Advertisement

ಪಂಚರಾಜ್ಯಗಳಲ್ಲಿ ಚುನಾವಣಾ ಕಾವು; ಗರಿಗೆದರಿದ ರಾಜಕೀಯ ಚಟುವಟಿಕೆ

08:47 PM Oct 22, 2021 | Team Udayavani |

ನವದೆಹಲಿ: ದೇಶಾದ್ಯಂತ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ, ಮುಂದಿನ ವರ್ಷ ನಡೆಯಲಿರುವ ಪಂಚರಾಜ್ಯ ಚುನಾವಣೆಗೆ ವಿವಿಧ ರಾಜಕೀಯ ಪಕ್ಷಗಳ ಸಿದ್ಧತೆ ವೇಗ ಪಡೆದಿದೆ. ಉತ್ತರಪ್ರದೇಶ, ಪಂಜಾಬ್‌, ಗೋವಾ, ಉತ್ತರಾಖಂಡ, ಗುಜರಾತ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Advertisement

ಉತ್ತರಪ್ರದೇಶದಲ್ಲಿ ಈಗಾಗಲೇ ಬಿಜೆಪಿ, ಕಾಂಗ್ರೆಸ್‌, ಎಸ್ಪಿ, ಬಿಎಸ್ಪಿ, ಆಪ್‌ ನಡುವೆ ರಾಜಕೀಯ ವಾಕ್ಸಮರ ಜೋರಾಗಿಯೇ ನಡೆಯುತ್ತಿದೆ. ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಅವರು ಉ.ಪ್ರದೇಶದಲ್ಲೇ ಝಂಡಾಹೂಡಿದ್ದು, ದಿನೇ ದಿನ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೂ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಉಗ್ರವಾದದ ಬೀಜ ಬಿತ್ತಿದ್ದೇ ಕಾಂಗ್ರೆಸ್‌:
ಶುಕ್ರವಾರ ಲಕ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಯೋಗಿ ಅವರು ಪ್ರತಿಪಕ್ಷಗಳಾದ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷಗಳ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ 1952ರಲ್ಲಿ ವಿಶೇಷ ಸ್ಥಾನಮಾನ ನೀಡುವ ಮೂಲಕ “ಭಯೋತ್ಪಾದನೆಯ ಬೀಜ’ ಬಿತ್ತಿದ್ದೇ ಕಾಂಗ್ರೆಸ್‌. ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, “ಭಯೋತ್ಪಾದನೆಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯಿತು’ ಎಂದು ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. ಇದೇ ವೇಳೆ, ಎಸ್ಪಿ ವಿರುದ್ಧವೂ ಕಿಡಿಕಾರಿರುವ ಅವರು, “ರಾಜ್ಯದಲ್ಲಿ ಹಿಂದಿನ ಎಸ್‌ಪಿ ಸರ್ಕಾರವು ಭಯೋತ್ಪಾದಕರ ವಿರುದ್ಧದ ಎಲ್ಲ ಪ್ರಕರಣಗಳನ್ನೂ ವಾಪಸ್‌ ಪಡೆದುಕೊಂಡು, ಹಿಂದೂಗಳ ವಿರುದ್ಧ ಕೇಸು ದಾಖಲಿಸಿತು. ಶ್ರೀರಾಮನ ಭಕ್ತರ ವಿರುದ್ಧ ಗುಂಡು ಹಾರಿಸಿದರೆ, ಭಯೋತ್ಪಾದಕರಿಗೆ ಸನ್ಮಾನಿಸಿತು’ ಎಂದು ಆರೋಪಿಸಿದ್ದಾರೆ.

ಮುಂದಿನ ವಾರ ಗೋವಾಗೆ ದೀದಿ
ಹೊಸ ರಾಜ್ಯಗಳಿಗೆ ಟಿಎಂಸಿಯನ್ನು ವಿಸ್ತರಿಸಲು ಮುಂದಾಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂದಿನ ವಾರ ಗೋವಾಗೆ ಭೇಟಿ ನೀಡಲಿದ್ದಾರೆ. ಅ.28ರಿಂದ 2 ದಿನಗಳ ಕಾಲ ಗೋವಾಗೆ ತೆರಳಲಿರುವ ದೀದಿ, ಪಕ್ಷದ ನಾಯಕರೊಂದಿಗೆ ಸಭೆಯನ್ನೂ ನಡೆಸಲಿದ್ದಾರೆ. ದೀದಿ ಭೇಟಿಯನ್ನು ಬಿಜೆಪಿ “ಕೇವಲ ರಾಜಕೀಯ ಪ್ರವಾಸ’ ಎಂದು ಬಣ್ಣಿಸಿದೆ. ಇದೇ ವೇಳೆ, ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದು ಟಿಎಂಸಿಗೆ ಸೇರ್ಪಡೆಯಾಗಿರುವ ಗೋವಾದ ಮಾಜಿ ಸಿಎಂ ಲುಜಿನ್ಹೋ ಫ‌ಲೇರೋ ಅವರನ್ನು ಪಕ್ಷವು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಶುಕ್ರವಾರ ನೇಮಕ ಮಾಡಿದೆ.

