ಉಡುಪಿ: ಚುನಾವಣ ಆಯೋಗವು ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ದ್ವೈ ವಾರ್ಷಿಕ ಚುನಾವಣ ಕ್ಷೇತ್ರಕ್ಕೆ ಉಪಚುನಾವಣೆ ನಡೆಸುವ ಬಗ್ಗೆ ಚುನಾವಣೆ ವೇಳಾಪಟ್ಟಿಯ ಅಧಿಸೂಚನೆ ಹೊರಡಿಸಿದೆ.
ಅದರಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಗಟ್ಟುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿದ್ದು, ಮಾದರಿ ನೀತಿ ಸಂಹಿತೆ ಅ.28ರ ವರೆಗೆ ಜಾರಿಯಲ್ಲಿರಲಿದೆ. ಚುನಾವಣೆ ಸಭೆ, ಸಮಾರಂಭಗಳು ನಡೆಸುವ ಬಗ್ಗೆ ಮತ್ತು ವಾಹನ ಪ್ರಚಾರದ ಬಗ್ಗೆ ಜಿಲ್ಲೆಯೊಳಗೆ ಸಂಚರಿಸಲು ಅನುಮತಿ ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿಯ ಏಕಗವಾಕ್ಷಿ ಕೇಂದ್ರದಲ್ಲಿ ಪಡೆದುಕೊಳ್ಳಬಹುದು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎರಡು ಕಡೆಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲು ಸ್ಪರ್ಧಿಸುವ ಅಭ್ಯರ್ಥಿ ಮತ್ತು ಅಭ್ಯರ್ಥಿ ಪರ ಏಜೆಂಟರಿಗೆ ಮಾತ್ರ ಸಂಚರಿಸಲು ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣ ಕ್ಷೇತ್ರದ ಚುನಾವಣಾಧಿಕಾರಿ ಕಚೇರಿ 1ನೇ ಮಹಡಿಯಲ್ಲಿ ತೆರೆಯಲಾದ ಏಕಗವಾಕ್ಷಿ ಕೇಂದ್ರದಲ್ಲಿ ಮುಂಚಿತ ಮಾಹಿತಿ ನೀಡಿ ಹಾಗೂ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬಹುದು. ರಾಜಕೀಯ ರಹಿತ ಇತರ ಸಾರ್ವಜನಿಕ, ಸಭೆ ಸಮಾರಂಭ ನಡೆಸುವ ಅಯೋಜಕರು ಜಿಲ್ಲೆಯ ಎಲ್ಲ ತಾಲೂಕು ಕಚೇರಿ ಏಕಗವಾಕ್ಷಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ತಹಶೀಲ್ದಾರರಿಂದ ಅನುಮತಿ ಪಡೆದುಕೊಳ್ಳಬಹುದು.
ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಬೇಡ
ಸಾರ್ವಜನಿಕರು ಮದುವೆ ಇನ್ನಿತರ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ಪಡೆಯಬೇಕಾಗಿಲ್ಲ. ಆದರೆ ಸಭೆ, ಸಮಾರಂಭಗಳಲ್ಲಿ ಯಾವುದೇ ರೀತಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಆಯೋಜಕರು ನೋಡಿ ಕೊಳ್ಳಬೇಕು ಎಂದು ಚುನಾವಣಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.