ನಾಮಪತ್ರ ಸಲ್ಲಿಕೆ ಆರಂಭಕ್ಕೆ ಮುನ್ನವೇ ಅಖಾಡಕ್ಕಿಳಿದ ನಾಯಕರು
ಬೆಂಗಳೂರು: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯದ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆ ಪ್ರಚಾರ ಬಿರುಸುಗೊಂಡಿದ್ದು, ನಾಯಕರ ಮಧ್ಯೆ ವಾಕ್ಸಮರ ಶುರುವಾಗಿದೆ.
ಚುನಾವಣಾ ಅಧಿಸೂಚನೆ ಹೊರಬೀಳಲು ಇನ್ನೂ ಒಂದು ದಿನ (ಮಾ. 14ರಿಂದ ನಾಮಪತ್ರ ಸಲ್ಲಿಕೆ ಆರಂಭ) ಬಾಕಿ ಇರುವಂತೆ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಎರಡೂ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ನಾಂದಿ ಹಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಭ್ಯರ್ಥಿಧಿಗಳ ಪರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿಗಳ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ.
ಮೊದಲ ದಿನವೇ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಉಭಯ ನಾಯಕರು ತೀವ್ರಗೊಳಿಸುವುದರೊಂದಿಗೆ ಮಾ. 14ರ ನಂತರ ಪ್ರಚಾರದ ಭರಾಟೆ ಇನ್ನಷ್ಟು ತಾರಕಕ್ಕೇರುವ ಮುನ್ಸೂಚನೆ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ಪರಸ್ಪರ ಧರ್ಮ-ಅಧರ್ಮದ ಆರೋಪಗಳನ್ನು ಆರಂಭಿಸಿದ್ದಾರೆ.
ಹೀಗಾಗಿ ಮುಂದಿನ ದಿನಗಳಲ್ಲಿ ಮಾತಿನ ಚಕಮಕಿ ವಿಪರೀತಕ್ಕೆ ಹೋಗುವ ಲಕ್ಷಣವೂ ಕಾಣಿಸಲಾರಂಭಿಸಿದೆ.
ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಏ. 9ರಂದು ಚುನಾವಣೆ ನಡೆಯಲಿದ್ದು, ಮಾ. 14ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕಳಲೆ ಎನ್.ಕೇಶವಮೂರ್ತಿ ಮತ್ತು ಬಿಜೆಪಿಯಿಂದ ವಿ.ಶ್ರೀನಿವಾಸ ಪ್ರಸಾದ್, ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೀತಾ ಮಹದೇವ ಪ್ರಸಾದ್ ಮತ್ತು ಬಿಜೆಪಿಯಿಂದ ಸಿ.ಎಸ್.ನಿರಂಜನ್ ಕುಮಾರ್ ಕಣಕ್ಕಿಳಿಯುವುದು ಖಚಿತ. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯುವುದು ಅನುಮಾನವಾಗಿದ್ದರಿಂದ ಕಾಂಗ್ರೆಸ್, ಬಿಜೆಪಿ ಮಧ್ಯೆ ನೇರ ಹಣಾಹಣಿ ನಡೆಯಲಿದೆ.
ಬಜೆಟ್ ಅಧಿವೇಶನದ ಚಿಂತೆ: ಉಪ ಚುನಾವಣೆಗೆ ಮಾ. 14ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದರೂ ಅಧಿಕೃತ ಪ್ರಚಾರ ಕಾರ್ಯ ಮಾ. 24ರ ನಂತರವಷ್ಟೇ ಶುರುವಾಗುತ್ತದೆ.