Advertisement

ಗುಬ್ಬಿ, ತುಮಕೂರು ನಗರ, ಗ್ರಾಮಾಂತರ ಕ್ಷೇತ್ರ ಕಗ್ಗಂಟು

03:08 PM Mar 27, 2023 | Team Udayavani |

ತುಮಕೂರು: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವಂತೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯಲ್ಲಿ ತಲ್ಲೀನವಾಗಿದ್ದು, ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ನಡೆಸುತ್ತಿದ್ದು, ಕಲ್ಪತರು ನಾಡಿನ 11 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಕಾಂಗ್ರೆಸ್‌ ಘೋಷಣೆ ಮಾಡಿದ್ದು, ಇನ್ನು 3 ಕ್ಷೇತ್ರಗಳಲ್ಲಿ ಯಾರ ಹೆಸರು ಘೋಷಿಸುತ್ತಾರೆ ಎಂಬ ಬಗ್ಗೆ ಕುತೂಹಲ ಕೆರಳಿಸಿದೆ.

Advertisement

ಜಿಲ್ಲೆಯ ಒಂದು ಕ್ಷೇತ್ರ ಬಿಟ್ಟು ಹತ್ತು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಜೆಡಿಎಸ್‌ ಪೂರ್ಣಗೊಳಿಸಿದ್ದು, ಬಿಜೆಪಿ ಇನ್ನೂ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ, ಕಾಂಗ್ರೆಸ್‌ 8 ಕ್ಷೇತ್ರಗಳಿಗೆ ಘೋಷಣೆ ಮಾಡಿದ್ದು, ಉಳಿದ ಮೂರು ಕ್ಷೇತ್ರಗಳಲ್ಲಿ ಆಯ್ಕೆಯಲ್ಲಿ ಗೊಂದಲ ಹಿನ್ನೆಲೆಯಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.

ನಗರ ಕ್ಷೇತ್ರಕ್ಕೆ 9 ಜನ ಆಕಾಂಕ್ಷಿಗಳು: ಪ್ರಮುಖವಾಗಿ ತುಮಕೂರು ನಗರ ಕ್ಷೇತ್ರದ ಟಿಕೆಟ್‌ಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಎರಡು ಲಕ್ಷ ರೂ. ಪಾವತಿಸಿ ಅರ್ಜಿ ಸಲ್ಲಿಸಿ ದವರು ಏಳು ಜನ, ಈಗ ಮತ್ತಿಬ್ಬರು ಸೇರ್ಪಡೆಯಾಗಿ 9 ಜನ ಆಕಾಂಕ್ಷಿಗಳಾ ಗಿದ್ದು, ಟಿಕೆಟ್‌ ಗೆ ತೀವ್ರ ಪೈ ಪೋಟಿ ಶುರು ವಾಗಿದೆ. ಪ್ರಮುಖವಾಗಿ ಮಾಜಿ ಶಾಸಕ ಡಾ.ಎಸ್‌. ರಫೀಕ್‌ ಅಹಮದ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಶಶಿಹುಲಿಕುಂಟೆ ಮಠ್, ಎಚ್‌.ಸಿ.ಹನುಮಂತಯ್ಯ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಯಕ್ಬಾಲ್‌ ಅಹಮದ್‌, ಜಿಲ್ಲಾ ಕಾಂಗ್ರೆಸ್‌ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್‌ ಅಹ ಮದ್‌, ಕಾಂಗ್ರೆಸ್‌ ಆರೋಗ್ಯ ಘಟಕದ ಅಧ್ಯಕ್ಷೆ ಡಾ.ಫ‌ಹ್ರಾನಾ ಬೇಗಂ, ಲಾಯರ್‌ ಬಾಬು ಜತೆಗೆ ಜೆಡಿಎಸ್‌ ಟಿಕೆಟ್‌ ಪಡೆಯಲು ಯತ್ನಿಸಿ ವಿಫ‌ಲರಾಗಿರುವ ಅಟಿಕಾ ಬಾಬು ಕಾಂಗ್ರೆಸ್‌ನಿಂದ ಟಿಕೆಟ್‌ ತರುತ್ತೇನೆ ಎಂದು ನಗರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈಗ ಬಿಬಿಎಂಪಿ ಮಾಜಿ ಮೇಯರ್‌ ಪುಟ್ಟರಾಜು ಹೆಸರು ಸೇರ್ಪಡೆಗೊಂಡಿದ್ದು, ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಟಿಕಾ ಬಾಬು ನನಗೇ ಟಿಕೆಟ್‌ ಸಿಗುವುದು, ನನ್ನ ಬಿಟ್ಟು ಯಾರಿಗೂ ಟಿಕೆಟ್‌ ಕೊಡುವುದಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ, ಆದರೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ ಗೌಡ ಈ ಅಟಿಕಾ ಬಾಬು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಅವರು ನಮ್ಮ ಪಕ್ಷದ ಸದಸ್ಯರೇ ಅಲ್ಲ ಎಂದು ಹೇಳುತ್ತಿದ್ದಾರೆ. ಬೆಂಗಳೂರಿನ ರಾಜಾಜಿನಗರದ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆ ಬಿಬಿಎಂಪಿ ಮಾಜಿ ಮೇಯರ್‌ ಪುಟ್ಟರಾಜು ಈಗ ತುಮಕೂರು ಟಿಕೆಟ್‌ ಮೇಲೆ ಕಣ್ಣಿಟ್ಟಿದ್ದಾರೆ.

