Advertisement

 ಉಪ ಚುನಾವಣೆ: ಪ್ರಚಾರಕರ ಪಟ್ಟಿಯಲ್ಲಿ ಅಂಬಿ, ರಮ್ಯಾಗೆ ಕೊಕ್‌ 

12:35 PM Apr 02, 2017 | |

ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್‌ 40 ಮಂದಿ ಸ್ಟಾರ್‌ ಪ್ರಚಾರಕರ ಪಟ್ಟಿ ಸಿದ್ಧಪಡಿಸಿದ್ದು ಇದರಲ್ಲಿ ಮಾಜಿ ಸಚಿವ ಅಂಬರೀಶ್‌ ಹಾಗೂ ಮಾಜಿ ಸಂಸದೆ ರಮ್ಯಾ ಅವರ ಹೆಸರಿಲ್ಲ.

Advertisement

ವಿಶೇಷವೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ 40 ಮಂದಿ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಂದರ್ಭಗಳಲ್ಲಿ ಈ ಹಿಂದೆ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದ ಅಂಬರೀಶ್‌ ಹಾಗೂ ರಮ್ಯಾ ಅವರನ್ನು ಉಪ ಚುನಾವಣೆ ಪ್ರಚಾರಕ್ಕೆ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಕೈ ಬಿಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌, ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ನ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕಾರ್ಯದರ್ಶಿ ಚೆಲ್ಲುಕುಮಾರ, ಆಸ್ಕರ್‌ ಫ‌ರ್ನಾಂಡೀಸ್‌, ಎಂ. ವೀರಪ್ಪ ಮೊಯ್ಲಿ ಹಾಗೂ ಬಹುತೇಕ ಸಂಪುಟದ ಸಚಿವರು, ರಾಜ್ಯ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀಹೆಬ್ಟಾಳ್ಕರ್‌, ಜಯಮಾಲಾ, ಯುವ ಘಟಕದ ಅಧ್ಯಕ್ಷ ರಿಜ್ವಾನ್‌ ಅರ್ಷದ್‌ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 

ಯತೀಂದ್ರ ಸೇರಿ 50 ಕೈ ಮುಖಂಡರ ಕಾರು ಜಪ್ತಿ
ಗುಂಡ್ಲುಪೇಟೆ:
ಅನುಮತಿ ಪಡೆಯದೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿರತವಾಗಿದ್ದ 50 ಕಾಂಗ್ರೆಸ್‌ ಮುಖಂಡರ ವಾಹನಗಳನ್ನು ಶನಿವಾರ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ್ದರು. ಅವರ ಜೊತೆಗೆ ನೂರಾರು ಕಾರುಗಳ ಸಾಲೇ ಹೊರಟಿತ್ತು. ಅವುಗಳನ್ನು ಪರಿಶೀಲನೆಗೆ ಒಳಪಡಿಸಿದಾಗ 50 ಕಾರುಗಳು ಪರವಾನಗಿಯಿಲ್ಲದೆ ಪ್ರವೇಶ ಮಾಡಿ, ಪ್ರಚಾರದಲ್ಲಿ ನಿರತರಾಗಿರುವುದು ಕಂಡು ಬಂತು. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ವಾಹನ ಸೇರಿದಂತೆ ಕೆಪಿಸಿಸಿ ರಾಜ್ಯ ಸಂಘಟನಾ ಕಾರ್ಯದರ್ಶಿ  ಕಾನೂನು ಮತ್ತು ಮಾನವ ಹಕ್ಕು ವಿಭಾಗ, ಚಾಮರಾಜನಗರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ್‌ ಮತ್ತು ಪುರಸಭೆಯ ಸದಸ್ಯರು ಹಾಗೂ ಮಾಜಿ ಶಾಸಕರಿದ್ದ ವಾಹನಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಲ್ಲಾ ವಾಹನಗಳ ವಿರುದ್ದವೂ ಪ್ರಕರಣ ದಾಖಲಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next