Advertisement

ಚುನಾವಣೆ ಮಾದರಿ ಸೆಕ್ಯುರಿಟಿ: ಇಂದಿನಿಂದ ಪಿಯು ಪರೀಕ್ಷೆ

03:45 AM Mar 09, 2017 | |

ಬೆಂಗಳೂರು: ಕಳೆದ ವರ್ಷದ ಪಿಯುಸಿ ಪರೀಕ್ಷೆ ಅಕ್ರಮಗಳ ಹಿನ್ನೆಲೆಯಲ್ಲಿ ಇಂದಿನಿಂದ (ಗುರುವಾರ) ರಾಜ್ಯಾದ್ಯಂತ ಆರಂಭವಾಗುವ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರಗಳಿಗೆ ಭಾರೀ ಪ್ರಮಾಣದ ಬಂದೋಬಸ್ತ್ ಒದಗಿಸಲಾಗಿದೆ.

Advertisement

ಚುನಾವಣೆಯಲ್ಲಿ ಮತಗಟ್ಟೆಗಳಿಗೆ ಪೊಲೀಸ್‌ ಭದ್ರತೆ ಒದಗಿಸಿದ ಮಾದರಿಯಲ್ಲಿಯೇ ಪರೀಕ್ಷಾ ಕೇಂದ್ರಗಳಿಗೆ ಪಿಯುಸಿ ಇತಿಹಾಸದಲ್ಲೇ ಮೊದಲ ಬಾರಿಗೆ ಭದ್ರತೆ ಕಲ್ಪಿಸಲಾಗಿದೆ. ಪರೀಕ್ಷಾ ಅಕ್ರಮಗಳು ನಡೆಯಲು ಸಾಧ್ಯತೆಯಿರುವ ಪ್ರದೇಶಗಳ ಕೇಂದ್ರಗಳನ್ನು ಚುನಾವಣೆಯಲ್ಲಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿದ ಮಾದರಿಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಸಹ ಸೂಕ್ಷ್ಮ, ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳು ಎಂದು ಗುರುತಿಸಲಾಗಿದೆ.

“”ನಿರಂತರವಾಗಿ ಅಪರಾಧ ಕೃತ್ಯ ಎಸಗುವವರ ಬಂಧನ ಸೇರಿದಂತೆ ಚುನಾವಣಾ ಸಂದರ್ಭದಲ್ಲಿ ಕೈಗೊಳ್ಳುವ ಎಲ್ಲ ಕ್ರಮಗಳನ್ನು ಪರೀಕ್ಷಾ ಪ್ರಕ್ರಿಯೆಗೆ ಕೈಗೊಳ್ಳಲಾಗಿದೆ. ಕಳೆದ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 14 ಮಂದಿಯ ಬಂಧನವಾಗಿತ್ತು. ಈ ಪೈಕಿ 8 ಮಂದಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅನುಸರಿಸುವ ಮಾನದಂಡಗಳನ್ನು ಪರೀಕ್ಷಾ ವೇಳೆಯೂ ಅನುಸರಿಸಲಾಗುವುದು ಎಂದು ಶಿಕ್ಷಣ ಸಚಿವ ತನ್ವೀರ್‌ ಸೇಠ್ ಹೇಳುವ ಮೂಲಕ ಈ ಹಿಂದೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಸುಳಿವನ್ನು ಪರೋಕ್ಷವಾಗಿ ನೀಡಿದರು.

