Advertisement

ಚುನಾವಣೆಗೂ ಮೊದಲೇ ಪ್ರಚಾರದ ಅಬ್ಬರ

02:56 PM Mar 14, 2023 | Team Udayavani |

ದೊಡ್ಡಬಳ್ಳಾಪುರ: ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟಿಸುವುದು ಬಾಕಿ ಇದ್ದು, ನೀತಿ ಸಂಹಿತಿ ಇನ್ನೂ ಜಾರಿಯಾಗಿಲ್ಲ. ಆದರೆ, ನೀತಿ ಸಂಹಿತೆ ಜಾರಿಯಾಗುವುದರೊಳಗಾಗಿ ಮತದಾರರನ್ನು ಹೇಗಾದರೂ ಓಲೈಸಿಕೊಳ್ಳೋಣ ಎಂದು ರಾಜಕೀಯ ಪಕ್ಷಗಳು ಹಾಗೂ ಮುಖಂಡರು ಪ್ರಚಾರಕ್ಕಿಳಿದಿದ್ದಾರೆ.

Advertisement

ಕಳೆದ 6 ತಿಂಗಳಿನಿಂದ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಮತದಾರರನ್ನು ಆಕರ್ಷಿಸಲು ವಿವಿಧ ಕಸರತ್ತುಗಳು ನಡೆಯುತ್ತಿವೆ. ತಾಲೂಕಿನ ವಿವಿಧೆಡೆಗಳಿಂದ ಧರ್ಮಸ್ಥಳ, ನಂಜನಗೂಡು, ಮೇಲಮೆರುತ್ತೂರು ಓಂಶಕ್ತಿ ಮೊದಲಾದ ಕಡೆ ಪ್ರವಾಸಗಳನ್ನು ಕಳುಹಿಸಲಾಗುತ್ತಿದೆ. ವಿವಿಧೆಡೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುತ್ತಿದೆ. ನಾಟಕಗಳು, ಕ್ರೀಡಾಕೂಟದ ಆಯೋಜನೆಗಳು ಸಹ ನಿರಂತರವಾಗಿವೆ.

ಕಾಣಿಸಿದ ಗೋಡೆ ಬರಹಗಳು: ದಶಕಗಳ ಹಿಂದೆ ಚುನಾ ವಣೆ ಬಂತೆಂದರೆ ಅಬ್ಬರದ ಪ್ರಚಾರ, ಗೋಡೆ ಬರಹಗಳು, ಬ್ಯಾನರ್‌ಗಳು ರಾರಾಜಿಸುತ್ತಿದ್ದವು. 90ರ ದಶಕದಲ್ಲಿ ಟಿ. ಎನ್‌.ಶೇಷನ್‌ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾಗ ಇದಕ್ಕೆಲ್ಲ ಕಡಿವಾಣ ಹಾಕಿ, ಚುನಾವಣಾ ವೆಚ್ಚಕ್ಕೆ ಮಿತಿ ಹೇರಲಾಯಿತು. ಆನಂತರದಲ್ಲಿ ಕರಪತ್ರಗಳು ಚುನಾವಣಾ ಪ್ರಚಾರದ ಪ್ರಮುಖ ಪ್ರಚಾರ ಮಾಧ್ಯಮವಾಗಿತ್ತು. ಆದರೆ, ಈಗ ಇನ್ನೂ ನೀತಿ ಸಂಹಿತೆ ಜಾರಿಯಾಗಿಲ್ಲದಿರುವುದರಿಂದ, ಗೋಡೆಗಳ ಮೇಲೆ ಪ್ರಚಾರದ ಪೋಸ್ಟರ್‌ಗಳನ್ನು ಹಾಕಲಾಗುತ್ತಿದೆ. ಕಾಂಗ್ರೆಸ್‌ ಪಕ್ಷದ ಚುನಾವಣೆ ಪ್ರಣಾಳಿಕೆಯ ಭರವಸೆಗಳು, ಬಿಜೆಪಿಯ ಸರ್ಕಾರದ ಹಿಂದಿನ ಭರವಸೆಗಳು ಹಾಗೂ ಯೋಜನೆಗಳು, ಪ್ರಿಂಟಿಂಗ್‌ ಗೋಡೆ ಬರಹಗಳಲ್ಲಿದ್ದರೆ, ಜೆಡಿಎಸ್‌ನ ಪಂಚರತ್ನ ಯಾತ್ರೆಯ ಪೋಸ್ಟರ್‌ಗಳು ಚುನಾವಣಾ ಪ್ರಚಾರದ ಸರಕಾಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರ ಪ್ರಚಾರ: ಈಗ ಸಾಮಾಜಿಕ ಜಾಲತಾಣಗಳು ಚುನಾವಣಾ ಪ್ರಚಾರದಲ್ಲಿ ಹೆಚ್ಚು ಸಕ್ರಿಯವಾಗಿವೆ. ವಿವಿಧ ರಾಜಕೀಯ ಪಕ್ಷಗಳು ತಮ್ಮ ಭರವಸೆಗಳ ಪ್ರಚಾರರೊಂದಿಗೆ, ಇನ್ನೊಂದು ಪಕ್ಷದ ಅಥವಾ ಪ್ರಮುಖ ಮುಖಂಡರನ್ನು ತೆಗಳುವ ಫೋಟೋಗಳು ಹಾಗೂ ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ. ಉಡುಗೊರೆಗಳ ಅಬ್ಬರ: ಟಿಕೆಟ್‌ ಆಕಾಂಕ್ಷಿಗಳು ಹಾಗೂ ಪಕ್ಷಗಳ ಸಂಭಾವ್ಯ ಅಭ್ಯರ್ಥಿಗಳು ಮತದಾರರಿಗೆ ಉಡುಗೊರೆಗಳನ್ನು ನೀಡುವ ಮೂಲಕ ತಮ್ಮ ಅಸ್ತಿತ್ವ ಪ್ರತಿಪಾದಿಸಿಕೊಳ್ಳಲು ಹವಣಿಸಿಕೊಳ್ಳುತ್ತಿದ್ದಾರೆ. ಹಬ್ಬಗಳಲ್ಲಿ ದಿನಸಿ ಕಿಟ್‌ಗಳು, ಕಬ್ಬು ಸೇರಿದಂತೆ ವಿವಿಧ ಪದಾರ್ಥಗಳ ಉಡುಗೊರೆಗಳನ್ನು ನೀಡಲಾಗುತ್ತಿದೆ.

