Advertisement

ಚುನಾವಣೆ: ಮತ ಖಾತರಿ ವ್ಯವಸ್ಥೆ ಜಾರಿ

01:21 PM Jan 21, 2018 | Team Udayavani |

ಕಲಬುರಗಿ: ಮುಂಬರುವ 2018ರ ವಿಧಾನಸಭೆ ಚುನಾವಣೆಯಲ್ಲಿ ಮತದಾರ ಚಲಾಯಿಸುವ ಮತ ಯಾರಿಗೆ ಚಲಾಯಿಸಲಾಗಿದೆ ಎನ್ನುವ ಖಾತರಿ ಅಥವಾ ಮತ ಪ್ರಮಾಣೀಕರಿಸುವ ದಾಖಲೆ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್‌.ವೆಂಕಟೇಶಕುಮಾರ ತಿಳಿಸಿದರು.

Advertisement

ಶನಿವಾರ ತಮ್ಮ ಕಚೇರಿಯಲ್ಲಿ ಕರ್ನಾಟಕ ವಿಧಾನಸಭೆ ಸಾರ್ವತ್ರಿಕೆ ಚುನಾವಣೆ ಕುರಿತು ಪೂರ್ವಭಾವಿಯಾಗಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಕ್ರಮ ಮತದಾನ, ಮತ ಯಂತ್ರದೋಷ ಹಾಗೂ ಅವುಗಳ ಕಾರ್ಯಕ್ಷಮತೆ ಬಗ್ಗೆ ಉಂಟಾಗಿರುವ ಗೊಂದಲ ನಿವಾರಣೆ ದೃಷ್ಟಿಯಿಂದ ಮತ ಪ್ರಮಾಣೀಕರಿಸುವ ದಾಖಲೆ ವ್ಯವಸ್ಥೆ (VVಕಅಖ) ಬಳಕೆ ಮಾಡಲಾಗುತ್ತಿದೆ. ಇದರಿಂದ ಹಲವು ಗೊಂದಲ ನಿವಾರಣೆ ಆಗಲಿವೆ. ವಿವಿಪ್ಯಾಟ್‌ನಲ್ಲಿ ಮತದಾರ ಯಾವ ಅಭ್ಯರ್ಥಿಗೆ ತನ್ನ ಮತವನ್ನು ನೀಡಿದ್ದಾನೆ ಎನ್ನುವುದು ಮತದಾನದ ಸಮಯದಲ್ಲಿಯೇ ತಿಳಿಸುವ ಸಾಧನ ಇದಾಗಿದೆ ಎಂದರು.

2267 ಮತದಾನ ಕೇಂದ್ರ: ಜಿಲ್ಲೆಯ ಒಂಭತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಈ ಬಾರಿ ಒಟ್ಟು 2267 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕಳೆದ ಬಾರಿಗಿಂತ 107 ಮತದಾನ ಕೇಂದ್ರಗಳು ಹೆಚ್ಚಾಗಿವೆ. ಕಳೆದ ಬಾರಿ 2158 ಕೇಂದ್ರಗಳಿದ್ದವು. ಪ್ರತಿ ನಗರ ಪ್ರದೇಶದ ಕೇಂದ್ರಗಳಲ್ಲಿ 1400 ಮತ್ತು ಗ್ರಾಮೀಣ ಪ್ರದೇಶದ ಕೇಂದ್ರದಲ್ಲಿ 1200 ಮತಗಳನ್ನು ಮಾತ್ರವೇ ಚಲಾವಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಮತಗಳ ಸಂಖ್ಯೆ ಹೆಚ್ಚಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.

ಏಜೆಂಟರ ಪಟ್ಟಿ: ಎಲ್ಲ ರಾಜಕೀಯ ಪಕ್ಷಗಳು ಕೂಡಲೇ ಬೂತ್‌ ಮಟ್ಟದಲ್ಲಿ ನೇಮಕ ಮಾಡುವ ಏಜೆಂಟರ ಪಟ್ಟಿ ನೀಡಬೇಕು. ಬೂತ್‌ಮಟ್ಟದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಪ್ರತಿವಾರ ಆಯಾ ತಹಶೀಲ್ದಾರ್‌ ರು ಬಿಎಲ್‌ಒಗಳ ಸಭೆ ನಡೆಸಲು ನಿರ್ದೇಶನ ನೀಡಲಾಗಿದೆ ಎಂದರು.