ಆಕಾಂಕ್ಷಿಗಳು ಹೆಚ್ಚಿರುವ ಹಿನ್ನೆಲೆ ಟಿಕೆಟ್‌ ಯಾರಿಗೇ ನೀಡಿದರೂ ಬಂಡಾಯ ಏಳುವುದು ನಿಶ್ಚಿತ. ಈಗಾಗಲೇ 124 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಈಗ ಎರಡನೇ ಪಟ್ಟಿ ಬಿಡುಗಡೆ ಮಾಡಲು ದೆಹಲಿಯಲ್ಲಿ ಸಭೆ ನಡೆಯಲಿದೆ. ಮೂರ್ನಾಲ್ಕು ದಿನದೊಳಗೆ ಉಳಿದ ಅಭ್ಯರ್ಥಿಗಳ ಹೆಸರು ಬಹಿರಂಗವಾಗಲಿದೆ. ಈ ಬಾರಿ ಹೆಚ್ಚು ಸ್ಥಾನ ಗೆಲ್ಲಲು ಕಾಂಗ್ರೆಸ್‌ ಮುಖಂಡರು ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡಲು ಮುಂದಾಗಿದ್ದಾರೆ.

Advertisement

ಗುಬ್ಬಿ ಕ್ಷೇತ್ರ: ಜೆಡಿಎಸ್‌ ತ್ಯಜಿಸಿರುವ ಗುಬ್ಬಿ ಕ್ಷೇತ್ರದ ಶಾಸಕ ಎಸ್‌.ಆರ್‌.ಶ್ರೀನಿವಾಸ್‌, ಜೆಡಿಎಸ್‌ ತೊರೆದಿದ್ದು, ಕಾಂಗ್ರೆಸ್‌ ಸೇರುವ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್‌ ನೀಡಲಾಗುತ್ತದೆ ಎನ್ನಲಾಗಿದ್ದು, ಅಲ್ಲಿಯೂ ಮೂಲ ಕಾಂಗ್ರೆಸ್ಸಿಗರಿಂದ ವಿರೋಧ ವ್ಯಕ್ತವಾಗಿದೆ. ಆದರೂ ಶ್ರೀನಿವಾಸ್‌ಗೆ ಟಿಕೆಟ್‌ ಘೋಷಣೆ ಮಾಡುವ ಸಾಧ್ಯತೆ ಇದೆ.

ಕೊನೆ ಸುತ್ತಿನ ಪ್ರಯತ್ನ : 11 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿದೆ. ಇನ್ನು 3 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಗೊಂದಲವಿದೆ. ಇಂದು ಅಥವಾ ನಾಳೆ ಈ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯೂ ನಡೆಯಲಿದ್ದು, ಸ್ಪರ್ಧಾಕಾಂಕ್ಷಿಗಳು ಕೊನೆಸುತ್ತಿನ ಪ್ರಯತ್ನ ಮುಂದು ವರೆಸಿದ್ದಾರೆ.

ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ? : ತುಮಕುರು ಗ್ರಾಮಾಂತರ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಈಗಾಗಲೇ ಮಾಜಿ ಶಾಸಕ ಎಚ್‌.ನಿಂಗಪ್ಪ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಈಗ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನೆಲೆ ಸ್ಪರ್ಧೆ ಮಾಡುವುದು ಅನುಮಾನ ಎನ್ನಲಾಗಿದೆ. ಗ್ರಾಮಾಂತರದಲ್ಲಿ ಸೂರ್ಯ ಮುಕುಂದರಾಜ್‌ ಮತ್ತು ಶ್ರೀನಿವಾಸ್‌ ಟಿಕೆಟ್‌ಗಾಗಿ ಫೈಟ್‌ ನಡೆಸುತ್ತಿದ್ದಾರೆ.

ತುಮಕೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳ ಆಯ್ಕೆ ಪೂರ್ಣ ಗೊಂಡು ಹೆಸರು ಘೋಷಣೆಯಾಗಿದೆ. ಇನ್ನು 3 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಇಂದು ಅಥವಾ ನಾಳೆ ಪೂರ್ಣಗೊಳ್ಳಲಿದೆ. ಆಕಾಂಕ್ಷಿಗಳ ಸಂಖ್ಯೆ ತುಮಕೂರು ನಗರ ಕ್ಷೇತ್ರಕ್ಕೆ ಹೆಚ್ಚಾಗಿದ್ದು, ಪಕ್ಷದ ವರಿಷ್ಠರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಚಂದ್ರಶೇಖರ ಗೌಡ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next