ಇದನ್ನೂ ಓದಿ:ಜನತಾ ಬಜಾರ್‌ ಜಾಗದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕೃಷಿ ವಿಭಾಗದ ಕಟ್ಟಡ ನಿರ್ಮಾಣ

Advertisement

ಇಂದು ಕಾಂಗ್ರೆಸ್‌ ಅಭ್ಯರ್ಥಿಗಳ ಬಗ್ಗೆ ನಿರ್ಧಾರ
ಶನಿವಾರ ಕಾಂಗ್ರೆಸ್‌ ನಾಯಕರು ಸಭೆ ಸೇರಿ, ಉತ್ತರಪ್ರದೇಶದಲ್ಲಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇದೇ ವೇಳೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶುಕ್ರವಾರ ಗುಜರಾತ್‌ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಹೊಸ ಸಿಎಲ್‌ಪಿ ನಾಯಕ ನೇಮಕ ಕುರಿತು ಚರ್ಚಿಸಿದ್ದಾರೆ. ಹಾರ್ದಿಕ್‌ ಪಟೇಲ್‌, ಜಿಗ್ನೇಶ್‌ ಮೆವಾನಿ ಕೂಡ ಈ ಸಭೆಯಲ್ಲಿ ಭಾಗಿಯಾಗಿದ್ದರು.

ಯೆಚೂರಿ ಉತ್ತರಾಧಿಕಾರಿ ಯಾರು?
ಸಿಪಿಎಂ ಕೇಂದ್ರ ಸಮಿತಿಯ 3 ದಿನಗಳ ಸಭೆ ಗುರವಾರದಿಂದ ನಡೆಯುತ್ತಿದ್ದು, 2022ರ ಏಪ್ರಿಲ್‌ನಲ್ಲಿ ನಡೆಯುವ ಸಮ್ಮೇಳನದಲ್ಲಿ ಪ್ರಸ್ತುತಪಡಿಸಲಾಗುವ ರಾಜಕೀಯ ನಿರ್ಣಯಗಳ ಕರಡು ಸಿದ್ಧತೆ ಕುರಿತು ಚರ್ಚೆಗಳು ನಡೆದಿವೆ. ಮುಂದಿನ ತಿಂಗಳು ಪಕ್ಷದ ಪಾಲಿಟ್‌ಬ್ಯೂರೋ ಸಭೆಯಲ್ಲಿ ಈ ನಿರ್ಣಯಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಯೆಚೂರಿ ಅವರ ಬಳಿಕ ಸಿಪಿಎಂ ಪ್ರಧಾನ ಕಾರ್ಯದರ್ಶಿ ಹುದ್ದೆ ಯಾರಿಗೆ ಸಿಗಲಿದೆ ಎಂಬ ಬಗ್ಗೆಯೂ ಪಕ್ಷದ ವಲಯದಲ್ಲಿ ಚರ್ಚೆಗಳು ಶುರುವಾಗಿವೆ. ಈ ಹುದ್ದೆಗೆ ಪಾಲಿಟ್‌ಬ್ಯೂರೋ ಸದಸ್ಯೆ ಬೃಂದಾ ಕಾರಟ್‌ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಈ ಬಾರಿ ಅವರಿಗೇನಾದನೂ ಹುದ್ದೆ ಸಿಗದಿದ್ದರೆ, ವಯಸ್ಸಿನ ಮಿತಿ ಮೀರುವ ಕಾರಣ ಮುಂದೆ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸಲು ಸಾಧ್ಯವಿಲ್ಲ.

ಇಂದಿನಿಂದ ಪ್ರಿಯಾಂಕಾ ಪ್ರತಿಜ್ಞಾ ಯಾತ್ರೆ
ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ, ಉತ್ತರಪ್ರದೇಶ ಉಸ್ತುವಾರಿ ಪ್ರಿಯಾಂಕಾ ವಾದ್ರಾ ಅವರು ಶನಿವಾರದಿಂದ “ಪ್ರತಿಜ್ಞಾ ಯಾತ್ರೆ’ ಆರಂಭಿಸಲಿದ್ದಾರೆ. ಬಾರಾಬಂಕಿಯಲ್ಲಿ ಯಾತ್ರೆಗೆ ಚಾಲನೆ ದೊರೆಯಲಿದ್ದು, ನ.1ರವರೆಗೆ ನಡೆಯಲಿದೆ. 2022ರ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಕೈಗೊಂಡಿರುವ ವಿವಿಧ ನಿರ್ಣಯಗಳನ್ನು ಜನರತ್ತ ಕೊಂಡೊಯ್ಯುವುದೇ ಈ ಯಾತ್ರೆಯ ಉದ್ದೇಶ. ಬಾರಾಬಂಕಿಯಿಂದ ಬುಂದೇಲ್‌ಖಂಡ್‌, ಸಹರಾನ್ಪುರದಿಂದ ಮಥುರಾ ಮತ್ತು ವಾರಾಣಸಿಯಿಂದ ರಾಯ್‌ಬರೇಲಿಗೆ ಈ ಯಾತ್ರೆ ಕೈಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next