Advertisement

ಪದವೀಧರರ ಕ್ಷೇತ್ರದಲ್ಲಿ ಕುಲಗೆಟ್ಟ ಮತಗಳೇ ಹೆಚ್ಚು

11:20 PM Jun 15, 2022 | Team Udayavani |

ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ವೇಳೆ ನೂರಾರು ಮಂದಿ ಮತಪತ್ರದಲ್ಲಿ ಚಿತ್ರ ವಿಚಿತ್ರ ಚಿಹ್ನೆಗಳನ್ನು ನಮೂದಿಸಿ ಮತಪತ್ರದ ಮೌಲ್ಯವನ್ನು ಕುಲಗೆಡಿಸಿದ್ದರೆ, ವಾಯವ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಸಂದರ್ಭದಲ್ಲಿ ಮತಗಳು ಹೆಚ್ಚು ಕಡಿಮೆಯಾಗಿ ಗೊಂದಲ ನಿರ್ಮಾಣವಾಗಿತ್ತು. ಇದರಿಂದಾಗಿ ಕೆಲಕಾಲ ಮತ ಎಣಿಕೆಗೆ ತಡೆ ಒಡ್ಡಲಾಯಿತು. ನಾಲ್ಕು ಕ್ಷೇತ್ರಗಳ ಮತ ಎಣಿಕೆ ಸಂದರ್ಭದಲ್ಲಿ ಕಂಡ ಕೆಲವು ಸ್ವಾರಸ್ಯಕರ ಪ್ರಸಂಗಗಳು ಇಲ್ಲಿವೆ.

Advertisement

ಮೈಸೂರು: ಮಹಾರಾಣಿ ಮಹಿಳಾ ಕಾಲೇಜಿನಲ್ಲಿ ನಡೆದ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ವೇಳೆ ನೂರಾರು ಮಂದಿ ಮತಪತ್ರದಲ್ಲಿ ಚಿತ್ರ-ವಿಚಿತ್ರ ಚಿಹ್ನೆಗಳನ್ನು ನಮೂದಿಸಿ ಮತಪತ್ರದ ಮೌಲ್ಯವನ್ನು ಕುಲಗೆಡಿಸಿದ್ದರೆ, ಇನ್ನು ಕೆಲವರು ಕ್ರಮ ಸಂಖ್ಯೆಗೆ ಅನುಗುಣವಾಗಿ 1ರಿಂದ 19ರವರೆಗೆ ಪ್ರಾಶಸ್ತ್ಯ ಮತ ನೀಡಿದ್ದಾರೆ. ಪದವಿ ಶಿಕ್ಷಣ ಪೂರೈಸಿರುವ ವಿದ್ಯಾವಂತರಿಂದಲೇ ಸಾವಿರಕ್ಕೂ ಹೆಚ್ಚು ಮತಗಳು ಕುಲಗೆಟ್ಟಿರುವುದು ಅಧಿಕಾರಿಗಳನ್ನು ತಬ್ಬಿಬ್ಬುಗೊಳಿಸಿದೆ.

ಮತಗಳ ಎಣಿಕೆ ಮಾಡುವಾಗ ಹಲವರು ಪ್ರಾಶಸ್ತ್ಯ ಮತ ನೀಡುವ ಜಾಗದಲ್ಲಿ ಸಹಿ ಹಾಕಿರುವುದು, ಶುಭವಾಗಲಿ, ಧನ್ಯವಾದ, ಗೆದ್ದು ಬನ್ನಿ, ನನ್ನ ಮತ ನಿಮಗೆ ಎಂಬಿತ್ಯಾದಿ ಪದಗಳನ್ನು ಬರೆದಿದ್ದರೆ, ಮತ್ತೂಬ್ಬ ಜೆಡಿಎಸ್‌ ಅಭ್ಯರ್ಥಿ ಪಟ್ಟಿಯಲ್ಲಿ ಅಶ್ಲೀಲ ಪದ ಬರೆದಿರುವುದು ಕಂಡುಬಂದಿದೆ.