ಪ್ರಶ್ನೆ ಪತ್ರಿಕೆ ಸೋರಿಕೆ, ನಕಲು ತಡೆಗಟ್ಟಲು ಪರೀಕ್ಷಾ ಅಕ್ರಮ ತಡೆಗಟ್ಟಲು 2175 ವಿಚಕ್ಷಣಾ ದಳ ರಚಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಕಣ್ಗಾವಲು ಇರಿಸಲಿದೆ. ಜತೆಗೆ ಜಿಲ್ಲಾ ಮತ್ತು ತಾಲೂಕುವಾರು ಸಂಚಾರಿ ವಿಚಕ್ಷಣಾ ದಳ ಸಹ ರಚಿಸಲಾಗಿದೆ. 998 ವೀಕ್ಷಕರು ಸಹ ಮೇಲುಸ್ತುವಾರಿ ವಹಿಸಲಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಪರೀಕ್ಷಾ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮುಜುಗರ ಹಾಗೂ ಮುಖಭಂಗ ಅನುಭವಿಸಿದ ಸರ್ಕಾರ ಈ ಬಾರಿ ಪರೀಕ್ಷಾ ಅಕ್ರಮಗಳು ಮರುಕಳಿಸದಂತೆ ಚುನಾವಣಾ ಮಾದರಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಈ ಬಾರಿ ಒಟ್ಟಾರೆ 6.84 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ರಾಜ್ಯಾದ್ಯಂತ 998 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು,  ಈ ಪೈಕಿ 103 ಕೇಂದ್ರಗಳನ್ನು ಸೂಕ್ಷ್ಮ ಹಾಗೂ 38 ಕೇಂದ್ರಗಳನ್ನು ಅತಿ ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಶೇ.70 ರಷ್ಟು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮರಾ ಸಹ ಅಳವಡಿಸಲಾಗಿದೆ.

Advertisement

ಸುಸೂತ್ರವಾಗಿ ಪರೀಕ್ಷೆ ನಡೆಸಲು ಈ ಬಾರಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಬುಧವಾರ ಮಲ್ಲೇಶ್ವರದ ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಲಾಖೆ ನಿರ್ದೇಶಕಿ ಸಿ.ಶಿಖಾ, ಒಟ್ಟು 6,84,566 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಇದರಲ್ಲಿ 3,48,600 ವಿದ್ಯಾರ್ಥಿಗಳು ಹಾಗೂ 3,35,966 ಜನ ವಿದ್ಯಾರ್ಥಿನಿಯರಿದ್ದಾರೆ ಎಂದು ತಿಳಿಸಿದರು.

ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಈಗಾಗಲೇ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರಮುಖವಾಗಿ ಖಜಾನೆಯಲ್ಲಿ ಭದ್ರತಾ ಸಿಬ್ಬಂದಿ ನಿಯಜನೆಯ ಜತೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ನಿಗದಿತ ಅವಧಿಗೂ ಮೊದಲೇ ಯಾವುದೇ ವ್ಯಕ್ತಿಗಳು ಖಜಾನೆ ಬಳಿ ಓಡಾಡಿದ್ದು ಕಂಡು ಬಂದರೆ ಸಿಸಿ ಕ್ಯಾಮರಾ ತಾನಾಗೇ ಅದರ ವಿಡಿಯೋ ತುಣುಕು ಸಂಗ್ರಹಿಸಿ ಪೊಲೀಸರಿಗೆ ರವಾನಿಸುತ್ತದೆ. ಪ್ರಶ್ನೆಪತ್ರಿಕೆ ಸಾಗಣೆ ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಪ್ರಶ್ನೆಪತ್ರಿಕೆ ಬಂಡಲ್‌ ನೀಡಿಕೆಗೆ ಬಾರ್‌ಕೋಡ್‌ ಮತ್ತು ಸಿಬ್ಬಂದಿಯ ಬೆರಳಚ್ಚು ಪಡೆಯಲಾಗುವುದು ಎಂದು ಹೇಳಿದರು.

ಪ್ರತೀ ವರ್ಷದಂತೆ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀ. ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸುವಂತೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಶೇ.60ರಷ್ಟು ಕೇಂದ್ರಗಳಿಗೆ ಮಾತ್ರ ಸಿಸಿಟಿವಿ
ಪರೀಕ್ಷಾ ಕೇಂದ್ರವಾಗಿ ಆಯ್ಕೆಗೊಂಡ ಪ್ರತಿ ಕಾಲೇಜಿನಲ್ಲಿಯೂ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಆದೇಶ ಮಾಡಲಾಗಿತ್ತು. ಆದರೆ, ಎಲ್ಲ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಅಳವಡಿಕೆ ಆಗಿಲ್ಲ. 998 ಕೇಂದ್ರಗಳ ಪೈಕಿ 510ರಲ್ಲಿ ಮಾತ್ರ ಸಿಸಿ ಕ್ಯಾಮರಾ ಅಳವಡಿಕೆ ಆಗಿದೆ. ಖಾಸಗಿ ಕಾಲೇಜು ಪರೀಕ್ಷಾ ಕೇಂದ್ರಗಳ ಪೈಕಿ ಶೇ.90ರಷ್ಟು ಕೇಂದ್ರಗಳಲ್ಲಿ ಹಾಗೂ ಸರ್ಕಾರಿ ಕಾಲೇಜುಗಳ ಕೇಂದ್ರಗಳಲ್ಲಿ ಸುಮಾರು ಶೇ.10ರಷ್ಟರಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಆಗಿದೆ. ಉಳಿದ ಕೇಂದ್ರಗಳಲ್ಲಿ ಹೆಚ್ಚಿನ ಪೊಲೀಸ್‌ ಭದ್ರತೆ ಮಾಡಲಾಗಿದೆ ಎಂದರು.

