Advertisement

ಜಾಲತಾಣಗಳಲ್ಲಿ ಮಿತಿ ಮೀರಿದ ಚುನಾವಣಾ ಪ್ರಚಾರ

04:47 PM Apr 16, 2019 | Team Udayavani |
ಚನ್ನರಾಯಪಟ್ಟಣ: ಲೋಕಸಭೆ ಚುನಾವಣೆಗೆ ತಮ್ಮ ಹಕ್ಕು ಚಲಾಯಿಸುವ ದಿನ ಸಮೀಪಿಸುತ್ತಿರುವಾಗ ನೆಟ್ಟಿಗರು ತಮ್ಮ ಪಕ್ಷದ ಅಭ್ಯರ್ಥಿಪರವಾಗಿ ಜಾಲತಾಣಗಳಲ್ಲಿ ಅಡೆ ತಡೆಯಿಲ್ಲದೆ ಮನಸೋಇಚ್ಛೆ ಪ್ರಚಾರಕ್ಕೆ ಮುಂದಾಗುತ್ತಿದ್ದಾರೆ.
 ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಕಾರ್ಯಪ್ರವೃತ್ತವಾಗಿದ್ದು ಸುಡುವ ಬಿಸಿಲ ಝಳ ದಲ್ಲಿಯೂ ತಾಲೂಕಿನ ಅಧಿಕಾರಿಗಳು ಎಡಬಿಡದೆ ನೀತಿ ಸಂಹಿತಿ ಲೋಪ ಪತ್ತೆ ಹಚ್ಚಲು ಪ್ರಚಾರ ನಿರತ ಅಭ್ಯರ್ಥಿಯ ಹಿಂದೆ ಸುತ್ತುತ್ತಿದ್ದಾರೆ. ಈ ನಡುವೆ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ನಿಯಮ ಉಲ್ಲಂಘಿಸಿ ತರಹೇವಾರಿ ಪೋಸ್ಟ್‌ ಗಳನ್ನು ಹಾಕುತ್ತಿದ್ದಾರೆ.
ವಿವಿಧ ಜಾಲತಾಣ: ತಮಗೆ ತೋಚಿದ್ದನ್ನು ಫೇಸ್‌ಬುಕ್‌, ಇನ್‌ ಸ್ಟಗ್ರ್ಯಾಮ್‌, ಟ್ವಿಟರ್‌, ಲಿಂಕುಡ್‌ಇನ್‌, ಯೂಟ್ಯೂಬ್‌ ಹಾಗೂ ವಾಟ್ಸ್‌ಆ್ಯಪ್‌ ಗ್ರೂಪ್‌ಗ್ಳಲ್ಲಿ ಹರಿಬಿಡುತ್ತಿರುವುದು ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಪ್ರಜ್ಞಾವಂತರು ಅಭಿಪ್ರಾಯಪಟ್ಟಿದ್ದಾರೆ. ಅಂತರ್ಜಾಲ ಬಳಕೆ ಮಾಡುವವರು ಅನಗತ್ಯವಾಗಿ ಕಿರಿಕಿರಿ ಅನುಭವಿಸುವಂತಾಗಿದೆ. ಇಂತಹ ತೊಂದರೆಯಿಂದ ತಪ್ಪಿಸಿಕೊಳ್ಳಲು ಅನ್ಯಮಾರ್ಗವಿಲ್ಲದೆ ಮತದಾನ ನಡೆಯುವ ಏ.18ರ ವರೆವಿಗೂ ತಾಳ್ಮೆಯಿಂದ ಇರಬೇಕಾಗಿದೆ.
ಕಣ್ಣು ತೆರೆಯಬೇಕು ಇಲಾಖೆ: ವ್ಯಕ್ತಿತ್ವ ತೋಜೋವಧೆ ಮಾಡುವ ಪೋಸ್ಟ್‌ಗಳು ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿವೆ. ತಮ್ಮ ವಿರೋಧಿ ಅಭ್ಯರ್ಥಿಯ ಹಾಗೂ ಆ ಪಕ್ಷದ ನಾಯಕರ ಫೋಟೋಗಳನ್ನು ತಿರುಚಿ ಮನಬಂದಂತೆ ಅಡಿ ಬರಹ ಬರೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚುವ ಮೂಲಕ ಅನಗತ್ಯವಾಗಿ ಯುವ ಸಮುದಾಯವನ್ನು ಕೆರಳಿಸುವ ಕೆಲಸಗಳು ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾಗ ಚುನಾವಣಾ ಇಲಾಖೆ ಮಾತ್ರ ಕಣ್ಣು ಮುಚ್ಚಿ ಕೂತಿದೆ.
