Advertisement

BJP: ನಾಳೆ ಸಿಎಂ ಆಯ್ಕೆ?- ಮೂರು ರಾಜ್ಯಗಳಿಗೆ ಬಿಜೆಪಿಯಿಂದ ವೀಕ್ಷಕರ ನೇಮಕ

12:14 AM Dec 09, 2023 | Team Udayavani |

ಹೊಸದಿಲ್ಲಿ: ಪಂಚರಾಜ್ಯಗಳ ಚುನಾವಣೆ ಫ‌ಲಿತಾಂಶ ಘೋಷಣೆಯಾಗಿ ಇನ್ನೇನು 2 ದಿನಗಳಲ್ಲಿ ವಾರ ತುಂಬಲಿದೆ. ಆದರೆ ಬಿಜೆಪಿ ಗೆಲುವು ಸಾಧಿಸಿರುವ ಮೂರು ರಾಜ್ಯಗಳಲ್ಲಿ ಇನ್ನೂ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಒಮ್ಮತ ಮೂಡಿಲ್ಲ. ಹೀಗಾಗಿ, ಆದಷ್ಟು ಬೇಗ ಈ ಪ್ರಕ್ರಿಯೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್‌ ಶುಕ್ರವಾರ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢಗಳಿಗೆ ವೀಕ್ಷಕರನ್ನು ನೇಮಕ ಮಾಡಿದೆ. ಇನ್ನೆರಡು ದಿನಗಳಲ್ಲೇ ಸಿಎಂ ಆಯ್ಕೆ ಪ್ರಕ್ರಿಯೆ ಅಂತಿಮಗೊಳ್ಳುವ ಸಾಧ್ಯತೆಯಿದೆ.

Advertisement

ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ರಾಜಸ್ಥಾನದ ಹೊಣೆ ನೀಡಲಾಗಿದ್ದು, ಇವರು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾಬ್ಡೆ ಮತ್ತು ಛತ್ತೀಸ್‌ಗಢ ರಾಜ್ಯಸಭೆ ಸದಸ್ಯ ಸರೋಜ್‌ ಪಾಂಡೆ ಅವರೊಂದಿಗೆ ಸೇರಿ ರಾಜಸ್ಥಾನ ಸಿಎಂ ಹುದ್ದೆಗೆ ಹೆಸರನ್ನು ಅಂತಿಮಗೊಳಿಸುವ ಕೆಲಸ ಮಾಡಲಿದ್ದಾರೆ. ರಾಜನಾಥ್‌ ಅವರು ರಜಪೂತ್‌ ಸಮುದಾಯಕ್ಕೆ ಸೇರಿದ್ದು, ನಿಷ್ಪಕ್ಷ ನಾಯಕರೂ ಹೌದು. ಯಾರ ಪರವೂ ಪಕ್ಷಪಾತ ಮಾಡದ ತಟಸ್ಥ ನಾಯಕನನ್ನೇ ವೀಕ್ಷಕರನ್ನಾಗಿ ನೇಮಿಸಬೇಕು ಎಂಬ ಮಾಜಿ ಸಿಎಂ ವಸುಂಧರಾ ರಾಜೇ ಅವರ ಮನವಿಗೆ ಒಪ್ಪಿ ಹೈಕಮಾಂಡ್‌ ರಾಜನಾಥ್‌ರಿಗೆ ಈ ಹೊಣೆ ವಹಿಸಿದೆ.

ಅದೇ ರೀತಿ, ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಮತ್ತು ಬಿಜೆಪಿ ಒಬಿಸಿ ಮೋರ್ಚಾ ಮುಖ್ಯಸ್ಥ ಕೆ. ಲಕ್ಷ್ಮಣ್‌ ಅವರು ಮಧ್ಯಪ್ರದೇಶದ ವೀಕ್ಷಕರಾಗಿದ್ದಾರೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್‌ ಮುಂಡಾ, ಕೇಂದ್ರ ಸಚಿವ ಸರ್ಬಾನಂದ ಸೊನೊವಾಲ್‌ ಮತ್ತು ಪ್ರಧಾನ ಕಾರ್ಯದರ್ಶಿ ದುಶ್ಯಂತ್‌ ಗೌತಮ್‌ ಅವರು ಛತ್ತೀಸ್‌ಗಢ ಸಿಎಂ ಆಯ್ಕೆಯ ಹೊಣೆಯನ್ನು ಹೊತ್ತಿದ್ದಾರೆ. ಮಧ್ಯಪ್ರದೇಶದ ಒಬಿಸಿ ಪ್ರಾಬಲ್ಯ, ಛತ್ತೀಸ್‌ಗಢದ ಬುಡಕಟ್ಟು ಬಾಹುಳ್ಯವನ್ನು ಗಮನದಲ್ಲಿಟ್ಟುಕೊಂಡೇ ಲಕ್ಷ್ಮಣ್‌ ಮತ್ತು ಅರ್ಜುನ್‌ರನ್ನು ಕೇಂದ್ರ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಈ ವೀಕ್ಷಕರು ಆಯಾ ರಾಜ್ಯಗಳ ಶಾಸಕರನ್ನು ಭೇಟಿಯಾಗಿ, ಮುಖ್ಯಮಂತ್ರಿಗಳನ್ನು ಆದಷ್ಟು ಬೇಗ ಆಯ್ಕೆ ಮಾಡುವ ಸಾಧ್ಯತೆಯಿದೆ. ಮಧ್ಯಪ್ರದೇಶದ ಸಿಎಂ ಸಸ್ಪೆನ್ಸ್‌ಗೆ ಬಹುತೇಕ ರವಿವಾರ ತೆರೆ ಬೀಳುವ ಸಾಧ್ಯತೆಯಿದೆ.

