ಹುಬ್ಬಳ್ಳಿ: ಮತದಾರರ ಪಟ್ಟಿಯಿಂದ ಕೆಲವರನ್ನು ತೆಗೆದು ಹಾಕಲಾಗಿದೆ ಎಂಬ ಆರೋಪ ಸುಳ್ಳು. ಚುನಾವಣಾ ಆಯೋಗವೇ ಸ್ವತಃ ಮತದಾರರ ಸಮೀಕ್ಷೆ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಭಾರತೀಯ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿವೆ. ಮತದಾರರ ಪಟ್ಟಿಯಿಂದ ತೆಗೆದು ಹಾಕಿದ ಮತ್ತು ಸೇರ್ಪಡೆಗೊಳಿಸುವ ಬಗ್ಗೆ ಚುನಾವಣಾ ಆಯೋಗಕ್ಕೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಆಧರಿಸಿ ಚುನಾವಣಾ ಆಯೋಗವು ಸಂಬಂಧಿಸಿದ ಅಧಿಕಾರಿಗಳಿಂದ ತನಿಖೆ ನಡೆಸಿ ಸರಿಪಡಿಸುವ ಕಾರ್ಯ ಮಾಡುತ್ತಿದೆ ಎಂದರು.
ಮತದಾರ ಪಟ್ಟಿಯಲ್ಲಿ ಅನಧಿಕೃತವಾಗಿ ಸೇರ್ಪಡೆಗೊಂಡವರ ಹೆಸರನ್ನು ತೆಗೆದು ಹಾಕಲಾಗುತ್ತಿದೆ. ಅಧಿಕೃತವಿದ್ದವರಿಗೆ ಯಾವುದೇ ಕಾರಣಕ್ಕೂ ಮತದಾನ ಹಕ್ಕು ಕಸಿದುಕೊಳ್ಳುವ ಕಾರ್ಯವಾಗುತ್ತಿಲ್ಲ. ಮತದಾನ ಮಾಡುವುದು ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ ಎಂದರು.
ಬೆಳಗಾವಿಯಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಿಗರ ಮೇಲೆ ಪೊಲೀಸರಿಂದ ಹಲ್ಲೆ ಮಾಡಿದ ವಿಚಾರವಾಗಿ ಪೊಲೀಸ್ ಆಯುಕ್ತರು ಹಾಗೂ ಎಸ್ ಪಿ ಅವರಿಗೆ ತನಿಖೆ ಮಾಡಲು ಆದೇಶಿಸಲಾಗಿದೆ. ಗಡಿ ವಿಚಾರ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವ್ಯಾಜ್ಯ ಇರುವುದರಿಂದ ಈಗ ಆ ವಿಷಯವನ್ನು ಮಹಾರಾಷ್ಟ್ರ ಪ್ರಸ್ತಾಪ ಮಾಡಿದೆ ಎಂದರು.