Advertisement

ಉಚಿತ ಗಿಫ್ಟ್ ಗಳ ಮೇಲೆ ಚುನಾವಣಾ ಆಯೋಗದ ಕಣ್ಣು

01:04 AM Feb 02, 2023 | Team Udayavani |

ಬೆಂಗಳೂರು: ರಾಜಕೀಯ ಪಕ್ಷಗಳ ಉಚಿತ ಉಡುಗೊರೆ ಮತ್ತು ಆಮಿಷಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಚುನಾವಣಾ ಆಯೋಗ ಈ ರೀತಿ ಕಾನೂನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿದೆ.

Advertisement

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಜನಸಾಮಾನ್ಯರಿಗೆ ಉಚಿತ ಉಡುಗೊರೆ, ಆಮಿಷಗಳನ್ನು ಒಡ್ಡುತ್ತಿರುವುದು ಹೆಚ್ಚಾಗಿದೆ. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳನ್ನು ಆಧರಿಸಿ ಸಂಬಂಧಪಟ್ಟ ಇಲಾಖೆಯ ಕಾನೂನು-ನಿಯಮಗಳನ್ವಯ ಕ್ರಮವಹಿಸಿ, ಕಾನೂನು ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಅಲ್ಲದೆ, ಸಮಾಜಘಾತುಕ ಭಾಷಣ, ಸಮಾಜದ ನೆಮ್ಮದಿ ಕದಡುವ ಹಾಗೂ ದ್ವೇಷವನ್ನು ಹರಡುವ ಮಾತುಗಳು ಮತ್ತು ಅಂತಹ ಸಭೆಗಳ ಮೇಲೆ ನಿಗಾವಹಿಸಬೇಕು. ಆ ರೀತಿಯ ಘಟನೆಗಳು ಕಂಡು ಬಂದಲ್ಲಿ ಆಯಾ ವ್ಯಾಪ್ತಿಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಮನೋಜ್‌ ಕುಮಾರ್‌ ಮೀನಾ ಸೂಚಿಸಿದ್ದಾರೆ.

ಮುಂಬರುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯ ಪೂರ್ವ ಸಿದ್ದತೆಯ ಕುರಿತು ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆಯನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಮುಂಬರುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯ ಕುರಿತು ಪೂರ್ವಸಿದ್ದತೆ ಮಾಡಿಕೊಳ್ಳುವಂತೆ ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಮುಖ್ಯ ಚುನಾವಣಾಧಿಕಾರಿಗಳು ಸೂಚನೆ ನೀಡಿದರು.

ಮತದಾರರಿಗೆ ಮದ್ಯಪಾನ ಸೇರಿದಂತೆ ವಿವಿಧ ರೀತಿಯ ಉಡುಗೂರೆಗಳ ಆಮಿಷಗಳನ್ನು ಕೂಪನ್‌ಗಳ ಮೂಲಕ ವಿತರಿಸುತ್ತಿರುವ ಬಗ್ಗೆ ಮಾಧ್ಯಮಗಳ ಮೂಲಕ ವರದಿಯಾಗುತ್ತಿದೆ. ಕಳೆದ ವರ್ಷದ ಈ ಸಮಯದಲ್ಲಿ ಮಾರಾಟವಾದ ಮದ್ಯ ಹಾಗೂ ಪ್ರಸ್ತುತ ಈಗ ಮಾರಾಟವಾಗುತ್ತಿರುವ ಮದ್ಯ ಕುರಿತಂತೆ ಅಬಕಾರಿ ಇಲಾಖೆ ಕಟ್ಟುನಿಟ್ಟಿನ ನಿಗಾವಹಿಸಬೇಕು. ಅಂತರ ರಾಜ್ಯ ಚೆಕ್‌ ಪೋಸ್ಟ್‌ಗಳನ್ನು ತೆರೆಯಲು ಸೂಚಿಸಿದರು.