ರೇವಂತ್‌ ಪ್ರಜಾ ದರ್ಬಾರ್‌

ತೆಲಂಗಾಣದ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮಾರನೇ ದಿನವೇ ರೇವಂತ್‌ ರೆಡ್ಡಿ ಅವರು ಹೈದರಾಬಾದ್‌ನ ತಮ್ಮ ಅಧಿಕೃತ ನಿವಾಸದಲ್ಲಿ ಶುಕ್ರವಾರ ಪ್ರಜಾ ದರ್ಬಾರ್‌ ನಡೆಸಿದ್ದಾರೆ. ಭಾರೀ ಸಂಖ್ಯೆಯಲ್ಲಿ ನಿವಾಸಕ್ಕೆ ಆಗಮಿಸಿದ್ದ ರಾಜ್ಯದ ಜನರ ಕುಂದುಕೊರತೆಗಳನ್ನು ಆಲಿಸಿ, ಪರಿಹರಿಸುವ ಭರವಸೆ ನೀಡಿದ್ದಾರೆ. ಬಳಿಕ ಅವರು ದಿಲ್ಲಿಗೆ ತೆರಳಿದ್ದು, ಲೋಕಸಭೆಗೆ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.

Advertisement

ಬಂಗಲೆ ತೆರವಿಗೆ 30 ದಿನ ಗಡುವು

ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದುಕೊಂಡು ವಿಧಾನಸಭೆ ಚುನಾವಣೆಗಳಲ್ಲಿ ಗೆದ್ದು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ನಾಯಕರಿಗೆ ಒಂದು ತಿಂಗಳ ಒಳಗಾಗಿ ಸರಕಾರಿ ನಿವಾಸ ತೆರವುಗೊಳಿಸಲು ನೋಟಿಸ್‌ ನೀಡಲಾಗಿದೆ. ಬಿಜೆಪಿ ನಾಯಕರಾಗಿರುವ ರಾಕೇಶ್‌ ಸಿಂಗ್‌, ಉದಯ ಪ್ರತಾಪ್‌ ಸಿಂಗ್‌, ರಿತಿ ಪಾಠಕ್‌, ನರೇಂದ್ರ ಸಿಂಗ್‌ ತೋಮರ್‌, ಪ್ರಹ್ಲಾದ್‌ ಸಿಂಗ್‌ ಪಟೇಲ್‌ (ಎಲ್ಲರೂ ಮ.ಪ್ರದೇಶ), ದಿಯಾ ಕುಮಾರಿ ಮತ್ತು ರಾಜ್ಯವರ್ಧನ ಸಿಂಗ್‌ ರಾಥೋಡ್‌ (ರಾಜಸ್ಥಾನ), ಗೋಮತಿ ಸಾಯಿ ಮತ್ತು ಅರುಣ್‌ ಸಾವೋ ( ಛತ್ತೀಸ್‌ಗಢ), ರಾಜಸ್ಥಾನದಲ್ಲಿ ಶಾಸಕರಾಗಿರುವ ರಾಜ್ಯಸಭೆಯ ಹಿರಿಯ ಸದಸ್ಯ ಕಿರೋಡಿ ಲಾಲ್‌ ಮೀನಾ ಕೂಡ ತ್ಯಾಗಪತ್ರ ಸಲ್ಲಿಕೆ ಮಾಡಿದ್ದು, ಅವೆಲ್ಲವೂ ಅನುಮೋದನೆಗೊಂಡಿವೆ.

Advertisement

Udayavani is now on Telegram. Click here to join our channel and stay updated with the latest news.

Next