Advertisement

ಮತ ಬಳಿಕ ಬೆರಳಿಗೆ ಶಾಯಿ ಇಲ್ಲ?

09:39 AM Oct 15, 2018 | |

ಹೊಸದಿಲ್ಲಿ /ಹೈದರಾಬಾದ್‌: ವಿಧಾನಸಭೆ ಚುನಾವಣೆ ನಡೆಯಲಿರುವ ಛತ್ತೀಸ್‌ಘಢ‌ದಲ್ಲಿ ಮತದಾನವಾದ ಬಳಿಕ ಬೆರಳಿಗೆ ಅಳಿಸಲಾಗದ ಶಾಯಿ ಹಾಕುವ ಪ್ರಕ್ರಿಯೆ ಕೈಬಿಡುವ ಸಾಧ್ಯತೆ ಇದೆ. ನಕ್ಸಲೀಯರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಹಕ್ಕು ಚಲಾವಣೆಯ ಬಳಿಕ ಸಾರ್ವಜನಿಕರಿಗೆ ತೊಂದರೆ ನೀಡಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದಷ್ಟೇ ನಕ್ಸಲ್‌ ಪೀಡಿತ ಜಿಲ್ಲೆಗಳ ಗ್ರಾಮಸ್ಥರು ಬಸ್ತಾರ್‌, ದಂತೇವಾಡ ಮತ್ತು ಇತರ ಜಿಲ್ಲೆಗಳಲ್ಲಿ ನಡೆದಿದ್ದ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಆಯಾ ಜಿಲ್ಲಾಧಿಕಾರಿ ಗಳಿಗೆ ಮನವಿ ಮಾಡಿ, ಮತ ಹಾಕಲು ಸ್ಥಳೀಯರು ಉತ್ಸುಕರಾಗಿದ್ದೇವೆ. ಆದರೆ ಬೆರಳಿಗೆ ಶಾಯಿ ಹಾಕಬೇಡಿ ಎಂದು ಒತ್ತಾಯಿಸಿದ್ದರು.
ಅದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಚುನಾವಣಾ ಆಯೋಗ ಅಳಿಸಲಾಗದ ಶಾಯಿ ಹಾಕುವ ನಿಯಮ ಕೈಬಿಡುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗ ಪರಿಶೀಲನೆ ನಡೆಸಿ ಶೀಘ್ರ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ. ಅದಕ್ಕಾಗಿ 1961ರ ಚುನಾವಣಾ ಕಾಯ್ದೆಯ ಸೆಕ್ಷನ್‌ 49 (ಕೆ)ಗೆ ತಿದ್ದುಪಡಿ ತರಬೇಕಾಗುತ್ತದೆ ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು “ದ ಹಿಂದುಸ್ತಾನ್‌ ಟೈಮ್ಸ್‌’ ಪತ್ರಿಕೆಗೆ ತಿಳಿಸಿದ್ದಾರೆ. ಈ ಸಲಹೆಯನ್ನು ಪರಿಗಣಿಸಬಹುದು ಎಂದು ಆಯೋಗ ಕೇಂದ್ರ ಕಾನೂನು ಸಚಿವಾಲಯಕ್ಕೂ ಶಿಫಾರಸು ಮಾಡಲಿದೆ. ನ.12 ಮತ್ತು 20ರಂದು ಮತದಾನ ನಡೆಯಲಿದೆ. ನಿವೃತ್ತ ಮುಖ್ಯ ಚುನಾ ವಣಾ ಆಯುಕ್ತ ಎಚ್‌.ಎಸ್‌.ಬ್ರಹ್ಮ ಈ ಬಗ್ಗೆ ಪ್ರತಿಕ್ರಿಯೆ ನೀಡಿ ನಕಲಿ ಮತದಾನ ತಡೆಯುವ ಖಚಿತ ವ್ಯವಸ್ಥೆ ಈಗ ಇಲ್ಲದೇ ಇರುವುದರಿಂದ ಕೊನೆಯ ಹಂತದಲ್ಲಿ ಶಾಯಿ ಹಾಕುವುದನ್ನು ಕೈ ಬಿಡುವುದು ಉತ್ತಮವಲ್ಲ ಎಂದಿದ್ದಾರೆ. 