ಆತಂಕ ಬೇಡ
ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಗೊಂದಲಗಳಿಲ್ಲದಂತೆ ಸುಗಮವಾಗಿ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಪರೀಕ್ಷೆಗೆ ಹಾಜರಾಗಬೇಕು.
– ತನ್ವೀರ್‌ ಸೇಠ್ ಸಚಿವರು

4204 ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆ
ಹಾಜರಾತಿ ಕೊರತೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 4,204 ವಿದ್ಯಾರ್ಥಿಗಳು ಪರೀಕ್ಷೆಗೆ ಕೂರುವ ಅರ್ಹತೆ ಕಳೆದುಕೊಂಡಿದ್ದಾರೆ. ಕರ್ನಾಟಕ ಶಿಕ್ಷಣ ಕಾಯ್ದೆ-2006ರ ಪ್ರಕಾರ ಯಾವುದೇ ವಿದ್ಯಾರ್ಥಿ ಪರೀಕ್ಷೆ ಬರೆಯಲು ಶೇ.75ರಷ್ಟು ಹಾಜರಾತಿ ಹೊಂದಿರಬೇಕು.

– ಶಿಖಾ, ಪಿಯು ಇಲಾಖೆ ನಿರ್ದೇಶಕಿ

ಈ ಬಾರಿ ಏನು ಬದಲಾವಣೆ?
ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುವ ಕಾಲೇಜಿಗೆ ಬದಲಾಗಿ ಬೇರೆ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾಗುವ ವ್ಯವಸ್ಥೆಯನ್ನು ಇದೇ ಮೊದಲ ಬಾರಿಗೆ ಜಾರಿ

ವಿದ್ಯಾರ್ಥಿಗಳಿಗೆ ಟಿಪ್ಸ್‌
ವಿದ್ಯಾರ್ಥಿಗಳೇ ಪರೀಕ್ಷೆ ಬಗ್ಗೆ ಯಾವುದೇ ಆಂತಕ, ಭಯ ಬೇಡ. ಸಮಾಧಾನದಿಂದ ಪರೀಕ್ಷೆ ಬರೆಯಿರಿ. ಪರೀಕ್ಷೆಯ ಮೊದಲ ದಿನ ಸಾಧ್ಯವಾದಷ್ಟು ಬೇಗ ಪರೀಕ್ಷಾ ಕೇಂದ್ರಕ್ಕೆ ತೆರಳಿ ಯಾವ ಕೊಠಡಿಯಲ್ಲಿ ನಿಮ್ಮ ಪರೀಕ್ಷಾ ಪ್ರವೇಶ ಸಂಖ್ಯೆ ನಮೂದಾಗಿದೆ ಹುಡುಕಿಕೊಳ್ಳಿ. 

