ಮಹಾರಾಷ್ಟ್ರದಲ್ಲಿ ಮತ್ತೆ ಅರಳಲಿದೆ ಕಮಲ, ಹರಿಯಾಣದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಸ್ಪರ್ಧೆ
Team Udayavani, Oct 24, 2019, 10:15 AM IST
ನವದೆಹಲಿ: ಮಹಾರಾಷ್ಟ್, ಹರಿಯಾಣ ವಿಧಾನಸಭಾ ಚುನಾವಣೆಯ ಮತಎಣಿಕೆ ಬಿರುಸಿನಿಂದ ನಡೆಯುತ್ತಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ ಎಂಬ ಮತದಾನೋತ್ತರ ಸಮೀಕ್ಷೆ ಸತ್ಯವಾಗಲಿದೆ. ಆದರೆ ಹರಿಯಾಣದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಹರಿಯಾಣದ 90 ಸದಸ್ಯಬಲ ಹೊಂದಿರುವ ವಿಧಾನಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು 46 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಾಗುತ್ತದೆ. ಕಳೆದ ಬಾರಿ ಭಾರತೀಯ ಜನತಾ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಿತ್ತು.
ಈ ಬಾರಿ ಹರಿಯಾಣದಲ್ಲಿ ಗದ್ದುಗೆ ಯಾರಿಗೆ?
ಮತ ಎಣಿಕೆ ಸದ್ಯದ ಟ್ರೆಂಡ್ ಪ್ರಕಾರ ಹರಿಯಾಣದಲ್ಲಿ ಬಿಜೆಪಿ 43 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 30 ಸ್ಥಾನಗಳಲ್ಲಿ ಹಾಗೂ ದುಶ್ಯಂತ ಚೌಟಾಲಾ ನೇತೃತ್ವದ ಜೆಜೆಪಿ (ಜನನಾಯಕ್ ಜನತಾ ಪಕ್ಷ) 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಭೂಪೇಂದ್ರ ಹೂಡಾ ಈಗಾಗಲೇ ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಸರಕಾರ ರಚನೆ ಮಾಡಲಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ ಇನ್ನೂ ಕೆಲವು ಸುತ್ತುಗಳ ಮತಎಣಿಕೆ ನಡೆಯಲು ಬಾಕಿ ಇದ್ದು ಮಧ್ಯಾಹ್ನದ ವೇಳೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ.