ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಕ್ಕೆ ತೆರಳಿದ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ಪರ ಮತಯಾಚನೆ ಮಾಡಿದರು.
ಕಾಂಗ್ರೆಸ್ ಪಕ್ಷ ಛಿದ್ರ-ಛಿದ್ರವಾಗಿದೆ. ಕಾಂಗ್ರೆಸ್‌ನ ಹಲವು ಶಾಸಕರು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಅಧ್ಯಕ್ಷ ದಿನೇಶ ಗುಂಡೂರಾವ್ ಅವರು ಈ ಕುರಿತು ಮಾತನಾಡದಂತೆ ಹೇಳಿಕೆ ನೀಡುತ್ತಿದ್ದಾರೆ. ಇನ್ನೊಂದೆಡೆ ಉಪಮುಖ್ಯಮಂತ್ರಿ ಪರಮೇಶ್ವರ ಅವರು ಸಿಎಂ ಸ್ಥಾನ ಖಾಲಿ ಇಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಒಳಬೇಗುದಿ ಹೆಚ್ಚಾಗಿದೆ. ಇದು ಚುನಾವಣೆ ನಂತರ ನ್ಪೋಟಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ಕುಂದಗೋಳ ಚುನಾವಣೆ ಆಕಸ್ಮಿಕವಾಗಿ ಬಂದ ಚುನಾವಣೆ. ಇಡೀ ರಾಜ್ಯ ರಾಜಕಾರಣ ಈ ಚುನಾವಣೆ ಮೇಲೆ ನಿಂತಿದೆ. ಕಳೆದ ಐದು ವರ್ಷ ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದಿರುವುದನ್ನು ನಾವೆಲ್ಲರೂ ನೋಡಿದ್ದೇವೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ, ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ತರಲಾಗಿತ್ತು. ಆದರೆ ನಂತರ ಬಂದ ಸರಕಾರ ಅದನ್ನು ಕೈಬಿಟ್ಟಿತು. ಸದ್ಯ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದರು.
Advertisement
ತಾಲೂಕಿನ ರಟಗೇರಿ, ಕಳಸ, ಹರ್ಲಾಪುರ, ಚಾಕಲಬ್ಬಿ, ರೊಟ್ಟಿಗವಾಡ, ಯರಗುಪ್ಪಿ, ಹಿರೇನರ್ತಿ ಹಾಗೂ ಕುಂದಗೋಳ ಗ್ರಾಮಗಳಲ್ಲಿ ಮತ ಯಾಚನೆ ಮಾಡಿದರು. ರಟಗೇರಿ ಗ್ರಾಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಕುರುಬರು, ದಲಿತರು, ಹಿಂದುಳಿದ ಸಮಾಜಗಳ ಭಾಗವಾಗಿರುವ ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿರುವ ಹಲವಾರು ಜನರು ನಮ್ಮ ಪಕ್ಷಕ್ಕೆ ಆಗಮಿಸುತ್ತಿದ್ದಾರೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬೇಡ ಎನ್ನುವವರೆಲ್ಲರೂ ಬಿಜೆಪಿಗೆ ಬರುತ್ತಿದ್ದಾರೆ ಎಂದರು.
ಆರ್.ವಿ. ದೇಶಪಾಂಡೆ ಬದಲಿಗೆ ಸಿ.ಎಸ್. ಶಿವಳ್ಳಿ ಅವರಿಗೆ ಏಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಲಿಲ್ಲ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಲಿ. ಕುರುಬರಿಗೆ ಆದ್ಯತೆ ನೀಡುವುದಾಗಿ ಅವರು ನಾಟಕ ಮಾಡುತ್ತಾರೆ. ಕುರುಬರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ. ತಾನು ಹಿರಿಯ ಶಾಸಕನಾದರೂ ನನಗೆ ಮಂತ್ರಿ ಸ್ಥಾನ ನೀಡಿಲ್ಲ ಎಂದು ಸಿ.ಎಸ್. ಶಿವಳ್ಳಿ ಹಲವು ಬಾರಿ ಅಲವತ್ತುಕೊಂಡಿದ್ದರು. • ಜಗದೀಶ ಶೆಟ್ಟರ, ಮಾಜಿ ಮುಖ್ಯಮಂತ್ರಿ