Advertisement

ಪಶ್ಚಿಮ ಶಿಕ್ಷಕರ ಕ್ಷೇತ್ರ ಪ್ರಭುತ್ವಕ್ಕೆ ಅಖಾಡ ಸಜ್ಜು

09:57 AM May 26, 2022 | Team Udayavani |

ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಅಖಾಡ ಸಜ್ಜಾಗಿದೆ. ಕ್ಷೇತ್ರದ ಮೇಲೆ ತಮ್ಮದೇ ವೈಯಕ್ತಿಕ ವರ್ಚಸ್ಸು ಹೊಂದಿರುವ, ಸತತ ಏಳು ಗೆಲುವುಗಳನ್ನು ಕಂಡಿರುವ ವಿಧಾನ ಪರಿಷತ್ತು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರು 8ನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗಿಳಿದಿರೆ, ಕಾಂಗ್ರೆಸ್‌ನಿಂದ ಬಸವರಾಜ ಗುರಿಕಾರ, ಜೆಡಿಎಸ್‌ನಿಂದ ಶ್ರೀಶೈಲ ಗಡದಿನ್ನಿ ಸ್ಪರ್ಧೆಯಲ್ಲಿದ್ದಾರೆ. ಇಲ್ಲಿ ಯಾರು ಗೆದ್ದರೂ ಅದು ದಾಖಲೆಯೇ.

Advertisement

ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಹೊಸ ಪ್ರತಿನಿಧಿ ಆಯ್ಕೆ ಪೈಪೋಟಿ ಶುರುವಾಗಿದೆ. ಪ್ರಮುಖ ಮೂರು ಪಕ್ಷಗಳು ಈಗಾಗಲೇ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿಯಾಗಿದೆ. ಕಾಂಗ್ರೆಸ್‌ ಪಕ್ಷ ಹಲವು ತಿಂಗಳ ಮುಂಚೆಯೇ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದರೆ, ಜೆಡಿಎಸ್‌ ಎರಡು ದಿನಗಳ ಹಿಂದೆಯಷ್ಟೆ ಅಭ್ಯರ್ಥಿಯನ್ನು ಅಖೈರುಗೊಳಿಸಿತ್ತು. ಬಿಜೆಪಿಯಲ್ಲಿ ಟಿಕೆಟ್‌ ಪೈಪೋಟಿ ತೀವ್ರವಾಗಿದ್ದರೂ ಬಸವರಾಜ ಹೊರಟ್ಟಿ ಅವರು ಪಕ್ಷ ಸೇರ್ಪಡೆ ನಂತರದಲ್ಲಿ ಟಿಕೆಟ್‌ ಅವರಿಗೆ ಖಚಿತ ಎಂಬುದಾಗಿತ್ತಾದರೂ ಮಂಗಳವಾರ ಬೆಳಿಗ್ಗೆಯಷ್ಟೇ ಬಿಜೆಪಿ ಹೈಕಮಾಂಡ್‌ ಹೊರಟ್ಟಿಯವರು ಪಕ್ಷದ ಅಭ್ಯರ್ಥಿ ಎಂದು ಅಧಿಕೃತ ಮುದ್ರೆಯೊತ್ತಿತ್ತು. ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳಲ್ಲದೆ, ಪಕ್ಷೇತರರು ಕಣಕ್ಕಿಳಿಯಲಿದ್ದು, ಚುನಾವಣೆ ಅಖಾಡ ರಂಗೇರಲಿದೆ. ಮೂರು ಪಕ್ಷಗಳು ತಮ್ಮದೇ ತಂತ್ರಗಾರಿಕೆಯೊಂದಿಗೆ ಪ್ರಚಾರಕ್ಕಿಳಿಯಲಿವೆ.

