Advertisement

ಕೈ-ದಳಕ್ಕೆ ಬಿಜೆಪಿ ಅಭ್ಯರ್ಥಿ ಆಯ್ಕೆ ಮೇಲೆ ಕಣ್ಣು

02:59 PM Jan 25, 2023 | Team Udayavani |

ಬಂಗಾರಪೇಟೆ: ಕ್ಷೇತ್ರದಲ್ಲಿ 2023ರ ವಿಧಾನಸಭೆ ಚುನಾವಣಾ ಕಾವು ದಿನೇ ದಿನೆ ಹೆಚ್ಚಾಗುತ್ತಿದ್ದು, ಚುನಾವಣಾ ಪ್ರಚಾರ ಆರಂಭಿಸದ ಬಿಜೆಪಿಯ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದಲ್ಲಿ ಆತಂಕ ಶುರುವಾಗಿದ್ದು, ಇಂತಹವರಿಗೇ ಬಿಜೆಪಿಯಲ್ಲಿ ಟಿಕೆಟ್‌ ನೀಡುವಂತೆ ಪ್ರತಿಪಾದಿಸುತ್ತಿರುವುದು ರಾಜಕೀಯದಲ್ಲಿ ಸಂಚಲನ ಉಂಟಾಗಿದೆ.

Advertisement

2018ರಲ್ಲಿ ನಡೆದ ಚುನಾವಣೆಯ ನಂತರ 2023ರ ಚುನಾವಣೆಯಲ್ಲಿ ನಡೆಯುವ ಚುನಾವಣೆಗೆ ಮಾಜಿ ಶಾಸಕ ಬಿ.ಪಿ.ವೆಂಕಟ ಮುನಿಯಪ್ಪ ಅವರ ಪುತ್ರ ಬಿ.ವಿ.ಮಹೇಶ್‌ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಪ್ರಸ್ತುತ ಟಿಕೆಟ್‌ ಆಕಾಂಕ್ಷಿಗಳಾಗಿರುವ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಹಾಗೂ ವಿ.ಶೇಷು ಐದು ವರ್ಷಗಳಿಂದಲೂ ಬಿಜೆಪಿ ಪಕ್ಷದಲ್ಲಿರಲಿಲ್ಲ. ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಗೊಂಡು ಎಂ.ಮಲ್ಲೇಶಬಾಬು ಪರವಾಗಿ ಕೆಲಸ ಮಾಡಿದ್ದರಿಂದ 49 ಸಾವಿರ ಮತಗಳನ್ನು ಪಡೆದು 2ನೇ ಸ್ಥಾನ ಗಳಿಸಿದ್ದರು. ಅನಂತರ ರಾಜಕೀಯದಲ್ಲಿ ತಟಸ್ಥರಾಗಿದ್ದ ಎಂ.ನಾರಾಯಣಸ್ವಾಮಿ ಕಳೇದ ವರ್ಷ ನಡೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಗೆ ಮರು ಸೇರ್ಪಡೆಗೊಂಡಿದ್ದಾರೆ.

ಇನ್ನೂ ವಿ.ಶೇಷು ಅವರ ತಾಯಿ ಗೋವಿಂದಮ್ಮರನ್ನು 2015ರಲ್ಲಿ ದೊಡ್ಡವಲಗಮಾದಿ ಗ್ರಾಪಂ ಅಧ್ಯಕ್ಷರನ್ನಾಗಿ ಮಾಡಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಿದ್ದರು. ಇವರು ಸಹ ಕಳೆದ ಆರು ತಿಂಗಳಿನಿಂದ ಬಿಜೆಪಿ ಅಭ್ಯರ್ಥಿ ಆಗಬೇಕೆಂದು ಒಡಾಡುತ್ತಿದ್ದಾರೆ. ಕಳೆದೆರಡು ವರ್ಷಗಳಿಂದ ಕ್ಷೇತ್ರದಲ್ಲಿ ಸಂಸದ ಎಸ್‌.ಮುನಿಸ್ವಾಮಿ ಹಾಲಿ ಕಾಂಗ್ರೆಸ್‌ ಶಾಸಕ ಎಸ್‌. ಎನ್‌.ನಾರಾಯಣಸ್ವಾಮಿ ವಿರುದ್ಧ ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್‌ ಬಿಜೆಪಿ ಅಭ್ಯರ್ಥಿ ಯಾಗಲಿದ್ದು, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಶತಾಯಗತಾಯ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕು ಎಂದು ಬಹಿರಂಗವಾಗಿ ಯೇ ಹೇಳಿಕೆ ನೀಡುತ್ತಿದ್ದರು.