Advertisement

ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡುವುದು ನಡೆದಿದೆ. ಜ.22ರೊಳಗಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಮತ್ತು ತಿದ್ದುಪಡಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಮತದಾರರ ಅಂತಿಮ ಪಟ್ಟಿಯನ್ನು ಫೆ.28ರಂದು ಪ್ರಕಟಿಸಲಾಗುವುದು ಎಂದರು.

ಮತದಾನ ಹೆಚ್ಚಳಕ್ಕೆ ಅಕ್ರಮ: ಈ ಬಾರಿ ಮತದಾನ ಹೆಚ್ಚಳಕ್ಕಾಗಿ ಹೆಚ್ಚು ಜಾಗೃತಿಯನ್ನು ಮತದಾರರಲ್ಲಿ ಮೂಡಿಸಲಾಗುತ್ತಿದೆ. ಅಲ್ಲದೆ, ಈ ಬಾರಿಯ ಚುನಾವಣೆ ವೇಳೆಗೆ 18 ವರ್ಷ ತುಂಬಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳ ಹೆಸರು ನೋಂದಣಿಗೆ ಆಯಾ ಕಾಲೇಜಿನ ಪ್ರಾಂಶುಪಾಲರಿಗೆ ಜವಾಬ್ದಾರಿಯನ್ನು ನೀಡಲಾಗುವುದು ಎಂದು ಹೇಳಿದರು.

ಭಾವಿ ಮತದಾರರನ್ನು ಪಠ್ಯ ಹಾಗೂ ಪಠ್ಯೇತರ ಚಟುಟಿಕೆಗಳ ಮೂಲಕ ಮತದಾನ ಮಾಡುವಂತೆ ಹುರಿದುಂಬಿಸಲು ಮತದಾರರ ಸಾಕ್ಷರತಾ ಕ್ಲಬ್‌ ಸಹ ಸ್ಥಾಪಿಸಲಾಗಿದೆ. ಅಲ್ಲದೆ ಮತದಾರ ಪಟ್ಟಿ ಪರಿಷ್ಕರಣೆಗೆ ಮೇಲುಸ್ತುವಾರಿ ನೋಡಿಕೊಳ್ಳಲು ಸೆಕ್ಟರ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

ಮತದಾನ ಕೇಂದ್ರಕ್ಕೆ ಬರುವ ಮತದಾರರಿಗೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗುವುದು. ಅಂಗವಿಕಲವರಿಗೆ ಅನೂಕೂಲವಾಗುವಂತೆ ರ್‍ಯಾಂಪ್‌ ಮತ್ತು ಹಿರಿಯ ನಾಗರೀಕರ ನೆರವಿಗೆ ಸಹಾಯಕ ಸಿಬ್ಬಂದಿಯ ವ್ಯವಸ್ಥೆ ಮಾಡಲಾಗುವುದು. ಮತದಾನ ಪೂರ್ವದಲ್ಲಿಯೇ ಮತದಾನ ಕೇಂದ್ರದಲ್ಲಿನ ಮೂಲಸೌಲಭ್ಯವನ್ನು ಖುದ್ದಾಗಿ ಪರಿಶೀಲಿಸುವಂತೆ ಆಯಾ ತಹಶೀಲ್ದಾರ್‌ರಿಗೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೋರ್ಲಪಾಟಿ, ಮಹಾನಗರ ಪಾಲಿಕೆಯ ಆಯುಕ್ತ ರಘುನಂದನ, ಸಹಾಯಕ ಆಯುಕ್ತೆ ಡಾ| ಬಿ. ಸುಶೀಲಾ, ರಾಚಪ್ಪ, ಪ್ರೊಬೇಷನರ್ ಸಹಾಯಕ ಆಯುಕ್ತ ರಮೇಶ ಕೋಲಾರ, ಕಲಬುರಗಿ ತಹಶೀಲ್ದಾರ್‌ ಅಶೋಕ ಹಿರೋಳಿ, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ತಹಶೀಲ್ದಾರ್‌ ದಯಾನಂದ ಪಾಟೀಲ, ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜೆಡಿಎಸ್‌ನ ಮನೋಹರ ಪೋತಾªರ, ಆಮ್‌ಆದ್ಮಿಯ ಈರಣ್ಣ ಹಾಗೂ ಇತರೆ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next