Advertisement

ಪ್ರಯತ್ನವಿದೆ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ನಿಯಂತ್ರಣಾತ್ಮಕ ಸ್ಥಿತಿಯಲ್ಲಿದೆ. ಇತರ ಪಕ್ಷಗಳ ಜತೆಗೆ ಮೈತ್ರಿ ಮಾಡುವ ವಿಚಾರ ಪ್ರಗತಿಯಲ್ಲಿದೆ ಎಂದು ಕಾಂಗ್ರೆಸ್‌ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. “ಪಿಟಿಐ’ ಸುದ್ದಿ ಸಂಸ್ಥೆ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಬಿಎಸ್‌ಪಿ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿರುವುದರಿಂದ ಸಮಸ್ಯೆ ಆಗಲಾರದು ಎಂದಿದ್ದಾರೆ. 14 ವರ್ಷಗಳಿಂದ ಆಡಳಿತ ದಲ್ಲಿ ರುವ ಬಿಜೆಪಿಯನ್ನು ಕಿತ್ತೂಗೆಯಲು ಪಕ್ಷ ಕಾರ್ಯನಿರತ ವಾಗಿದೆ ಎಂದಿದ್ದಾರೆ.

ಆಸ್ಪತ್ರೆ ಮಾಡುವೆವು:  ಡಿ.7ರಂದು ನಡೆವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸದ್ಯ ತೆಲಂಗಾಣ ಮುಖ್ಯಮಂತ್ರಿ ಅಧಿಕೃತ ನಿವಾಸವಾಗಿರುವ “ಪ್ರಗತಿ ಭವನ’ವನ್ನು ಆಸ್ಪತ್ರೆಯಾಗಿ ಬದಲು ಮಾಡುತ್ತೇವೆ ಎಂದು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎನ್‌.ಉತ್ತಮ ಕುಮಾರ್‌ ರೆಡ್ಡಿ ಹೇಳಿದ್ದಾರೆ. 9 ಎಕರೆ ಪ್ರದೇಶದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ನಿವಾಸ ನಿರಂಕುಶ ಮತ್ತು ಶ್ರೀಮಂತಿಕೆ ಪ್ರತೀಕವಾಗಿದೆ ಎಂದು ರೆಡ್ಡಿ ಹೇಳಿದ್ದಾರೆ.

ಶಬರಿಮಲೆ ಪ್ರವಾಸದ ಭರವಸೆ 
ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ಶಬರಿಮಲೆಗೆ ಉಚಿತ ಯಾತ್ರೆ ಮತ್ತು ಸಂಜೆ 6ರ ಬಳಿಕ ಮದ್ಯ ಮಾರಾಟಕ್ಕೆ ನಿಷೇಧ. ವಾರಾಂತ್ಯದಲ್ಲಿ ಪೂರ್ಣ ನಿಷೇಧ. – ಇದು ಬಿಜೆಪಿಯ ವಾಗ್ಧಾನ ‌. ಜತೆಗೆ ವಿಶೇಷ ಹಬ್ಬಗಳ ಸಂದರ್ಭದಲ್ಲಿ ಪ್ರಮುಖ ತೀರ್ಥ ಕ್ಷೇತ್ರಗಳು ಮತ್ತು ಯಾತ್ರಾ ಸ್ಥಳಗಳಿಗೆ ಸಂಚರಿಸುವ ರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳ ಟಿಕೆಟ್‌ಗಳ ಮೇಲೆ ವಿಧಿಸಲಾಗುತ್ತಿರುವ ಸರ್ಚಾರ್ಜ್‌ ತೆಗೆದು ಹಾಕುವುದನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗುತ್ತದೆ ಎಂದು ಬಿಜೆಪಿ ನಾಯಕ ಎನ್‌.ವಿ.ಎಸ್‌.ಎಸ್‌. ಪ್ರಭಾಕರ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next