Advertisement

ಪಂಚರಾಜ್ಯಗಳ ಚುನಾವಣೆ: ಅಭ್ಯರ್ಥಿಗಳ ಆಯ್ಕೆ ಕಸರತ್ತು

09:20 AM Jan 14, 2022 | Team Udayavani |

ನವದೆಹಲಿ: ಪಂಚರಾಜ್ಯಗಳ ಚುನಾವಣೆ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಎಲ್ಲ ಪಕ್ಷಗಳೂ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸುವಲ್ಲಿ ನಿರತವಾಗಿವೆ. ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉಪಸ್ಥಿತಿಯಲ್ಲಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಸಿ ಉತ್ತರಪ್ರದೇಶದ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪರಾಮರ್ಶೆ ನಡೆಸಿದೆ. ಮತ್ತೂಂದೆಡೆ, ಕಾಂಗ್ರೆಸ್‌ 125 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

Advertisement

ವಿಶೇಷವೆಂದರೆ, ಕಾಂಗ್ರೆಸ್‌ನ 125 ಅಭ್ಯರ್ಥಿಗಳ ಪೈಕಿ 50 ಮಂದಿ ಮಹಿಳೆಯರಿಗೆ ಟಿಕೆಟ್‌ ನೀಡಲಾಗಿದೆ. ಅದರಲ್ಲೂ ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್‌ ಅವರನ್ನು ಉನ್ನಾವ್‌ ಕ್ಷೇತ್ರದಿಂದಲೇ ಕಾಂಗ್ರೆಸ್‌ ಕಣಕ್ಕಿಳಿಸಿದೆ. ಆಶಾ ಕಾರ್ಯಕರ್ತೆಯರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಆಶಾ ಕಾರ್ಯಕರ್ತೆ ಪೂನಂ ಪಾಂಡೆ ಅವರಿಗೆ ಶಹಜಹಾನ್‌ಪುರದ ಟಿಕೆಟ್‌ ನೀಡಲಾಗಿದೆ. ಸಿಎಎ ವಿರೋಧಿ ಹೋರಾಟಗಾರ್ತಿ  ಸದಾಫ್ ಜಫ‌ರ್‌, ಬುಡಕಟ್ಟು ನಾಯಕ ರಾಮ್‌ರಾಜ್‌ ಗೋಂಡ್‌ ಅವರೂ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಪಕ್ಷದ ನಾಯಕಿ ಪ್ರಿಯಾಂಕಾ ವಾದ್ರಾ, “ಶೇ.40 ಅಭ್ಯರ್ಥಿಗಳು ಮಹಿಳೆಯರಾಗಿದ್ದರೆ, ಶೇ.40 ಅಭ್ಯರ್ಥಿಗಳು ಯುವಜನರಾಗಿದ್ದಾರೆ. ಉತ್ತರಪ್ರದೇಶದಲ್ಲಿ ನ್ಯಾಯಕ್ಕಾಗಿ ಹೋರಾಡಿದವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ’ ಎಂದು ಹೇಳಿದ್ದಾರೆ.

ಬಿಜೆಪಿ ಪಟ್ಟಿ ಅಂತಿಮ: ಈ ನಡುವೆ, ಬಿಜೆಪಿ ಉ.ಪ್ರ. ಅಭ್ಯರ್ಥಿಗಳ ಆಯ್ಕೆ ಕುರಿತು ಗುರುವಾರ ಚರ್ಚಿಸಿದೆ. ವಿಧಾನ ಪರಿಷತ್‌ ಸದಸ್ಯರಾಗಿರುವ ಡಿಸಿಎಂ ಕೇಶವ ಪ್ರಸಾದ್‌ ಮೌರ್ಯ ಸಿರಾತು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಮತ್ತೂಬ್ಬ ಡಿಸಿಎಂ  ದಿನೇಶ್‌ ಶರ್ಮಾ, ಉ.ಪ್ರ.ಬಿಜೆಪಿ ಘಟಕದ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌ ಸ್ಪರ್ಧೆ  ಬಗ್ಗೆಯೂ ತೀರ್ಮಾನಿಸಲಾಗಿದೆ. ಫೆ.10 ಮತ್ತು ಫೆ.14ರಂದು ನಡೆಯಲಿರುವ ಮೊದಲ ಎರಡು ಹಂತಗಳಲ್ಲಿ 113 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಪೈಕಿ 94 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದರ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್‌ ಅವರು ಅಯೋಧ್ಯೆಯಿಂದ ಸ್ಪರ್ಧಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ. ಆದರೆ, ಇದು ಪ್ರಧಾನಿ ಮೋದಿಯವರ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಸದ್ಯದ ಮಾಹಿತಿ ಪ್ರಕಾರ ಮುಂದಿನ ಎರಡು ದಿನಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಶಿವಸೇನೆ ಅಸಮಾಧಾನ: ಮಹಾರಾಷ್ಟ್ರದ ಮಾದರಿಯಲ್ಲೇ ಗೋವಾದಲ್ಲೂ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಶಿವಸೇನೆಯ ಪ್ರಯತ್ನಕ್ಕೆ ಕಾಂಗ್ರೆಸ್‌ ಸೊಪ್ಪು ಹಾಕಿಲ್ಲ. ಹೀಗಾಗಿ ಅಸಮಾಧಾನಗೊಂಡಿರುವ ಶಿವಸೇನೆ, “ಗೋವಾದ ಪರಿಸ್ಥಿತಿ ಹೇಗಿದೆಯೆಂದರೆ ಕಾಂಗ್ರೆಸ್‌ ಏನಾದರೂ ಏಕಾಂಗಿಯಾಗಿ ಸ್ಪರ್ಧಿಸಿದರೆ ಒಂದಂಕಿ ದಾಟುವುದೂ ಅನುಮಾನವಿದೆ’ ಎಂದು ಪಕ್ಷದ ಮುಖಂಡ ಸಂಜಯ ರಾವತ್‌ ಹೇಳಿದ್ದಾರೆ.

