Advertisement

ಕಾಲೇಜ್‌ನಲ್ಲಿ ಮತ್ತೆ ವಿದ್ಯಾರ್ಥಿ ಸಂಘಟನೆಗೆ ಚುನಾವಣೆ?

12:44 PM Feb 21, 2018 | |

ಬೆಂಗಳೂರು: ಎರಡು ದಶಕಗಳಿಂದ ಕಾಲೇಜ್‌ ಕ್ಯಾಂಪಸ್‌ಗಳಲ್ಲಿ ನಿಷೇಧವಾಗಿದ್ದ ವಿದ್ಯಾರ್ಥಿ ಸಂಘಟನೆಗಳಿಗೆ ಚುನಾವಣೆ ನಡೆಸುವ ಕುರಿತಂತೆ ಪರಿಶೀಲನೆ ನಡೆಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಪಕ್ಷದ ವತಿಯಿಂದ ಏರ್ಪಡಿಸಿದ್ದ ನನ್ನ ಕರ್ನಾಟಕ ಎಂಬ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿ, ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ಬರಬೇಕೆಂದರೆ ಕಾಲೇಜ್‌ ಯೂನಿಯನ್‌ಗಳಿಗೆ ಚುನಾವಣೆ ನಡೆಯುವುದು ಸೂಕ್ತ.

ಬೇರೆ ರಾಜ್ಯಗಳಲ್ಲಿ  ಈ ವ್ಯವಸ್ಥೆ ಜಾರಿಯಲ್ಲಿದೆ. ದೆಹಲಿ ವಿಶ್ವ ವಿದ್ಯಾಲಯದಲ್ಲಿ ನಡೆಯುವ ಸ್ಟೂಡೆಂಟ್‌ ಯೂನಿಯನ್‌ ಚುನಾವಣೆ ಇಡೀ ರಾಷ್ಟ್ರದ ಗಮನ ಸೆಳೆದಿದೆ. ಆ ಚುನಾವಣೆಯಲ್ಲಿ ಗೆದ್ದ ವಿದ್ಯಾರ್ಥಿಗಳು ರಾಷ್ಟ್ರೀಯ ನಾಯಕರಾಗುತ್ತಿದ್ದಾರೆ. ಆ ರೀತಿಯಲ್ಲಿ ರಾಜ್ಯದಲ್ಲಿ ವಿದ್ಯಾರ್ಥಿ ನಾಯಕರು ಹುಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಪಕ್ಷಕ್ಕೂ ಪ್ರವೇಶ ಸಿಗಲಿ: ಹಿಂದೆ ಕಾಲೇಜುಗಳಲ್ಲಿ ಗಲಾಟೆಗಳು ಹೆಚ್ಚಾದ ಕಾರಣ ಸ್ಟೂಡೆಂಟ್‌ ಯೂನಿಯನ್‌ ಎಲೆಕ್ಷನ್‌ಗಳನ್ನು ನಿಷೇಧ ಮಾಡಲಾಗಿತ್ತು. ಆದರೆ, ವಿದ್ಯಾರ್ಥಿಗಳೂ ರಾಜಕೀಯದಲ್ಲಿ ಮುಂದೆ ಬರಲು ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣ ಬೆಳೆಸಿಕೊಳ್ಳಲು ಅನುಕೂಲ ಆಗಲಿದೆ ಎಂದರು.

ಸಂವಾದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಯುವ ನಾಯಕರಾದ ದಿನೇಶ್‌ ಗುಂಡೂರಾವ್‌, ಪ್ರಿಯಾಂಕ್‌ ಖರ್ಗೆ, ಕೃಷ್ಣ ಬೈರೇಗೌಡ, ಯು.ಟಿ. ಖಾದರ್‌, ಸಂಸದ ರಾಜೀವ್‌ ಗೌಡ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಸದ್ಯದ ಸಾಮಾಜಿಕ, ರಾಜಕೀಯ, ಧಾರ್ಮಿಕ ವಿಷಯಗಳ ಮೇಲೆ ಸೂಕ್ಷ್ಮ ಪ್ರಶ್ನೆಗಳನ್ನು ಕೇಳಿ ಯುವ ನಾಯಕರನ್ನು ಚಿಂತನೆಗೆ ಹಚ್ಚುವಂತೆ ಮಾಡಿದರು.

