ಪ್ರತಿ ಶುಕ್ರವಾರ ಬಂತೆಂದರೆ, ಸಹಜವಾಗಿಯೇ ಸಿನಿಪ್ರಿಯರು ಮತ್ತು ಸಿನಿಮಾ ಮಂದಿಯ ಚಿತ್ತ ಬಿಡುಗಡೆಯಾಗುವ ಸಿನಿಮಾಗಳ ಕಡೆಗೆ ನೆಟ್ಟಿರುತ್ತದೆ. ಅದರಲ್ಲೂ ಕೋವಿಡ್ ಲಾಕ್‌ಡೌನ್ ಬಳಿಕ ಕನ್ನಡ ಚಿತ್ರರಂಗದಲ್ಲಿ ಪ್ರತಿವಾರ ಕನಿಷ್ಟ ಮೂರ್‍ನಾಲ್ಕು ಸಿನಿಮಾಗಳಾದರೂ ತೆರೆಕಾಣುವುದು ಸರ್ವೇ ಸಾಮಾನ್ಯ ಎಂಬ ವಾತಾವರಣ ನಿರ್ಮಾಣವಾಗಿದೆ. ಕೆಲವೊಮ್ಮೆ ಸಿನಿಮಾಗಳ ಬಿಡುಗಡೆಯ ಈ ಸಂಖ್ಯೆ ಎರಡಂಕಿಯನ್ನು ದಾಟಿರುವ ಉದಾಹರಣೆಗಳೂ ಸಾಕಷ್ಟಿದೆ. ಹೀಗಾಗಿ ಚಂದನವನಕ್ಕೆ ಹೊಸ ರಂಗು ತರುವ ಶುಕ್ರವಾರದ ಕಡೆಗೆ ಬಹುತೇಕ ಚಿತ್ತ ನೆಟ್ಟಿರುತ್ತದೆ. ಆದರೆ ಕಳೆದ ಎರಡು ವಾರಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಬಿಡುಗಡೆಯ ರಂಗು ಕಾಣುತ್ತಿಲ್ಲ. ಅದಕ್ಕೆ ಕಾರಣ, ದಿನದಿಂದ ದಿನಕ್ಕೆ ಏರುತ್ತಿರುವ ವಿಧಾನಸಭಾ ಚುನಾವಣೆಯ ಕಾವು ಒಂದೆಡೆಯಾದರೆ, ಮತ್ತೂಂದೆಡೆ ಐಪಿಎಲ್ ಅಬ್ಬರ. ಈ ವಾರ ಕನ್ನಡದಿಂದ ಯಾವುದೇ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಆದರೆ, ಮುಂದಿನ ವಾರ ಒಂದಷ್ಟು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.
ಹೌದು, ಏಪ್ರಿಲ್ ಕೊನೆಯ ವಾರದಿಂದಲೇ ಚುನಾವಣಾ ಪ್ರಕ್ರಿಯೆ ಜೋರಾಗಿರುವುದರಿಂದ ರಾಜಕೀಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸಾಲು ಸಾಲು ಸಮಾವೇಶಗಳು, ರಾಜಕೀಯ ನಾಯಕರ ಬೃಹತ್ ರ್ಯಾಲಿಗಳು, ವಿವಿಧ ರೀತಿಯ ಬಹಿರಂಗ ಪ್ರಚಾರಗಳಿಂದ ರಾಜಕೀಯ ಪಕ್ಷಗಳು ಜನರನ್ನು ತಮ್ಮತ್ತ ಸೆಳೆಯುವ ಕಸರತ್ತು ಮಾಡುತ್ತಿವೆ. ಮತ್ತೂಂದೆಡೆ, ಐಪಿಎಲ್ ಪಂದ್ಯಾವಳಿಗಳತ್ತಲೂ ಜನ ಮುಖ ಮಾಡುತ್ತಿರುವುದರಿಂದ ಸಹಜವಾಗಿಯೇ ಈ ಸಮಯದಲ್ಲಿ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಿದರೆ, ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಾರಾ? ಎಂಬ ಆತಂಕ ನಿರ್ಮಾಪಕರದ್ದು. ಹೀಗಾಗಿ ಸದ್ಯಕ್ಕೆ ಚುನಾವಣಾ ಫಲಿತಾಂಶ ಪ್ರಕಟವಾಗುವವರೆಗೂ ಕಾದು ನೋಡುವ ತಂತ್ರಕ್ಕೆ ಶರಣಾಗಿರುವ ಅನೇಕ ನಿರ್ಮಾಪಕರು ಮೇ. 13ರ ನಂತರವೇ ತಮ್ಮ ಸಿನಿಮಾವನ್ನು ಥಿಯೇಟರ್‌ಗೆ ತರುವ ಯೋಚನೆಯಲ್ಲಿದ್ದಾರೆ.
ಹೀಗಾಗಿ ಏಪ್ರಿಲ್ ಕೊನೆಯ ಶುಕ್ರವಾರದಿಂದಲೇ ಕನ್ನಡ ಚಿತ್ರರಂಗದಲ್ಲಿ ಸಿನಿಮಾಗಳ ಬಿಡುಗಡೆಯ ಸಂಖ್ಯೆಯಲ್ಲಿ ನಿಧಾನವಾಗಿ ಇಳಿಕೆಯಾಗಿದೆ. ಏಪ್ರಿಲ್ 28 ರಂದು (ಶುಕ್ರವಾರ) ಕನ್ನಡದಲ್ಲಿ ವಿಜಯ ರಾಘವೇಂದ್ರ ಅಭಿನಯದ “ರಾಘು’ ಮತ್ತು ಜಗ್ಗೇಶ್ ಅಭಿನಯದ “ರಾಘವೇಂದ್ರ ಸ್ಟೋರ್’ ಎಂಬ ಎರಡು ಸಿನಿಮಾಗಳು ಮಾತ್ರ ತೆರೆಕಂಡಿದ್ದವು. ಇನ್ನು ಸದ್ಯಕ್ಕೆ ಮೇ ತಿಂಗಳ ಮೊದಲ ಶುಕ್ರವಾರ (ಮೇ. 5) ಯಾವುದೇ ಸಿನಿಮಾಗಳು ಕೂಡ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿಲ್ಲ. ಹೀಗಾಗಿ ಈ ಶುಕ್ರವಾರ ಕನ್ನಡದಲ್ಲಿ ಯಾವುದೇ ಸಿನಿಮಾಗಳು ತೆರೆಕಾಣುವ ಸೂಚನೆಗಳು ಕಾಣಿಸುತ್ತಿಲ್ಲ. ಈಗಾಗಲೇ ಮೇ ಮೊದಲ ವಾರ ಅಥವಾ ಎರಡನೇ ವಾರ ತೆರೆಗೆ ಬರಬೇಕು ಎಂದುಕೊಂಡಿದ್ದ ಅನೇಕ ಸಿನಿಮಾಗಳು ಮುಂದಕ್ಕೆ ಹೋಗಿವೆ