Advertisement

ಚುನಾವಣ ಸುಧಾರಣ ಚರ್ಚೆ: ಹೊಸ ಹೊಳಹು ಮೂಡಲಿ

10:51 PM Mar 29, 2022 | Team Udayavani |

ಚುನಾವಣೆಗಳಲ್ಲಿ ಭ್ರಷ್ಟಾಚಾರ ರಹಿತ, ಸಚ್ಛಾರಿತ್ರ್ಯ ಉಳ್ಳವರೇ ಆಯ್ಕೆಯಾಗಲಿ, ಪಕ್ಷಾಂತರ ನಿಲ್ಲಲಿ, ಚುನಾವಣೆ ಪ್ರಚಾರಕ್ಕಾಗಿ ಮಾಡಲಾಗುತ್ತಿರುವ ಖರ್ಚು ವೆಚ್ಚಗಳು ನಿಲ್ಲಲಿ, ಯಾವುದೇ ಕಾರಣಕ್ಕೂ ಚುನಾವಣೆಗಳಲ್ಲಿ ಮದ್ಯದ ಹಾವಳಿ ನುಸುಳದಂತಿರಲಿ, ಅಭ್ಯರ್ಥಿಗಳು ಪಾರದರ್ಶಕವಾಗಿರಲಿ, ಮತಕ್ಕಾಗಿ ನೋಟು ನೀಡುವ ಸಂಪ್ರದಾಯಗಳು ಕೊನೆಗೊಳ್ಳಲಿ ಎಂಬಿತ್ಯಾದಿ ವಿಚಾರಗಳು ಬಹು ಹಿಂದಿನಿಂದಲೂ ಕೇಳಿಬರುತ್ತಿದ್ದು, ಇಲ್ಲಿಯವರೆಗೆ ಇದಕ್ಕೊಂದು ತಾರ್ಕಿಕ ಅಂತ್ಯ ಸಿಕ್ಕಿಲ್ಲ.

Advertisement

ಈಗಲೂ ಚುನಾವಣೆಗಳಲ್ಲಿ ಹಣ ಮತ್ತು ಮದ್ಯದ ಬಲ ತುಸು ಹೆಚ್ಚಾಗಿಯೇ ಕಂಡುಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಲ್ಲಿ ನಾವೆಲ್ಲರೂ ಸೋತಿದ್ದೇವೆ ಎಂಬುದು ನಿಜಕ್ಕೂ ಬೇಸರದ ವಿಚಾರವೇ. ಈಗ ಕರ್ನಾಟಕ ವಿಧಾನಮಂಡಲದಲ್ಲಿ ಚುನಾವಣೆ ಸುಧಾರಣೆಗಾಗಿ ಸೋಮವಾರ ವಿಶೆೇಷ ಚರ್ಚೆ ಆರಂಭವಾಗಿದ್ದು, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೆಲವೊಂದು ಅಂಶಗಳನ್ನು ಪ್ರಸ್ತಾವಿಸಿದ್ದಾರೆ. ವಿಧಾನಸಭೆಯಲ್ಲಿ ಕಾಗೇರಿ ಅವರು ಪ್ರಸ್ತಾವಿಸಿರುವ ಅಂಶಗಳು ಈಗಿನ ಕಾಲಘಟ್ಟಕ್ಕೆ ಉಚಿತವೇ ಆಗಿವೆ. ಈ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳು ಗಮನಹರಿಸಬೇಕು ಎಂಬುದು ಎಲ್ಲರ ಕಳಕಳಿ. ಇಂಥದ್ದೊಂದು ಗಂಭೀರ ಹಾಗೂ ಅಗತ್ಯ ವಿಚಾರದ ಬಗ್ಗೆ ಚರ್ಚೆಗೆ ನಾಂದಿ ಹಾಡಿರುವುದು ಸ್ವಾಗತಾರ್ಹ.

