Advertisement

Election: ಜಿ.ಪಂ., ತಾ.ಪಂ. ಚುನಾವಣೆ ಸನ್ನಿಹಿತ?

10:53 PM Dec 19, 2023 | Team Udayavani |

ಬೆಂಗಳೂರು: ರಾಜ್ಯದ ಜಿಲ್ಲಾ ಪಂಚಾಯತ್‌ ಹಾಗೂ ತಾಲೂಕು ಪಂಚಾಯತ್‌ ಕ್ಷೇತ್ರಗಳ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ಚುರುಕುಗೊಳಿಸಲಾಗಿದ್ದು, ಮೀಸಲಾತಿ ಕರಡು ಆಧಿಸೂಚನೆಗೆ ಆಕ್ಷೇಪಣೆಗಳನ್ನು ಆಲಿಸಿ ಅದರ ಅನಂತರದ ಎರಡು ವಾರಗಳಲ್ಲಿ ಮೀಸಲಾತಿ ಅಂತಿಮಗೊಳಿಸಲಾಗುವುದು ಎಂದು ಸರಕಾರ ಹೈಕೋರ್ಟ್‌ ಹೇಳಿದೆ.

Advertisement

ಅವಧಿ ಮುಗಿದ ಜಿ.ಪಂ., ತಾ.ಪಂ.ಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಅನುವು ಮಾಡಿಕೊಡಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಹಾಗೂ ರಾಜ್ಯದಲ್ಲಿ ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರ ಮರುವಿಂಗಡಣೆಗೆ ಸೀಮಾ ನಿರ್ಣಯ ಆಯೋಗ ರಚಿಸಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಹಾಗೂ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಈ ವೇಳೆ ರಾಜ್ಯ ಸರಕಾರದ ಪರ ಅಡ್ವೋಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ವಿವರಿಸಿ, ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶ ನೀಡಲಾಗುವುದು. ಅದಾದ 2 ವಾರಗಳಲ್ಲಿ ಮೀಸಲಾತಿ ಅಂತಿಮಗೊಳಿಸಲಾಗುವುದು ಎಂದರು.

ಅಡ್ವೋಕೇಟ್‌ ಜನರಲ್‌ ಮೌಖೀಕ ಹೇಳಿಕೆಯನ್ನು ನ್ಯಾಯಾಲಯಕ್ಕೆ ನೀಡಿದ ಭರವಸೆಯನ್ನಾಗಿ ಪರಿಗಣಿಸಿದ ನ್ಯಾಯಪೀಠ, ಈ ಸಂಬಂಧ ಲಿಖೀತ ಪ್ರಮಾಣಪತ್ರ ಸಲ್ಲಿಸಲು ಸರಕಾರಕ್ಕೆ ನಿರ್ದೇಶನ ನೀಡಿತು. ಸಾಂವಿಧಾನಿಕ ಹುದ್ದೆಯಲ್ಲಿರುವ ಅಡ್ವೋಕೇಟ್‌ ಜನರಲ್‌ ನ್ಯಾಯಾಲಯಕ್ಕೆ ನೀಡಿರುವ ಭರವಸೆಯಂತೆ ಸರಕಾರ ಹಾಗೂ ಸಂಬಂಧಪಟ್ಟ ಸಂಸ್ಥೆ-ಪ್ರಾಧಿಕಾರಿಗಳು ನಡೆದುಕೊಳ್ಳಲಿ ಎಂದು ನ್ಯಾಯಪೀಠ ಹೇಳಿತು. ಒಂದೊಮ್ಮೆ ಅಡ್ವೋಕೇಟ್‌ ಜನರಲ್‌ ಅವರ ಭರವಸೆ ಕಾರ್ಯಗತಗೊಳ್ಳದಿದ್ದರೆ ಅರ್ಜಿದಾರರು (ರಾಜ್ಯ ಚುನಾವಣ ಆಯೋಗ) ಅಗತ್ಯ ಕ್ರಮಕ್ಕೆ ಮತ್ತೆ ನ್ಯಾಯಾಲಯದ ಮುಂದೆ ಬರಬಹುದು. ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿಗೆ ಸಂಬಂಧಿಸಿದ ವಿಷಯಗಳು ಬಿಟ್ಟು ಉಳಿದ ವಿಷಯಗಳು ಹಾಗೆಯೇ ಮುಕ್ತವಾಗಿರಲಿವೆ. ಅವುಗಳ ಬಗ್ಗೆ ಅಗತ್ಯ ಸಂದರ್ಭದಲ್ಲಿ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಲಿದೆ ಎಂದು ಹೇಳಿದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥಪಡಿಸಿತು. ರಾಜ್ಯ ಚುನಾವಣ ಆಯೋಗದ ಪರ ಹಿರಿಯ ವಕೀಲ ಕೆ.ಎನ್‌. ಫ‌ಣೀಂದ್ರ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next