8ನೇ ಗೆಲುವಿಗೆ ಹೊರಟ್ಟಿ ಯತ್ನ: ಬಸವರಾಜ ಹೊರಟ್ಟಿ ಅವರು ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ತಮ್ಮದೇ ಪ್ರಭುತ್ವ ಸಾಧಿಸಿದ್ದಾರೆ ಎಂದರೆ ತಪ್ಪಾಗಲಾರದು. ಇದೀಗ ಅವರಿಗೆ ಬಿಜೆಪಿ ಸಾಥ್‌ ಸಿಕ್ಕಿರುವುದು ಅವರ ಬಲ ಪ್ರಬಲಗೊಳಿಸಿದೆ ಎನ್ನಲಾಗುತ್ತಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಗೆಲ್ಲುವ ಮೂಲಕ ಜೆಡಿಎಸ್‌ಗೆ ವಿಧಾನ ಪರಿಷತ್ತುನಲ್ಲಿ ಒಂದು ಸ್ಥಾನ ಹೆಚ್ಚಿಸುತ್ತಿದ್ದರೆ ವಿನಃ ಚುನಾವಣೆ ದೃಷ್ಟಿಯಿಂದ ಹೊರಟ್ಟಿಯವರಿಗೆ ಜೆಡಿಎಸ್‌ ನಿಂದ ದೊಡ್ಡ ಲಾಭವೇನೂ ಆಗಿಲ್ಲ. ಶಿಕ್ಷಕರ ಜತೆಗಿನ ನೇರ ಒಡನಾಟ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವೇ ಹೊರಟ್ಟಿಯವರನ್ನು ಕೈ ಹಿಡಿಯುತ್ತ ಬಂದಿದೆ ಎಂಬುದು ಅನೇಕರ ಅನಿಸಿಕೆಯಾಗಿದೆ.

1980ರಲ್ಲಿ ಅಂದಿನ ರಾಜಕೀಯ ಘಟಾನುಘಟಿಗಳನ್ನು ಮಣಿಸಿ ಮೊದಲ ಬಾರಿಗೆ ವಿಧಾನ ಪರಿಷತ್ತು ಪ್ರವೇಶಿಸಿ ಗಮನ ಸೆಳೆದಿದ್ದರು. ರಾಜಕೀಯ ಹಿನ್ನೆಲೆಯೇ ಇಲ್ಲದವರಿಗೆ ಇದೊಂದು ಆಕಸ್ಮಿಕ ಗೆಲುವು, ಮುಂದೆ ಇದು ಮರುಕಳುಹಿಸದು ಎಂದು ಕೊಂಡವರ ಅನಿಸಿಕೆಗಳನ್ನು ಸುಳ್ಳಾಗಿಸಿ ಬಸವರಾಜ ಹೊರಟ್ಟಿಯವರು ಕ್ಷೇತ್ರದಲ್ಲಿ ತಮ್ಮದೇ ಪ್ರಭಾವ ಹೆಚ್ಚಿಸುತ್ತ ಸಾಗಿ ಸತತವಾಗಿ ಏಳು ಬಾರಿ ಆಯ್ಕೆಯಾಗುವ ಮೂಲದ ದೇಶದಲ್ಲಿಯೇ ದಾಖಲೆ ಬರೆದಿದ್ದು, ಸುದೀರ್ಘ‌ ಅವಧಿಯ ವಿಧಾನ ಪರಿಷತ್ತು ಸದಸ್ಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದರ ನಡುವೆ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌, ಕಾನೂನು-ಸಂಸದೀಯ ವ್ಯವಹಾರಗಳು, ಸಣ್ಣ ಉಳಿತಾಯ, ಶಿಕ್ಷಣ ಸಚಿವರಾಗಿ, ವಿಧಾನ ಪರಿಷತ್ತು ಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದು, ಇದೀಗ ಸತತ 8ನೇ ಬಾರಿಗೆ ವಿಧಾನ ಪರಿಷತ್ತು ಪ್ರವೇಶದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಬಿಜೆಪಿಗೆ ಆಗಮಿಸುವಂತೆ ಸ್ವತಃ ಬಿ.ಎಸ್‌ .ಯಡಿಯೂರಪ್ಪ ಅವರೇ ಬಸವರಾಜ ಹೊರಟ್ಟಿ ಅವರ ನಿವಾಸಕ್ಕೆ ತೆರಳಿ ಆಹ್ವಾನ ನೀಡಿದ್ದರಲ್ಲದೆ, ಸಂಪುಟದಲ್ಲಿ ಉತ್ತಮ ಸ್ಥಾನದ ಭರವಸೆಯನ್ನು ನೀಡಿದ್ದರೂ, ಅದನ್ನು ನಿರಾಕರಿಸಿ ಜೆಡಿಎಸ್‌ನಲ್ಲೇ ಮುಂದುವರಿದಿದ್ದರು. ಮುಂದೆ 2010ರಲ್ಲಿ ನಡೆದ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಹೊರಟ್ಟಿ ಅವರನ್ನು ಸೋಲಿಸಲೇಬೇಕೆಂದು ಸ್ವತಃ ಯಡಿಯೂರಪ್ಪ ಅವರೇ ಹೆಚ್ಚಿನ ಆಸಕ್ತಿ ವಹಿಸಿದ್ದರೂ, ಶಿಕ್ಷಕರು ಮಾತ್ರ ಹೊರಟ್ಟಿ ಕೈ ಬಿಟ್ಟಿರಲಿಲ್ಲ. ಕಾಲ ಬದಲಾಗಿದೆ ಇದೀಗ ಹೊರಟ್ಟಿ ಅವರೇ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.