ಆಪ್‌ ಸಿಎಂ ಅಭ್ಯರ್ಥಿ ಜನರಿಂದ ಆಯ್ಕೆ! :

Advertisement

ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಜನರೇ ನಿರ್ಧರಿಸಲಿದ್ದಾರೆ ಎಂದು ಆಪ್‌ ನಾಯಕ ಅರವಿಂದ ಕೇಜ್ರಿವಾಲ್‌ ಘೋಷಿಸಿದ್ದಾರೆ. ಇದಕ್ಕೆಂದೇ ಗುರುವಾರ ಮೊಬೈಲ್‌ ಸಂಖ್ಯೆಯೊಂದನ್ನು ಅನಾವರಣಗೊಳಿಸಿದ್ದು, ಜ.17ರೊಳಗೆ ಜನರು ಎಸ್ಸೆಮ್ಮೆಸ್‌ ಅಥವಾ ವಾಟ್ಸ್‌ಆ್ಯಪ್‌ ಸಂದೇಶದ ಮೂಲಕ ಸಿಎಂ ಅಭ್ಯರ್ಥಿ ಯಾರಾಗಬೇಕೆಂದು ತಮ್ಮ ಅಭಿಪ್ರಾಯವನ್ನು ಕಳುಹಿಸುವಂತೆ ಕೇಜ್ರಿವಾಲ್‌ ಸೂಚಿಸಿದ್ದಾರೆ. ಜನಾಭಿಪ್ರಾಯ ಬಂದ ಬಳಿಕ ಸಿಎಂ ಅಭ್ಯರ್ಥಿ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು ಎಂದಿದ್ದಾರೆ. “ಭಗವಂತ್‌ ಮನ್‌ ನನ್ನ ಕಿರಿಯ ಸಹೋದರನಿದ್ದಂತೆ. ಅವರೇ ಸಿಎಂ ಆಗಬೇಕೆಂಬುದು ನನ್ನ ಆಸೆ. ಆದರೆ, ಜನರೇ ನಿರ್ಧರಿಸಲಿ ಎಂದು ಅವರು ಹೇಳಿದ್ದಾರೆ’ ಎಂದೂ ಕೇಜ್ರಿವಾಲ್‌ ನುಡಿದಿದ್ದಾರೆ.

ಎಸ್‌ಪಿ ನಾಯಕ ಅಖೀಲೇಶ್‌ ಯಾದವ್‌ ಅವರಿಗೆ ತಮ್ಮದೆಂದು ಹೇಳಿಕೊಳ್ಳಲು ಏನೂ ಇಲ್ಲ. ಹಾಗಾಗಿ, ಬೇರೆ ಪಕ್ಷಗಳ ನಾಯಕರನ್ನು ಸೆಳೆದುಕೊಂಡು ಶೋ ಮಾಡಲು ಹೊರಟಿ ದ್ದಾರೆ. ಆದರೆ, ಅವರ ಕನಸು ನನಸಾಗದು.-ಬೃಜೇಶ್‌ ಪಾಠಕ್‌, ಉ.ಪ್ರದೇಶ ಸಚಿವ

ಕಾಂಗ್ರೆಸ್‌ ನಾಯಕರು ಮೊದಲು ತಮ್ಮ ನಾಯಕರೇ “ದೇಶದ ದೊರೆಗಳು’ ಎಂದು ಭಾವಿಸುವುದನ್ನು ನಿಲ್ಲಿಸಬೇಕು. ಗೋವಾದಲ್ಲಿ ಕಾಂಗ್ರೆಸ್‌ ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದರೆ, ನಾವೀಗ ಅಲ್ಲಿಗೆ ಎಂಟ್ರಿಯಾಗುವ ಪರಿಸ್ಥಿತಿಯೇ ಬರುತ್ತಿರಲಿಲ್ಲ.-ಮೊಹುವಾ ಮೊಯಿತ್ರಾ, ಟಿಎಂಸಿ ಸಂಸದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next