ಕುಲಗೆಟ್ಟವು ಬಿಜೆಪಿಯದ್ದೇ ಹೆಚ್ಚು
ಮತಪತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಮುಂದೆ ಮೊದಲ ಪ್ರಾಶಸ್ತ್ಯ ನೀಡದೆ ನೇರವಾಗಿ 2 ಎಂದು ಬರೆದಿರುವ ಮತ ಪತ್ರಗಳೆ ಹೆಚ್ಚಾಗಿದ್ದವು. ಜತೆಗೆ ಬಿಜೆಪಿ ಅಭ್ಯರ್ಥಿಗೆ ರೈಟ್‌ ಮಾರ್ಕ್‌ ಚಿಹ್ನೆ ಬಳಕೆ ಮಾಡಿರುವ ಹತ್ತಾರು ಪತ್ರ ಕುಲಗೆಟ್ಟ ಮತ ಬುಟ್ಟಿ ಸೇರಿದವು. ಕುಲಗೆಟ್ಟ ಬಹುತೇಕ ಮತಗಳು ಬಿಜೆಪಿ ಅಭ್ಯರ್ಥಿಗೆ ದೊರೆತಿದ್ದವು.

ಬಟ್ಟೆ ಬದಲಾಗಿದ್ದಕ್ಕೆ ತಕರಾರು
ಬೆಳಗಾವಿಯಲ್ಲಿ ವಾಯವ್ಯ ಶಿಕ್ಷಕರ ಕ್ಷೇತ್ರದ ಮತ ಪೆಟ್ಟಿಗೆಯೊಂದಕ್ಕೆ ಕಟ್ಟಿದ್ದ ಬಟ್ಟೆ ಬದಲಾಗಿದ್ದರಿಂದ ಜೆಡಿಎಸ್‌ ಅಭ್ಯರ್ಥಿ ಪರ ಏಜೆಂಟರು ತಕರಾರು ಮಾಡಿದರು. ಮತ ಪೆಟ್ಟಿಗೆ ಸೀಲ್‌ ಮಾಡಿದಾಗ ಒಂದು ಬಣ್ಣದ ಬಟ್ಟೆ ಇತ್ತು. ಆದರೆ ಈಗ ಅದನ್ನು ತೆರೆಯುವಾಗ ಇನ್ನೊಂದು ಬಣ್ಣದ್ದು ಇದೆ. ಇದಕ್ಕೆ ಚುನಾವಣಾಧಿಕಾರಿಗಳು ಉತ್ತರ ನೀಡಬೇಕೆಂದು ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ಚುನಾವಣಾಧಿಕಾರಿ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರು ಬಟ್ಟೆ ಕಟ್ಟುವುದಷ್ಟೇ ಸೀಲ್‌ ಅಲ್ಲ. ಅದರ ಒಳಗೆ ಬ್ಯಾಲೆಟ್‌ ಪೇಪರ್‌ ಮೇಲೆ ಸೀಲ್‌ ಇರುತ್ತದೆ. ಇದನ್ನು ವ್ಯತ್ಯಾಸ ಮಾಡಲು ಸಾಧ್ಯವಿಲ್ಲ. ನೀವೇ ನೋಡಿ ಎಂದು ತೋರಿಸಿದರು. ಬಳಿಕ ಏಜೆಂಟರು ಸುಮ್ಮನಾದರು.