ಮನೆಯಿಂದ ಹೊರಡುವ ಮೊದಲು ಪರೀಕ್ಷೆ ಬರೆಯಲು ಅಗತ್ಯವಿರುವ ಉತ್ತಮ ರೀತಿಯಲ್ಲಿ ಬರೆಯುವ ಕನಿಷ್ಠ 2 ಬಾಲ್‌ಪಾಯಿಂಟ್‌ ಪೆನ್ನುಗಳು, ಹಾಲ್‌ ಟಿಕೆಟ್‌ ತೆಗೆದುಕೊಂಡಿದ್ದೀರಾ ಪರೀಕ್ಷಿಸಿಕೊಳ್ಳಿ. ಪ್ರಶ್ನೆ ಪತ್ರಿಕೆ ಕೈಗೆ ಬಂದ ನಂತರ ಗೊಂದಲ, ಗಲಿಬಿಲಿ ಇಲ್ಲದೆ ಸಾವಕಾಶದಿಂದ ಒಮ್ಮೆ ಓದಿಕೊಳ್ಳಿ. ಇದಕ್ಕಾಗಿ 15 ನಿಮಿಷ ಹೆಚ್ಚುವರಿ ಸಮಯ ನೀಡಲಾಗಿರುತ್ತದೆ. ಮೊದಲು ಯಾವ್ಯಾವ ಪ್ರಶ್ನೆಗಳಿಗೆ ಪೂರ್ಣ ಉತ್ತರ ಗೊತ್ತಿದೆಯೋ ಅವುಗಳನ್ನೆಲ್ಲಾ ಬರೆದು ಮುಗಿಸಿ. ನಂತರ ಉಳಿದ ಪ್ರಶ್ನೆಗಳಿಗೆ ಗೊತ್ತಿರುವಷ್ಟು ಉತ್ತರಿಸಿ. ಯಾವುದೇ ಪ್ರಶ್ನೆಗೆ ಉತ್ತರಿಸದೆ ಬರಬೇಡಿ. ಏಕೆಂದರೆ ಒಂದು ಅಂಕವೂ ಅಮೂಲ್ಯ. ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಬಳಿಕ ಸಮಯಾವಕಾಶ ಇದ್ದರೆ ಉತ್ತರ ಪತ್ರಿಕೆಯನ್ನು ಮತ್ತೂಮ್ಮೆ ಓದಿಕೊಳ್ಳಿ. ಎಲ್ಲ ಪ್ರಶ್ನೆಗಳಿಗೂ ಉತ್ತರ ಬರೆಯಲಾಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮಾವುದೇ ರೀತಯಲ್ಲೂ ನಕಲು ಮಾಡುವ ಪ್ರಯತ್ನ ಬೇಡ. ಇದು ನಿಮ್ಮ ಭವಿಷ್ಯಕ್ಕೇ ಮಾರಕವಾಗಬಹುದು.

ಸಹಾಯವಾಣಿ:
ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಗೊಂದಲ, ಭಯ, ಆತಂಕ, ಸಮಸ್ಯೆಗಳಿದ್ದರೆ ಇಲಾಖೆಯ ಸಹಾಯವಾಣಿ 080 2308 3900ಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದು. ಇಲಾಖೆಯ ಕೇಂದ್ರ ಕಚೇರಿ ಮತ್ತು ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳಲ್ಲಿ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ.

ಮಂಡಳಿಯಿಂದಲೇ ಪೂರ್ವ ಸಿದ್ಧತಾ ಪರೀಕ್ಷೆ
ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಹೊಸ ಪರೀಕ್ಷಾ ಮಾದರಿಯಲ್ಲೇ ನಡೆಸುವಂತೆ ಹಿಂದೆಯೇ ಸೂಚಿಸಲಾಗಿತ್ತು. ಹಾಗಿದ್ದರೂ ಕೆಲವೆಡೆ ಹಳೆಯ ಮಾದರಿಯಲ್ಲಿ ಕೈಗೊಂಡಿದ್ದರಿಂದ ಗೊಂದಲ ಉಂಟಾಗಿದೆ. ಮುಂದಿನ ವರ್ಷದಿಂದ ಮಂಡಳಿ ವತಿಯಿಂದಲೇ ಪೂರ್ವ ಸಿದ್ಧತಾ ಪರೀಕ್ಷೆ ನಡೆಸಲು ಚಿಂತಿಸಲಾಗಿದೆ ಎಂದು ಸಚಿವ ತನ್ವೀರ್‌ ಸೇಠ್ ತಿಳಿಸಿದರು.

6.68 ಲಕ್ಷ ಪರೀಕ್ಷಾರ್ಥಿಗಳು
998: ಪರೀಕ್ಷಾ ಕೇಂದ್ರ
103: ಸೂಕ್ಷ್ಮ ಕೇಂದ್ರ
38:ಅತಿಸೂಕ್ಷ್ಮ ಕೇಂದ್ರ
2175:ವಿಚಕ್ಷಣಾ ದಳ
080 2308 3900:ಪಿಯು ಸಹಾಯವಾಣಿ

Advertisement

Udayavani is now on Telegram. Click here to join our channel and stay updated with the latest news.

Next