Advertisement

ಚುನಾವಣ ಸಿದ್ಧತೆ, ಕಾರ್ಯತಂತ್ರ  ಚರ್ಚೆ

09:37 PM Nov 24, 2022 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆ ಸಿದ್ಧತೆ ಹಾಗೂ ಕಾರ್ಯತಂತ್ರ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೆಸ್ಸೆಸ್‌ ನಾಯಕರ ಸಮ್ಮುಖದಲ್ಲಿ ಗುರುವಾರ ಮಹತ್ವದ ಸಭೆ ನಡೆಯಿತು.

Advertisement

ಕೇಶವ ಕೃಪಾದಲ್ಲಿ ನಡೆದ ಸಭೆಯಲ್ಲಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿ ತಲುಪಲು ಸರಕಾರದ  ವರ್ಚಸ್ಸು ವೃದ್ಧಿ, ಶಾಸಕರ ಅಸಮಾಧಾನ ನಿವಾರಣೆ, ಸರಕಾರ ಮತ್ತು ಪಕ್ಷದ ನಡುವೆ ಹೊಂದಾಣಿಕೆ, ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ವಿಶ್ವಾಸ ಗಳಿಸುವುದು ಸಹಿತ ಹಲವು ಪ್ರಮುಖ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್‌ 10ರ  ಬಳಿಕ  ರಾಜ್ಯ ವಿಧಾನಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಸ್ಥಾಪಿಸಲಾಗುವ ವಾರ್‌ ರೂಂ ಹಾಗೂ ಅದರ ನಿರ್ವಹಣೆ ಮತ್ತು ಸಮನ್ವಯ ಕುರಿತು ಸಭೆಯಲ್ಲಿ ಪ್ರಸ್ತಾಪವಾಯಿತು.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ  ರಾಜ್ಯ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ತತ್‌ಕ್ಷಣದಿಂದಲೇ ಚುನಾವಣೆ ಸಿದ್ಧತೆ ಆರಂಭಿಸುವಂತೆ ಸೂಚನೆ ನೀಡಿದ್ದರು.ರಾಜ್ಯದಲ್ಲಿ 156 ಕ್ಷೇತ್ರಗಳಲ್ಲಿ ಬಿಜೆಪಿ ಒಂದಲ್ಲೊಂದು ಬಾರಿ ಗೆಲುವು ಸಾಧಿಸಿದ್ದು, ಆ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಜನಸಂಕಲ್ಪ ಯಾತ್ರೆ ಜತೆಗೆ ಸಮುದಾಯವಾರು ಸಮಾವೇಶ ನಡೆಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಭೆ ನಡೆದಿದೆ ಎಂದು ಹೇಳಲಾಗಿದೆ.

ಸಚಿವರಾದ ಆರ್‌.ಅಶೋಕ್‌, ಡಾ| ಸಿ.ಎನ್‌.ಅಶ್ವತ್ಥನಾರಾಯಣ, ಡಾ| ಕೆ. ಸುಧಾಕರ್‌, ಮುನಿರತ್ನ, ಬಿಜೆಪಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್‌ ಕುಮಾರ್‌ ಸುರಾನಾ ಸಹಿತ ಪ್ರಮುಖರು  ಭಾಗಿಯಾಗಿದ್ದರು.

Advertisement

ಇಂದು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಸಭೆ:

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್‌ಗಾಗಿ ಅರ್ಜಿ ಹಾಕಿರುವ ಆಕಾಂಕ್ಷಿಗಳ ಸಭೆಯನ್ನು ಕಾಂಗ್ರೆಸ್‌  ಶುಕ್ರವಾರ (ನ.25) ಆಯೋಜಿಸಿದೆ.

ನಗರದ ಹೊರವಲಯದ ಹೊಟೇಲ್‌ನಲ್ಲಿ ಇಡೀ ದಿನ 1,350 ಆಕಾಂಕ್ಷಿಗಳ ಜತೆ ಸಮಾಲೋಚನೆ ನಡೆಸಲಿದೆ. ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆ ವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಸಭೆ ನಡೆಸಲಿದೆ.

ಬೆಳಗ್ಗಿನಿಂದಲೇ ವಿಭಾಗೀಯವಾರು ಸಭೆ ಆರಂಭವಾಗಲಿದ್ದು, ಪ್ರತಿ ಕ್ಷೇತ್ರದ ಆಕಾಂಕ್ಷಿಗಳ ಜತೆ ನಾಯಕರು ಮಾತನಾಡಿ ಯಾರಿಗೆ ಟಿಕೆಟ್‌ ಕೊಟ್ಟರೂ ಒಮ್ಮತದ ಆಯ್ಕೆ ಎಂದು ಗೆಲುವಿಗೆ ಶ್ರಮಿಸಬೇಕು. ಯಾವುದೇ ಕಾರಣಕ್ಕೂ ಭಿನ್ನಮತ ಅಥವಾ ಆಂತರಿಕ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಕಿವಿ ಮಾತು ಹೇಳಲಿದ್ದಾರೆ.

ಪ್ರತಿ ಕ್ಷೇತ್ರಕ್ಕೆ ಕನಿಷ್ಠ 4ರಿಂದ ಗರಿಷ್ಠ 8 ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಪ್ರಾಥಮಿಕ ಹಂತದಲ್ಲೇ ಆಕಾಂಕ್ಷಿಗಳ ನಡುವೆ ತಿಕ್ಕಾಟ ನಡೆಯಬಾರದು ಎಂಬ ಕಾರಣಕ್ಕೆ ಮುಖಂಡರು  ಈ ಸಭೆ ಕರೆದಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಎರಡು ಸುತ್ತಿನ ಸಭೆ ನಡೆಸಿ ಕ್ಷೇತ್ರಾವಾರು ಆಕಾಂಕ್ಷಿಗಳ ಸಭೆ ನಡೆಸಿದ್ದ ಕಾಂಗ್ರೆಸ್‌ ಈಗ ಅಂತಿಮವಾಗಿ ಟಿಕೆಟ್‌ಗಾಗಿ ಅರ್ಜಿ ಹಾಕಿದ ಆಕಾಂಕ್ಷಿಗಳ ಸಭೆ ನಡೆಸುತ್ತಿದೆ.

ಜನವರಿ ವೇಳೆಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಬೇಕು. ಹೀಗಾದರೆ ಮಾತ್ರ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಗೆಲುವಿಗೆ ಕಾರ್ಯತಂತ್ರ ರೂಪಿಸಲು ಸಾಧ್ಯ. ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ಬಹುತೇಕ ಆಕಾಂಕ್ಷಿಗಳು ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಸಭೆಯ ಬಳಿಕ ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಮುಖರಾದ ರಾಹುಲ್‌ ಗಾಂಧಿ, ಕೆ.ಸಿ.ವೇಣುಗೋಪಾಲ್‌ ಸಮ್ಮುಖದಲ್ಲಿ ಮತ್ತೂಂದು ಸಭೆ ನಡೆದು ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next