Advertisement

ಒಂದು ಮತ ಎಲ್ಲಿ ಹೋಯಿತು?
ಬೆಳಗಾವಿ: ನಿಪ್ಪಾಣಿ ನಗರದ ಮತಗಟ್ಟೆಯೊಂದರ ಮತಪೆಟ್ಟಿಗೆಯಲ್ಲಿ ಒಂದು ಮತ ಕಡಿಮೆ ಬಂದಿದ್ದು, ಗೊಂದಲಕ್ಕೆ ಕಾರಣವಾಗಿದೆ. ಇದರಿಂದ ಪದವೀಧರ ಕ್ಷೇತ್ರದ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಚುನಾವಣ ಸಿಬಂದಿ ಮುಂದೆ ತಕರಾರು ತೆಗೆದರು. ನಿಪ್ಪಾಣಿಯ ಮತಗಟ್ಟೆಯಲ್ಲಿ 595 ಮತದಾನವಾಗಿದೆ. ಆದರೆ ಅಲ್ಲಿಂದ ತಂದಿರುವ ಮತಪೆಟ್ಟಿಗೆಯಲ್ಲಿ 594 ಮತಗಳು ಇವೆ. ಸಿಬಂದಿ ನಾಲ್ಕು ಬಾರಿ ಎಣಿಕೆ ಮಾಡಿದರೂ ಸಂಖ್ಯೆ ಸರಿ ಹೊಂದಲಿಲ್ಲ. ಇದರಿಂದ ಏಜೆಂಟರು ಏರುದನಿಯಲ್ಲಿ ತಕರಾರು ಮಾಡಿದರು. ಆಗ ಕೆಲಕಾಲ ಮತಎಣಿಕೆಗೆ ತಡೆ ಒಡ್ಡಲಾಯಿತು.

ಐದು ಮತ ಹೆಚ್ಚಿಗೆ ಬಂದದ್ದು ಎಲ್ಲಿಂದ?
ಬೆಳಗಾವಿ: ಬಾಗಲಕೋಟೆ ಜಿಲ್ಲೆ ಇಳಕಲ್‌ ಮತಗಟ್ಟೆಯಿಂದ ತರಲಾದ ಮತಪೆಟ್ಟಿಗೆಯಲ್ಲಿ ಐದು ಮತಗಳು ಹೆಚ್ಚಿಗೆ ಬಂದಿದೆ ಎಂದು ವಾಯವ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎನ್‌.ಬಿ. ಬನ್ನೂರ ಆಕ್ಷೇಪ ಸಲ್ಲಿಸಿದರು. ಆಗ ವ್ಯತ್ಯಾಸವಿದ್ದ ಮತ ಪೆಟ್ಟಿಗೆಯನ್ನು ಪರಿಶೀಲನೆಗೆ ಪ್ರತ್ಯೇಕವಾಗಿ ಇಡಲಾಯಿತು. ಇಳಕಲ್‌ ಪಟ್ಟಣದ ಮತಕೇಂದ್ರದಲ್ಲಿ 71 ಮತಗಳು ಚಲಾವಣೆಯಾಗಿವೆ ಎಂದು ನಮೂದಿಸಲಾಗಿದೆ. ಆದರೆ ಮತಪೆಟ್ಟಿಗೆಯಲ್ಲಿ 76 ಮತಪತ್ರಗಳಿವೆ. ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಪರವಾದ ಮತಗಳು ಇರಬಹುದು ಎಂಬ ಸಂದೇಹವಿದೆ. ಹೀಗಾಗಿ ಆಕ್ಷೇಪಣೆ ಸಲ್ಲಿಸಿದ್ದೇನೆ ಎಂದು ಎನ್‌.ಬಿ. ಬನ್ನೂರ ಹೇಳಿದರು. ಮತ ಪೆಟ್ಟಿಗೆಯಲ್ಲಿ ಯಾವುದೇ ಗೊಂದಲ ಇಲ್ಲ. ಮತಗಟ್ಟೆಯಲ್ಲಿದ್ದ ಚುನಾವಣ ಸಿಬಂದಿ ಎಣಿಸುವಾಗ ಸರಿಯಾಗಿ ಲೆಕ್ಕ ಮಾಡದೆ ತಪ್ಪು ಅಂಕಿಯನ್ನು ನಮೂದಿಸಿದ್ದಾರೆ. ಚಲಾವಣೆಯಾದ ಮತಗಳ ಸಂಖ್ಯೆ ಸರಿಯಾಗಿದೆ ಎಂದು ಚುನಾವಣಾಧಿಕಾರಿ ಆಮ್ಲನ್‌ ಆದಿತ್ಯ ಬಿಸ್ವಾಸ್‌ ಸ್ಪಷನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next