ಸಾರ್ವಜನಿಕ ಕೆಲಸಗಳು ಕುಂಠಿತ: ರಾಜಕೀಯ ಪಕ್ಷಗಳು ಹಾಗೂ ಮುಖಂಡರು ತಮ್ಮದೇ ಆದ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವು ದರಿಂದ ಜನರ ಕೆಲಸಗಳು ವಿಳಂಬವಾಗುತ್ತಿವೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ವಿವಿಧ ಸರ್ಕಾರಿ ಕಚೇರಿಗಳಲ್ಲಿ, ಕೆಲಸಗಳು ಸಕಾಲಕ್ಕೆ ಆಗುತ್ತಿಲ್ಲ. ರಸ್ತೆ, ನೀರು, ಮೂಲ ಸೌಕರ್ಯಗಳ ಬಗ್ಗೆ ದೂರುಗಳು ನೀಡುತ್ತಿದ್ದರೂ ಸ್ಪಂದಿಸುತ್ತಿಲ್ಲ. ಈಗಾಗಲೇ ಆರಂಭವಾಗಿರುವ ಕಾಮಗಾರಿಗಳು ಸಹ ವಿಳಂಬವಾಗುತ್ತಿವೆ. ಪರೀಕ್ಷೆಗೆ ನಿಯೋಜಿತರಾಗಿರುವ ಉಪನ್ಯಾಸಕರನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಿರುವುದರಿಂದ ಪರೀಕ್ಷಾ ಕಾರ್ಯಗಳಿಗೆ ತೊಂದರೆಯಾಗುತ್ತಿವೆ. ಮತದಾರರ ಆಮಿಷಗಳಿಗೆ ಚುನಾವಣಾ ನೀತಿ ಸಂಹಿತೆ ತೂಗುಗತ್ತಿ ಇದ್ದರೆ ತಾನೆ ಕೇಳುವುದು. ಅದಕ್ಕೆ ಈಗ ರಂಗೋಲಿ ಕೆಳಗೆ ನುಗ್ಗಿ ಮತದಾರರನ್ನು ಓಲೈಸುವ ಕಾರ್ಯಗಳು ಸಾಗುತ್ತಿದ್ದು, ಈ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು ಎನ್ನುತ್ತಾರೆ ಪ್ರಜ್ಞಾವಂತ ಮತದಾರರು.

Advertisement

ಚುನಾವಣೆಯದ್ದೇ ಚರ್ಚೆ: ಚುನಾವಣಾ ದಿನಾಂಕ ಇನ್ನೂ ಪ್ರಕಟವಾಗಿಲ್ಲವಾದರೂ ಸಹ ಚುನಾವಣೆ ಕುರಿತಂತೆ ಎಲ್ಲಡೆ ಚರ್ಚೆಗಳು ನಡೆಯುತ್ತಿವೆ. ಯಾರಿಗೆ ಪಕ್ಷದ ಟಿಕೆಟ್‌, ಯಾವ ಲಕ್ಷ ಮೇಲುಗೈ ಇತ್ಯಾದಿ ಚರ್ಚೆಗಳು ನಡೆಯುತ್ತಿವೆ. ಹಿಂದಿನ ಚುನಾವಣೆಗಳಲ್ಲಿ ನೀತಿ ಸಂಹಿತೆ ಜಾರಿಯಾಗುವ ತನಕ ಚುನಾವಣೆಯ ಕಾವು ಏರುತ್ತಿರಲಿಲ್ಲ. ಆದರೆ, ಈ ಬಾರಿ ನೀತಿ ಸಂಹಿತೆ ಜಾರಿಗೆ ಮುಂಚೆಯೇ ಎಲ್ಲಾ ಚುನಾವಣೆ ತಯಾರಿಗಾಗಿ ಎಂಬಂತೆ ಸಿದ್ದವಾದಂತಿದೆ.

ತಪಾಸಣೆ ಚುರುಕು: ಈ ನಡುವೆ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರಿಗೆ ವಿವಿಧ ಆಮಿಷಗಳನ್ನು ಒಡ್ಡುವುದು ಸಾಮಾನ್ಯವಾಗಿರುವ ಹಿನ್ನೆಲೆಯಲ್ಲಿ ಆಮಿಷಗಳನ್ನು ತಡೆಯಲು ಮುಹೂರ್ತಕ್ಕಾಗಿ ಕಾಯಬೇಡಿ ಎಂದು ಚುನಾವಣಾಧಿಕಾರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಬೆನ್ನಲ್ಲೇ ದೊಡ್ಡಬಳ್ಳಾಪುರ ಉಪ ವಿಭಾಗದಲ್ಲಿ ಪೊಲೀಸ್‌ ಇಲಾಖೆಯಿಂದ ಚೆಕ್‌ ಪೋಸ್ಟ್  ಗಳನ್ನು ತೆರೆದು ಅಕ್ರಮ ಹಣ ಅಥವಾ ವಸ್ತುಗಳ ಸಾಗಾಣಿಕೆಯನ್ನು ತಪಾಸಣೆ ಮಾಡಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next