Advertisement

ಬಿಜೆಪಿಯಲ್ಲಿ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿ ನೋಂದಣಿ, ನಿಯೋಜಿತ ಬಿಜೆಪಿ ಅಭ್ಯರ್ಥಿ ಎಂದು ಪ್ರಚಾರ ನಡೆಸಿದ್ದ ವಿಧಾನ ಪರಿಷತ್ತು ಮಾಜಿ ಸದಸ್ಯ ಮೋಹನ ಲಿಂಬಿಕಾಯಿವರು ಟಿಕೆಟ್‌ ತಪ್ಪಿದೆ.

ಕಾಂಗ್ರೆಸ್‌ ಪಕ್ಷ ಕೆಲ ತಿಂಗಳ ಹಿಂದೆಯೇ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರಮಟ್ಟದ ಸಂಘಟನೆ ಉಪಾಧ್ಯಕ್ಷರಾಗಿರುವ ಬಸವರಾಜ ಗುರಿಕಾರ ಅವರನ್ನು ತನ್ನ ಆಭ್ಯರ್ಥಿಯಾಗಿಸಿದೆ. ಗುರಿಕಾರ ಅವರು ಶಿಕ್ಷಕರ ಜತೆ ತಮ್ಮದೇ ಒಡನಾಟ ಹೊಂದಿದ್ದಾರೆ. ಈಗಾಗಲೇ ಅವರು ಕ್ಷೇತ್ರದಲ್ಲಿ ನೋಂದಣಿ, ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಪ್ರಾಥಮಿಕ ಶಿಕ್ಷಕರೊಂದಿಗೆ ಹೆಚ್ಚಿನ ಒಡನಾಟ ಹೊಂದಿರುವ ಗುರಿಕಾರ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಮತದಾರರಾದ ಪ್ರೌಢಶಾಲೆಯಿಂದ ವಿಶ್ವವಿದ್ಯಾಲಯವರೆಗೆ, ವೈದ್ಯಕೀಯ ಇನ್ನಿತರೆ ವೃತ್ತಿಪರ ಶಿಕ್ಷಕರ ಜತೆ ಹೆಚ್ಚಿನ ಒಡನಾಟ ಸಾಧಿಸಬೇಕಾಗಿದೆ.

ಕಾಂಗ್ರೆಸ್‌ ಪಕ್ಷ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕೆಂಬ ನಿಟ್ಟಿನಲ್ಲಿ ಹಲವು ಯತ್ನಗಳಿಗೆ ಮುಂದಾಗಿದೆಯಾದರೂ, ಕ್ಷೇತ್ರದ ಮತದಾರರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಇಲ್ಲಿವರೆಗೂ ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್‌ ಪ್ರತಿನಿಧಿಸುತ್ತಿತ್ತು. ಬಸವರಾಜ ಹೊರಟ್ಟಿ ಜೆಡಿಎಸ್‌ ತೊರೆದು ಬಿಜೆಪಿ ಸೇರ್ಪಡೆಗೊಂಡ ನಂತರ ಜೆಡಿಎಸ್‌ನಲ್ಲಿ ದಿಢೀರ್‌ನೇ ಉದ್ಬವಗೊಂಡು ಅಭ್ಯರ್ಥಿಯಾದವರು ಹೊರಟ್ಟಿ ಅವರೊಂದಿಗೆ ಹಲವು ವರ್ಷಗಳ ಒಡನಾಟ ಹೊಂದಿದ ನಿವೃತ್ತ ಶಿಕ್ಷಕ ಶ್ರೀಶೈಲ ಗಡದಿನ್ನಿ.

ಹೊರಟ್ಟಿಯವರ ಬೆಂಬಲಿಗರಾಗಿಯೇ ಗುರುತಿಸಿಕೊಂಡಿದ್ದ ಗುಡದಿನ್ನಿ, ಕೆಲ ತಿಂಗಳುಗಳಿಂದಲೇ ಅವರಿಂದ ದೂರ ಸರಿದಿದ್ದು, ಪಕ್ಷೇತರರಾಗಿ ಸ್ಪರ್ಧೆಗಿಳಿಯುವ ಆಸೆ ಹೊಂದಿದ್ದರು ಎನ್ನಲಾಗಿದೆ. ಆದರೆ ದಿಢೀರ್‌ನೆ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದರ ಹಿಂದೆ ಕೆಲವೊಂದು ರಾಜಕೀಯ ಲೆಕ್ಕಾಚಾರಗಳು ಅಡಗಿವೆ ಎಂದು ಹೇಳಲಾಗುತ್ತಿದೆ.

ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ ವಿಶೇಷವೆಂದ ಫಲಿತಾಂಶ ಏನೇ ಬಂದರೂ ಅದು ದಾಖಲೆ ಆಗಲಿದೆ. ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರು ಗೆಲುವು ಸಾಧಿಸಿದರೆ ಸತತ 8ನೇ ಬಾರಿ ಗೆಲುವಿನ ಹೊಸದೊಂದು ದಾಖಲೆ ಆಗಲಿದೆ. ಕಾಂಗ್ರೆಸ್‌-ಜೆಡಿಎಸ್‌ ಅಥವಾ ಪಕ್ಷೇತರ ಅಭ್ಯರ್ಥಿಗಳಲ್ಲಿ ಯಾರೊಬ್ಬರು ಗೆದ್ದರೂ ಅದು ಮತ್ತೂಂದು ದಾಖಲೆ ಆಗಲಿದೆ. ಬಿಜೆಪಿ ತನ್ನದೇ ಸಂಘಟನಾ ಶಕ್ತಿ ಹೊಂದಿದೆ, ಶಿಕ್ಷಕರೊಂದಿಗೆ ಹೊರಟ್ಟಿ ಒಡನಾಟ ಮಹತ್ವದ ಫಲ ನೀಡುವ, ಗೆಲುವನ್ನು ಅನಾಯಾಸಗೊಳಿಸಲಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾದರೆ, ಹೇಗಾದರೂ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬೇಕೆಂಬುದು ಎದುರಾಳಿ ಪಕ್ಷಗಳ ಯತ್ನವಾಗಿದೆ. ಯಾರಿಗೆ ಗೆಲುವಾಗಲಿದೆ ಎಂಬುದು ಮತದಾರರ ಕೈಯಲ್ಲಿದೆ.

17244 ಪ್ಲಸ್‌ ಹೊಸಬರ ಸೇರ್ಪಡೆ:  ಪಶ್ಚಿಮ ಶಿಕ್ಷಕರ ಕ್ಷೇತ್ರ ಒಟ್ಟು ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ಹೊಂದಿದೆ. ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಯಾಗಿವೆ. ಇದೇ ವರ್ಷದ ಜನವರಿ 1ರವರೆಗಿನ ನೋಂದಣಿ ಪ್ರಕಾರ ಕ್ಷೇತ್ರದಲ್ಲಿ ಒಟ್ಟು 17,244 ಶಿಕ್ಷಕ ಮತದಾರರಿದ್ದು, ಮೇ 26ರಂದು ಬಿಡುಗಡೆಯಾಗಲಿರುವ ಅಂತಿಮ ಹಂತದ ಮತದಾರ ಪಟ್ಟಿಯಲ್ಲಿ ಎಷ್ಟು ಜನ ಹೊಸದಾಗಿ ಸೇರ್ಪಡೆಯಾಗುತ್ತಾರೆ ಎಂದು ನೋಡಬೇಕಾಗಿದೆ. 17,244 ಮತದಾರರಲ್ಲಿ 10,601 ಶಿಕ್ಷಕರು , 6,643 ಶಿಕ್ಷಕಿಯರು ಇದ್ದಾರೆ. ನಾಲ್ಕು ಜಿಲ್ಲೆಗಳಲ್ಲಿ ಮತದಾರರ ಸಂಖ್ಯೆಯಲ್ಲಿ ಧಾರವಾಡ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಧಾರವಾಡ ಜಿಲ್ಲೆಯಲ್ಲಿ 5,889 ಮತದಾರರಿದ್ದರೆ, ಎರಡನೇ ಸ್ಥಾನದಲ್ಲಿ ಹಾವೇರಿ ಜಿಲ್ಲೆಯಲ್ಲಿ 4,630, ಉತ್ತರ ಕನ್ನಡ ಜಿಲ್ಲೆಯಲ್ಲಿ 3,499 ಹಾಗೂ ಗದಗ ಜಿಲ್ಲೆಯಲ್ಲಿ 3,226 ಮತದಾರರು ಇದ್ದಾರೆ. ನಾಲ್ಕು ಜಿಲ್ಲೆಗಳು ಸೇರಿ 76 ಮತ ಕೇಂದ್ರಗಳು ಸ್ಥಾಪನೆಯಾಗಲಿವೆ.

„ಅಮರೇಗೌಡ ಗೋನವಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next