ಇತ್ತೀಚಿನ ದಿನಗಳಲ್ಲಿ ಚುನಾವಣೆಗಳೆಂದರೆ, ಅವು ದುಡ್ಡು ಮಾಡಿಕೊಳ್ಳುವ, ಹಂಚುವ ಮತ್ತು ಹಿಂಸಾಚಾರಕ್ಕೆ ಕಾರಣವಾಗುವ ಸಂಗತಿಗಳಾಗಿವೆ. ದೇಶದ ಕೆಲವು ರಾಜ್ಯಗಳಲ್ಲಿ ಹಿಂಸಾಚಾರವಿಲ್ಲದೇ ಚುನಾವಣೆ ನಡೆಯುವುದಿಲ್ಲ ಅನ್ನುವಷ್ಟರ ಮಟ್ಟಿಗೆ ಇವು ಹಾಸುಹೊಕ್ಕಾಗಿವೆ. ಚುನಾವಣೆಯಲ್ಲಿ ಒಂದು ಪಕ್ಷವನ್ನು ಬಿಟ್ಟು, ಬೇರೊಂದು ಪಕ್ಷಕ್ಕೆ ಬೆಂಬಲ ನೀಡಿದರೆ, ಅವರನ್ನು ಕೊಲ್ಲುವುದು, ಅವರ ಮೇಲೆ ದಾಳಿ ಮಾಡುವಂಥ ಘಟನೆಗಳು ನಡೆಯುತ್ತಲೇ ಇವೆ. ಹೀಗಾಗಿ ಕೇಂದ್ರ ಚುನಾವಣ ಆಯೋಗಕ್ಕೆ ಶಾಂತ ರೀತಿಯಲ್ಲಿ ಚುನಾವಣೆಗಳನ್ನು ಮಾಡಿ ಮುಗಿಸುವುದೇ ದೊಡ್ಡ ತ್ರಾಸದಾಯಕ ಕೆಲಸವಾಗಿಬಿಟ್ಟಿದೆ. 50 ವರ್ಷಗಳ ಹಿಂದಿನ ವಾತಾವರಣಕ್ಕೂ, ಈಗಿನ ವಾತಾವರಣಕ್ಕೂ ಅಜಗಜಾಂತರವಿದೆ. ಆಗ ದೇಶದಲ್ಲಿ ಕಲಿಕೆ ಇಲ್ಲದವರೇ ಹೆಚ್ಚಾಗಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ.

ದೇಶದಲ್ಲಿ ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ಹೆಚ್ಚಾಗಿದ್ದಾರೆ. ಯಾರಿಗೆ ಮತ ಹಾಕಬೇಕು, ಯಾರಿಗೆ ಹಾಕುವುದು ಬೇಡ ಎಂಬ ಜ್ಞಾನವೂ ಜನರಲ್ಲಿ ಹೆಚ್ಚಾಗಿದೆ. ಉತ್ತಮ ಆಡಳಿತ ಕೊಡುವವರಿಗೆ ಮತ ಹಾಕಬೇಕು ಎಂಬ ಅರಿವೂ ಹೆಚ್ಚಾಗಿದೆ. ಇಷ್ಟೆಲ್ಲ ಆದರೂ, ಇನ್ನೂ ಚುನಾವಣೆಗಳೆಂದರೆ, ಕಾಸು ಮಾಡಿಕೊಳ್ಳುವ ಅವಕಾಶಗಳು ಎಂಬ ಅಭಿಪ್ರಾಯ ಜನರಲ್ಲಿ ಇರುವುದು ದುರದೃಷ್ಟಕರ. ಇಂಥ ಸಂದರ್ಭದಲ್ಲಿ ಇಡೀ ಚುನಾವಣೆ ವ್ಯವಸ್ಥೆಗೆ ತಕ್ಕ ಮಾರ್ಪಾಡು ಮಾಡಬೇಕಾಗಿರುವುದು ಅನಿವಾರ್ಯವೇ ಆಗಿದೆ. ಚುನಾವಣೆಗಳು ಧನಾದೇಶಗಳಾಗದೇ ಜನಾದೇಶಗಳಾಗಬೇಕು.

ಅಭ್ಯರ್ಥಿಗಳು ಕೋಟಿ ಕೋಟಿಗಳ ಲೆಕ್ಕಾಚಾರದಲ್ಲಿ ಹಣ ವೆಚ್ಚ ಮಾಡದೇ ಚುನಾವಣೆ ಎದುರಿಸುವ ವಾತಾವರಣ ಸೃಷ್ಟಿಯಾಗಬೇಕು. ಚುನಾವಣ ವಿಧಾನ ಮತ್ತು ಅಭ್ಯರ್ಥಿಗಳ ಎಲ್ಲ ವಿವರಗಳು ಪಾರದರ್ಶಕವಾಗಿ ಜನರಿಗೆ ಸಿಗುವಂತಿರಬೇಕು. ಚುನಾವಣ ವೆಚ್ಚ ಮಿತಿ ವಿಚಾರದಲ್ಲಿ ಅಭ್ಯರ್ಥಿಗಳು ಬದಲಿ ಮಾರ್ಗ ಹಿಡಿಯದಂತೆ ನೋಡಿಕೊಳ್ಳುವ ದೃಢ ಕಾನೂನುಗಳು ಜಾರಿಗೆ ಬರಬೇಕು.  ಈ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ನಡೆಯುತ್ತಿರುವ ಚರ್ಚೆ ಹೊಸ ಹೊಳಹುಗಳನ್ನು ನೀಡಿ, ಸುಧಾರಣ ಕ್ರಮದಲ್ಲಿ ಇಡೀ ದೇಶಕ್ಕೆ ಅನುಕೂಲವಾಗುವ ಮಾರ್ಗದರ್ಶನವನ್ನು ಸದನ ನೀಡಲಿ ಎನ್ನುವುದು ಎಲ್ಲರ ಆಶಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next