisement
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕಾಂಗ್ರೆಸ್ ಸೇರಿದ ವಿಜಯಶಂಕರ್ ಅವರ ಜತೆಗೆ ಹುಣಸೂರು ಬಿಜೆಪಿ ಘಟಕದ ಸಾಕಷ್ಟು ಪದಾಧಿಕಾರಿಗಳು ಬಿಜೆಪಿ ತೊರೆದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮೊದಲಾದವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದಾರೆ.
Related Articles
Advertisement
ಇವರೊಂದಿಗೆ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಚ್.ಡಿ.ಕೋಟೆ ಜೆಡಿಎಸ್ ಘಟಕದ ಅಧ್ಯಕ್ಷ ಸುರೇಂದ್ರ ಗೌಡ, ಸರಗೂರು ಜೆಡಿಎಸ್ ಘಟಕದ ಅಧ್ಯಕ್ಷ ರವಿ ಸೇರಿದಂತೆ ಪಕ್ಷದ ಎರಡೂ ಘಟಕಗಳ ಅನೇಕ ಪದಾಧಿಕಾರಿಗಳು, 2008ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದ, ನಾಯಕ ಸಮಾಜದ ಮುಖಂಡರಾದ ದೊಡ್ಡ ನಾಯಕ ಮೊದಲಾದವರು ಕಾಂಗ್ರೆಸ್ ಸೇರಿರುವುದರಿಂದ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಕ್ಷರಶಃ ಇಬ್ಭಾಗವಾದಂತಾಗಿದೆ.
2008ರಲ್ಲಿ ಎಚ್.ಡಿ.ಕೋಟೆ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಬೀಚನಹಳ್ಳಿ ಚಿಕ್ಕಣ್ಣ ಅವರು ಸಂಸದ ಆರ್. ಧ್ರುವನಾರಾಯಣ ಅವರ ಜತೆಗಿನ ವೈಮನಸ್ಯ ದಿಂದ ಬಿಜೆಪಿ ಸೇರಿದ್ದರು. ಆದರೆ, ಹಿಂದೆ ಅದೇ ಕ್ಷೇತ್ರದ ಶಾಸಕರಾಗಿದ್ದ ಕೋಟೆ ಎಂ.ಶಿವಣ್ಣ ಅವರು ಬಿಜೆಪಿ ಜಿಲ್ಲಾಧ್ಯಕ್ಷರಾದ ನಂತರ ಬಿಜೆಪಿ ತೊರೆದು, ಮತ್ತೆ ಕಾಂಗ್ರೆಸ್ ಸೇರ್ಪಡೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ, ಚಿಕ್ಕಣ್ಣ ಕಾಂಗ್ರೆಸ್ ಸೇರ್ಪಡೆಗೆ ಸಂಸದ ಧ್ರುವನಾರಾಯಣ ಅವರು ಅಡ್ಡಗಾಲು ಹಾಕಿದ್ದರು, ಅದೇ ಸಂದರ್ಭದಲ್ಲಿ ಶಾಸಕ ಎಸ್.ಚಿಕ್ಕಮಾದು ಅವರು ಅಕಾಲಿಕ ಮರಣ ಹೊಂದಿದ್ದರಿಂದ ಚಿಕ್ಕಣ್ಣ ಜೆಡಿಎಸ್ ಸೇರಿದರು. ಆದರೆ, ಚಿಕ್ಕಮಾದು ಅವರು ಜಿಲ್ಲೆಯಲ್ಲಿ ನಾಯಕ ಸಮಾಜದ ಪ್ರಭಾವಿಯಾಗಿದ್ದ ಹಿನ್ನೆಲೆಯಲ್ಲಿ ಅವರ ಅಕಾಲಿಕ ಮರಣದಿಂದ ತೆರವಾಗಿರುವ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಚಿಕ್ಕಮಾದು ಕುಟುಂಬದವರನ್ನೇ ಕಣಕ್ಕಿಳಿಸುವುದು ಸೂಕ್ತ ಎಂಬ ಜಿಲ್ಲೆಯ ಜೆಡಿಎಸ್ ಶಾಸಕರ ಸಲಹೆ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು, ಅನಿಲ್ ಚಿಕ್ಕಮಾದು ಅವರಿಗೇ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಆದರೆ, ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೊಡೆತ ನೀಡಬೇಕು ಎಂಬ ಕಾರಣದಿಂದ ಚಿಕ್ಕಮಾದು ಕುಟುಂಬದವರನ್ನು ಕರೆಸಿಕೊಂಡು ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಿಲ್ ಚಿಕ್ಕಮಾದು ಅವರನ್ನು ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಜೆಡಿಎಸ್‌ಗೆ ದೊಡ್ಡ ಹೊಡೆತವನ್ನೇ ನೀಡಿದ್ದಾರೆ.
ಗಿರೀಶ್ ಹುಣಸೂರು