ಬ್ಯಾನರ್‌ ಕಣ್ಮರೆ: ಬ್ಯಾನರ್‌ಗಳು ಹತ್ತಾರು ಅಡಿ ಉತ್ತದ ಫ್ಲೆಕ್ಸ್‌ಗಳು ಕರಪತ್ರಗಳು ಹೆಚ್ಚು ಚುನಾವಣೆ ವೇಳೆ ಹೆಚ್ಚು ಸದ್ದು ಮಾಡುತ್ತಿದ್ದವು ಆದರೆ ಕಳೆದ ಎರಡು ದಶಕದಿಂದ ಚುನಾವಣಾ ಆಯೋಗ ಇವುಗಳಿಗೆ ಕಡಿವಾಣ ಹಾಕಿರುವುದರಿಂದ ತಮ್ಮ ಭಾವ ಚಿತ್ರಗಳನ್ನು ಅಭ್ಯರ್ಥಿ ಜೊತೆ ಹಾಕಿಕೊಂಡು ಅಂತರ್ಜಾಲದಲ್ಲಿ ಹರಿಬಿಡುವವರ ಸಂಖ್ಯೆ ಹೆಚ್ಚುತ್ತಿದೆ.
ಅನಗತ್ಯ ಪ್ರಚಾರ: ನೀತಿ ಸಂಹಿತಿ ಜಾರಿಯಲ್ಲಿ ಇರುವಾಗಲೇ ಕೆಲವರು ತಮ್ಮ ವಿರೋಧ ಪಕ್ಷದ ಅಭ್ಯರ್ಥಿ, ರಾಜಕೀಯ ಪಕ್ಷ ಅಥವಾ ಮುಖಂಡರ ತೋಜೋವಧೆ ಮಾಡುವಂತ ಪೋಸ್ಟ್‌ಗಳನ್ನು ಹರಡುತ್ತಿದ್ದಾರೆ. ಈ ಬಗ್ಗೆ ಕಟ್ಟೆಚ್ಚರವಹಿಸಬೇಕಾಗಿದ್ದು ಮುಂದೆ ಆಗುವ ಅನಾಹುತ ತಪ್ಪಿಸುವುದು ಚುನಾವಣಾ ಆಯೋಗದ ಹೆಗಲ ಮೇಲಿದೆ. ಮನಬಂದಂತೆ ಜಾಲತಾಣದಲ್ಲಿ ಪೋಸ್ಟ್‌ ಹಾಕಿ ಗೊಂದಲ ಮೂಡಿಸುವವರ ಮೇಲೆ ಕಠಿಣ ಕ್ರಮ ಜರುಗಿಸುವ ಮೂಲಕ ಮತದಾನ ಪ್ರಕ್ರಿತೆ ಸುಸೂತ್ರವಾಗಿ ನಡೆಯುವಂತೆ ನೋಡಿ ಕೊಳ್ಳಬೇಕಿರುವುದು ಸಂಬಂಧ ಪಟ್ಟ ಇಲಾಖೆ ಕರ್ತವ್ಯವಾಗಿದೆ.
ಪ್ರಜಾಪ್ರಭುತ್ವಕ್ಕೆ ಮಾರಕ: ಮತದಾರನ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಿರಲಿ ಹಾಗೂ ನ್ಯಾಯಯುತವಾಗಿ ಮತದಾನ ನಡೆಯಲಿ ಎಂದು ಚುನಾವಣಾ ಆಯೋಗ ನೀತಿ ಸಂಹಿತಿ ಜಾರಿಗೆ ತಂದಿದೆ. ಆದರೆ ಜಾಲತಾಣಿಗಳು ಕಾನೂನು ಕಟ್ಟಳೆ ಮೀರಿ ಸಾಮಾಜಿಕ ಜಾಲತಾಣದಲ್ಲಿ ಮನಸೋಇಚ್ಛೆ ಪೋಸ್ಟ್‌ ಹಕುವ ಮೂಲಕ ಪ್ರಜಾಪ್ರಭುತ್ವಕ್ಕೆ ಮಾರಕ ವಾಗುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಗೌಪ್ಯವಾಗಿ ಮತದಾನ ಮಾಡುವ ವ್ಯವಸ್ಥೆಗೆ ಅವಕಾಶ ಕಲ್ಪಿಸಿದೆ. ಆದರೆ ಕೆಲವರು ನೆಟ್ಟಿಗರು ಇಂಥಹವರಿಗೆ ಮತದಾನ ಮಾಡುತ್ತೇನೆ ನಿವು ಸಹ ಇಂತಹ ಅಭ್ಯರ್ಥಿಗೆ ತಮ್ಮ ಮತ ಹಾಕಬೇಕು ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಮತದಾರರ ಮೇಲೆ ಪ್ರಭಾವ ಬೀರಲು ತಂತ್ರ ಬಳಸಲು ವಂದಂತಿ ಹಬ್ಬಿಸಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಇಂಥಹವರ ಮೇಲೆ ನಿಗಾಇುಟ್ಟು ವಿಳಂಬ ಮಾಡದೇ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
●ಶಾಮಸುಂದರ್‌ ಕೆ.ಅಣ್ಣೇನಹಳ್ಳಿ
Advertisement

Udayavani is now on Telegram. Click here to join our channel and stay updated with the latest news.

Next