Advertisement

ಸಮಾಜದಲ್ಲಿ ನಡೆಯುತ್ತಿರುವ ಆಮಿಷಗಳ ಕುರಿತಂತೆ ಸಂಬಂಧಿತ ಇಲಾಖೆಗಳು ತಮ್ಮಲ್ಲಿರುವ ಮಾಹಿತಿಯನ್ನು ಅಂತರ ಇಲಾಖಾ ಮಟ್ಟದಲ್ಲಿ ಹಂಚಿಕೊಳ್ಳುವ ಮೂಲಕ ಸುಗಮ ಚುನಾವಣೆಗೆ ಎಲ್ಲರೂ ಕರ್ತವ್ಯ ನಿರ್ವಹಿಸಬೇಕು. ವಿವಿಧ ಇಲಾಖೆಗಳ ಮೂಲಕ ಸ್ವೀಕರಿಸಲಾಗುವ ನೋಂದಾಯಿತ ಪ್ರಕರಣಗಳ ಕುರಿತು ಜಾರಿ ನಿರ್ದೇಶನಾಲಯ ಕ್ರಮ ಕೈಗೊಳ್ಳಲಿದೆ. ಹಣ ಮತ್ತು ಬಂಗಾರದಂತಹ ಬೆಲೆ ಬಾಳುವ ವಸ್ತುಗಳ ಸಾಗಣಿಕೆ ಮೇಲೆ ನಿಗಾವಹಿಸಬೇಕು. ಮಾದಕ ವಸ್ತುಗಳ ಸಾಗಣಿಕೆ, ಮಾರಾಟದ ಮೇಲೆ ಕಣ್ಣಿಡಬೇಕು, ಇದಕ್ಕೆ ಸಂಬಂಧಿಸಿದಂತೆ ರೈಲು, ಬಂದರು ಹಾಗೂ ವಿಮಾನ ನಿಲ್ದಾಣಗಳಲ್ಲಿ ಇದಕ್ಕಾಗಿ ವಿಶೇಷ ನೂಡಲ್‌ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಮನೋಜ್‌ ಕುಮಾರ್‌ ಮೀನಾ ತಿಳಿಸಿದರು.

ಹಣದ ರೂಪದಲ್ಲಿ ಮತ್ತು ಡಿಜಿಟಲ್‌ ವಿಧಾನಗಳ ಮೂಲಕ ನಡೆಯುವ ಚಲಾವಣೆಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣವೇ ಕ್ರಮ ಕೈಗೊಳ್ಳಬೇಕು.

ಅದೇ ರೀತಿ ಭಾರತ ಚುನಾವಣಾ ಆಯೋಗದ ಹಿರಿಯ ಉಪ ಚುನಾವಣಾ ಆಯುಕ್ತರ ಅಧ್ಯಕ್ಷತೆಯಲ್ಲಿ 2022ರ ನ.24 ರಂದು ರಾಜ್ಯ ಹಾಗೂ ಕೇಂದ್ರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಕುರಿತು ತೆಗೆದುಕೊಂಡಿರುವ ಕ್ರಮ ಮತ್ತು ವರದಿಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಮುಖ್ಯ ಚುನಾವಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ), ಅಬಕಾರಿ ಇಲಾಖೆ ಆಯುಕ್ತರು, ರಾಜ್ಯ ಸರಕು ಮತ್ತು ಸೇವೆ ಇಲಾಖೆಯ ವಾಣಿಜ್ಯ ತೆರಿಗೆ ಆಯುಕ್ತರು, ದಾಯ ತೆರಿಗೆ ಇಲಾಖೆ (ತನಿಖೆ) ಹೆಚ್ಚುವರಿ ನಿರ್ದೇಶಕರು, ಕೇಂದ್ರ ತೆರಿಗೆ ಮತ್ತು ಸುಂಕ ಇಲಾಖೆಯ ಉಪ ಆಯುಕ್ತರು, ರೆವಿನ್ಯೂ ಇಂಟಲಿಜೆನ್ಸ್‌ ಹೆಚ್ಚುವರಿ ನಿರ್ದೇಶಕರು, ಜಾರಿ ನಿರ್ದೇಶನಾಲಯದ ಬೆಂಗಳೂರು ವಲಯ ಉಪ ನಿರ್ದೇಶಕರು, ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೋ ವಯಲ ನಿರ್ದೇಶಕರು, ಡಿಐಜಿ, ಸಿಐಎಸ್‌ಎಫ್, ರೈಲ್ವೆ ಭದ್ರತಾ ಪಡೆಯ ಸಹಾಯಕ ಭದ್ರತಾ ಆಯುಕ್ತರು, ಆರ್‌ಬಿಐ ಜನರಲ್‌ ಮ್ಯಾನೇಜರ್‌, ಎಸ್‌ಎಲ್‌ಬಿಸಿ ಡಿಜಿಎಂ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಿದ ಜನರಲ್‌ ಮ್ಯಾನೇಜರ್‌, ಅಂಚೆ ಸೇವೆಗಳು-ಕರ್ನಾಟಕ ವೃತ್ತದ ನಿರ್ದೇಶಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next