ಪ್ರಸ್ತುತ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಪಕ್ಷದ ಹೈಕಮಾಂಡ್‌ ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಟಿಕೆಟ್‌ ಬಗ್ಗೆ ಮಾತನಾಡದಂತೆ ಸೂಚನೆ ನೀಡಿರು ವುದರಿಂದ ಸಂಸದರು ಎಲ್ಲೂ ಜಿಲ್ಲೆಯಲ್ಲಿ ಯಾವುದೇ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡುತ್ತಿಲ್ಲ. ಈಗಾಗಲೇ ಕ್ಷೇತ್ರದಲ್ಲಿ ಚುನಾವಣೆ ಎದುರಿಸಲು ತಯಾರಿ ನಡೆಸಿರುವ ಕಾಂಗ್ರೆಸ್‌ನ ಹಾಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿರಿಗೆ ಟಿಕೆಟ್‌ ನೀಡಲಿ ಎಂದು ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್‌ ವಲಯದಲ್ಲಿ ಎಂ.ನಾರಾಯಣಸ್ವಾಮಿ ಅವರಿಗೆ ಟಿಕೆಟ್‌ ಆಗೋಗಿದೆ ಎಂದೆಲ್ಲಾ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಪರವಾಗಿ ಮತಯಾಚನೆ ಮಾಡಿದ್ದರಿಂದೇ ಜೆಡಿಎಸ್‌ ಅಭ್ಯರ್ಥಿ ಮಲ್ಲೇಶ್‌ ಬಾಬು 49 ಸಾವಿರ ಪಡೆಯಲು ಸಾಧ್ಯವಾಗಿದೆ.

ಇಲ್ಲದಿದ್ದಲ್ಲಿ 20 ಸಾವಿರ ಗಡಿ ದಾಟುತ್ತಿರಲಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಜೆಡಿಎಸ್‌ ಮುಖಂಡರನ್ನು ಕೆರಳಿಸಿದೆ. ಇನ್ನೂ ಜೆಡಿಎಸ್‌ ಅಭ್ಯರ್ಥಿ ಎಂ.ಮಲ್ಲೇಶ್‌ ಬಾಬು ಮಾಜಿ ಶಾಸಕ ಎಂ.ನಾರಾಯಣ ಸ್ವಾಮಿರಿಗೆ ವಯಸ್ಸಾಗಿದೆ. ಬಿಜೆಪಿ ಪಕ್ಷದಲ್ಲಿ ಅವರಿಗೆ ಟಿಕೆಟ್‌ ನೀಡುವುದಿಲ್ಲ. ಬಿ.ವಿ.ಮಹೇಶ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಲಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ.

Advertisement

ಬಿ.ವಿ.ಮಹೇಶ್‌ರಿಗೆ ಟಿಕೆಟ್‌ ನೀಡಿದರೆ ಎಸ್ಸಿ ಮತಗಳನ್ನು ಕಾಂಗ್ರೆಸ್‌-ಬಿಜೆಪಿ ಹಂಚಿಕೆ ಮಾಡಿಕೊಂಡರೆ ಹೆಚ್ಚಾಗಿ ವಕ್ಕಲಿಗರು ಹಾಗೂ ಬೋವಿ ಜನಾಂಗದ ಮತಗಳು ಜೆಡಿಎಸ್‌ ಅಭ್ಯರ್ಥಿಗೆ ಬರಲಿದ್ದು, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಅಭ್ಯರ್ಥಿ ಆಗದೇ ಇದ್ದಲ್ಲಿ ಜೆಡಿಎಸ್‌ ಗೆಲುವು ಗ್ಯಾರಂಟಿ ಎಂದೆಲ್ಲಾ ಆಲೋಚನೆಗಳು ನಡೆಯುತ್ತಿವೆ. ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ಬಿ.ವಿ.ಮಹೇಶ್‌ರಿಗೆ ಟಿಕೆಟ್‌ ನೀಡುವ ಬಗ್ಗೆ ಹಾಗೂ ನೀಡದೇ ಇರುವ ಬಗ್ಗೆ ಕಾಂಗ್ರೆಸ್‌ -ಜೆಡಿಎಸ್‌ ಪಕ್ಷಗಳಲ್ಲಿ ರಾಜಕೀಯ ವಿಶ್ಲೇಷಣೆ ನಡೆಯುತ್ತಿದೆ. 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಸೋತಿರುವುದರಿಂದ ಹಾಗೂ ಬಿಜೆಪಿ ಪಕ್ಷದಲ್ಲಿ 70 ವರ್ಷಗಳು ಕಳೆದರೆ ಟಿಕೆಟ್‌ ನೀಡುವುದು ಕಷ್ಠ ಎನ್ನಲಾಗುತ್ತಿದ್ದು, ಇವರ ಪುತ್ರ ಬಿ.ವಿ.ಮಹೇಶ್‌ರಿಗೆ ಟಿಕೆಟ್‌ ಶತಸಿದ್ದ ಎಂದು ಹೇಳಲಾಗುತ್ತಿದ್ದು, ಈ ಬಾರಿ ಕ್ಷೇತ್ರದಲ್ಲಿ ಯುವಕರಿಗೆ ಹೆಚ್ಚಿನ ಮನ್ನಣೆ ಸಿಗುವ ಅಲೆ ಎದ್ದಿರುವುದರಿಂದ ಬಿಜೆಪಿ ಪಕ್ಷದ ಟಿಕೆಟ್‌ ಬಿ.ವಿ.ಮಹೇಶ್‌ರಿಗೆ ಸಿಗಲಿದೆ ಎನ್ನಲಾಗುತ್ತಿದೆ.