Advertisement

ಪ್ರಶ್ನೆಗಳ ಸುರಿಮಳೆ: ಮಹಾರಾಣಿ ಕಾಲೇಜ್‌ನ ಕವಿತಾ ಎನ್ನುವ ವಿದ್ಯಾರ್ಥಿನಿ, ಎಸ್ಸಿ ಎಸ್ಟಿ  ಸಮುದಾಯದ ವಿದ್ಯಾರ್ಥಿಗಳಿಗೆ ಮೀಸಲಾತಿ ಹೆಸರಲ್ಲಿ ಎಲ್ಲ ಸೌಲಭ್ಯ ನೀಡಿ, ಮೇಲ್ವರ್ಗದ ಬಡವರಿಗೆ ಅನ್ಯಾಯ ಮಾಡುತ್ತಿದ್ದೀರಿ ಎನ್ನುವ ಮೂಲಕ ಜಾತಿ ರಾಜಕಾರಣ ಮಾಡುತ್ತಿರುವ ರಾಜಕೀಯ ವ್ಯವಸ್ಥೆಯನ್ನೇ ಪ್ರಶ್ನಿಸಿದರು. ಎಸ್ಸಿ ಎಸ್ಟಿಗೆ ಆದ್ಯತೆ ನೀಡುತ್ತಿರುವುದು ಸಂವಿಧಾನದ ಆಶಯ ಎಂದು ನಾಯಕರು ಸಮಜಾಯಿಷಿ ನೀಡಿದರು.

ಸುಪ್ರೀತಾ ಮತ್ತು ಬಿ.ಎಲ್‌.ಸಂಜಯ್‌ ಎಂಬ ವಿದ್ಯಾರ್ಥಿಗಳು, ರಾಜಕಾರಣದಲ್ಲಿ ದೊಡ್ಡವರ ಮಕ್ಕಳೇ ಅಧಿಕಾರಕ್ಕೆ ಬರುತ್ತಿದ್ದರೆ, ಸಾಮಾನ್ಯ ಜನತೆ ರಾಜಕಾರಣಕ್ಕೆ ಬರುವುದು ಹೇಗೆ ಎಂದು ಕುಟುಂಬ ರಾಜಕಾರಣವನ್ನು ಪ್ರಶ್ನಿಸಿದರು. ಸುಧಾ ನಂದಿನಿ ಎಂಬ ವಿದ್ಯಾರ್ಥಿನಿ ಸರ್ಕಾರ ಕೊನೆ ವರ್ಷ ಮಾತ್ರ ಚುರುಕಾಗಿ ಕೆಲಸ ಮಾಡುತ್ತದೆ. ಇದರ ಗುಟ್ಟೇನು ಎಂದು ಪ್ರಶ್ನಿಸಿದರು.

ಸೋನಿಯಾ ಎಂಬ ಮೌಂಟ್‌ ಕಾರ್ಮೆಲ್‌ ವಿದ್ಯಾರ್ಥಿನಿ, ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ಮೀಸಲಾತಿ ನೀಡಿದ್ದೀರಿ. ಆದರೆ, ಅಧಿಕಾರವೆಲ್ಲ ಅವರ ಗಂಡಂದಿರೇ ನಡೆಸುತ್ತಾರೆ. ಇದರ ಬದಲಾವಣೆ ಯಾವಾಗ? ಮಹಿಳಾ ಮೀಸಲಾತಿಯಿಂದಲೂ ಮಹಿಳೆಯರಿಗೆ ನ್ಯಾಯ ದೊರಕುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿನ ಟ್ರಾಫಿಕ್‌ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಹೆಣ್ಮಕ್ಕಳ ಮೇಲೆ ನಡೆಯುವ ನೈತಿಕ ಗೂಂಡಾಗಿರಿಯಂತ ಪ್ರಕರಣಗಳನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಚುನಾವಣೆ ಸಂದರ್ಭದಲ್ಲಿ ಸಂವಾದ ಏರ್ಪಡಿಸಿರುವ ಔಚಿತ್ಯವೇನು? ಎಂಬ ಮೊನಚಾದ ಪ್ರಶ್ನೆಗಳು ಕೇಳಿಬಂದವು. ಬಹುತೇಕ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಕೊಡಲು ಯುವ ನಾಯಕರು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ನಡೆಸಿ, ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next