ಮತಗಳು ಇಬ್ಭಾಗವಾಗುವ ಸಾಧ್ಯತೆ : ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದರೆ ಇವರ ಪರವಾಗಿ ಹೆಚ್ಚಾಗಿ ಬೋವಿ ಜನಾಂಗ ಹಾಗೂ ವಕ್ಕಲಿಗರು ಬೆಂಬಲವಾಗಿ ನಿಲ್ಲುತ್ತಾರೆ. ಇದರಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಹೋಗುವ ಮತಗಳನ್ನು ಇಬ್ಟಾಗವಾದರೆ ಕಾಂಗ್ರೆಸ್‌ಗೆ ಹೆಚ್ಚು ಅನುಕೂಲವಾಗಲಿದ್ದು, ಬಿ.ವಿ.ಮಹೇಶ್‌ರಿಗೆ ಬಿಜೆಪಿ ಟಿಕೆಟ್‌ ನೀಡಿದರೆ ಬೋವಿ ಜನಾಂಗ ಮತ ಹಾಕುವುದಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ಬರುವ ಮತಗಳನ್ನು ಬಿ.ವಿ.ಮಹೇಶ್‌ ಪಡೆದುಕೊಂಡರೆ ಕಾಂಗ್ರೆಸ್‌ಗೆ ಅನ್ಯಾಯವಾಗುವುದರಿಂದ ಬಿಜೆಪಿಯಲ್ಲಿ ಎಂ.ನಾರಾಯಣಸ್ವಾಮಿರಿಗೆ ಟಿಕೆಟ್‌ ಸಿಗಲಿದ್ದು, ಬಿ.ವಿ.ಮಹೇಶ್‌ರಿಗೆ ಟಿಕೆಟ್‌ ನೀಡುವುದಿಲ್ಲ ಎಂದು ಕಾಂಗ್ರೆಸ್‌ ಪಕ್ಷವೇ ಬಹಿರಂಗವಾಗಿ ಪ್ರಚಾರ ಮಾಡುತ್ತಿದೆ.

ಅಭಿವೃದ್ಧಿ ಬಿಜೆಪಿಗೆ ಶ್ರೀರಕ್ಷೆ : 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲಾ ಪ್ರಯತ್ನಗಳು ಮಾಡುತ್ತಿವೆ. ಈಗಾಗಲೇ ಎಲ್ಲಾ ಬೂತ್‌ ಸಮಿತಿಗಳನ್ನು ರಚನೆ ಮಾಡಿ ಸಂಘಟನೆ ಮಾಡುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ -ಜೆಡಿಎಸ್‌ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸುವುದಕ್ಕಿಂತ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯವಾಗಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕ್ಷೇತ್ರದಲ್ಲಿ ಅಲೆ ಎದ್ದಿರುವುದರಿಂದ ಮುಂದಿನ ಚುನಾವಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಅಭಿವೃದ್ಧಿಯೇ ಬಿಜೆಪಿ ಗೆಲುವಿಗೆ ಶ್ರೀರಕ್ಷೆಯಾಗಿದೆ. ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ಹೆಚ್ಚಿರಬಹುದು ಯಾರಿಗೆ ಟಿಕೆಟ್‌ ನೀಡಿದರೂ ಒಗ್ಗಟ್ಟಿನಿಂದ ಬಿಜೆಪಿ ಅಭ್ಯರ್ಥಿ ಗೆಲುವು ಆಗಲಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಎಂ. ನಾಗೇಶ್‌ ತಿಳಿಸಿದರು. ‌

-ಎಂ.ಸಿ.ಮಂಜುನಾಥ್

Advertisement

Udayavani is now on Telegram. Click here to join our channel and stay updated with the latest news.

Next