Advertisement

ಚುನಾವಣ ಕಣದಲ್ಲಿ ದಾಯಾದಿ ಸಮರ

12:38 AM Feb 07, 2023 | Team Udayavani |

ರಾಜಕಾರಣದಲ್ಲಿ ಒಂದೇ ಕುಟುಂಬದ ಸದಸ್ಯರು ಎದುರು ಬದುರಾಗಿ ಚುನಾವಣ ಕಣಕ್ಕಿಳಿಯುವುದು ಹೊಸದೇನಲ್ಲ. ಇದಕ್ಕೆ ಲೇಟೆಸ್ಟ್‌ ಉದಾಹರಣೆ ಎಂದರೆ ಬಳ್ಳಾರಿ. ಅಲ್ಲಿನ ಬಿಜೆಪಿ ಶಾಸಕ ಸೋಮಶೇಖರ್‌ ರೆಡ್ಡಿ ವಿರುದ್ಧ ಅವರ ಸೋದರ ಜನಾರ್ದನ ರೆಡ್ಡಿ ತಮ್ಮ ಪತ್ನಿಯನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ಯಾವುದೋ ಸಣ್ಣ ದ್ವೇಷ ರಾಜಕೀಯವಾಗಿ ರೂಪಾಂತರಗೊಂಡು ಚುನಾವಣೆಯಲ್ಲಿ ಜಿದ್ದು ತೀರಿಸಿಕೊಳ್ಳುವ ತನಕ ಮುಂದುವರೆಯುತ್ತದೆ. ಪ್ರತಿಯೊಂದು ಇಂಥ ದಾಯಾದಿ ಕಲಹದ ಹಿಂದೆ ಒಂದೊಂದು ಕತೆ ಇರುತ್ತದೆ.

Advertisement

ಸೊರಬ
ಮಧು-ಕುಮಾರ್‌ ಕಾದಾಟ
ಎಸ್‌.ಬಂಗಾರಪ್ಪ ಅವರ ಪುತ್ರರಾದ ಮಧು ಹಾಗೂ ಕುಮಾರ್‌ ಸೊರಬ ಕ್ಷೇತ್ರದಲ್ಲಿ 2004ರ ವಿಧಾನಸಭಾ ಚುನಾವಣೆಯಿಂದ ಮುಖಾಮುಖೀಯಾಗುತ್ತಿದ್ದಾರೆ. 2004ರಲ್ಲಿ ಕುಮಾರ್‌ ಬಂಗಾರಪ್ಪ ಕಾಂಗ್ರೆಸ್‌ನಿಂದ ಜಯಭೇರಿ ಬಾರಿಸಿದರೆ, ಮಧು ಬಂಗಾರಪ್ಪ ಬಿಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡರು. 2008ರಲ್ಲಿ ಕುಮಾರ್‌ ಕಾಂಗ್ರೆಸ್‌ನಿಂದ ಹಾಗೂ ಮಧು ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದರೂ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಗೆಲುವು ಸಾಧಿಸಿದರು. 2013ರಲ್ಲಿ ಮಧು ಜೆಡಿಎಸ್‌ನಿಂದ ಗೆಲುವು ಸಾಧಿಸಿದರೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕುಮಾರ್‌ ಸೋಲು ಕಂಡರು. 2018ರಲ್ಲಿ ಕುಮಾರ್‌ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರೆ, ಮಧು ಜೆಡಿಎಸ್‌ ಅಭ್ಯರ್ಥಿಯಾಗಿ ಪರಾಭವಗೊಂಡರು. 2023ರ ಚುನಾವಣೆಗೆ ಮಧು ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಸಜ್ಜಾಗಿದ್ದು, ಕುಮಾರ್‌ ಕೂಡ ಬಿಜೆಪಿ ಟಿಕೆಟ್‌ಗೆ ಯತ್ನಿಸುತ್ತಿದ್ದಾರೆ.

ಹೊನ್ನಾಳಿ
ಚಿಕ್ಕಪ್ಪ-ಮಗನ ಕಾಳಗ
ಹೊನ್ನಾಳಿಯಲ್ಲೂ ಚಿಕ್ಕಪ್ಪ-ಮಗ ಸ್ಪರ್ಧಿಸಿರುವ ಇತಿಹಾಸ ಇದೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಮಾಜಿ ಶಾಸಕ ಡಿ.ಜಿ.ಶಾಂತನಗೌಡರ ವಿರುದ್ಧ ಅಣ್ಣನ ಮಗ (ಮಾಜಿ ಶಾಸಕ ಡಿ.ಜಿ. ಬಸವನಗೌಡರ ಪುತ್ರ) ಡಾ| ಡಿ.ಬಿ. ಪ್ರಕಾಶ್‌ ಪಕ್ಷೇತರ ಅಭ್ಯರ್ಥಿಯಾಗಿ ದ್ದರು. ಆ ಚುನಾವಣೆಯಲ್ಲಿ ಚಿಕ್ಕಪ್ಪ ಡಿ.ಜಿ. ಶಾಂತನಗೌಡರ ವಿರುದ್ಧ ಕೇವಲ 329 ಮತ ಗಳಿಸುವ ಮೂಲಕ ಡಾ| ಡಿ.ಬಿ. ಪ್ರಕಾಶ್‌ ಸೋತಿದ್ದರು. ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಸಂಬಂಧದಲ್ಲಿ ಮಾವ-ಅಳಿಯ. ಆದರೆ ಚುನಾವಣೆ ವಿಷಯಕ್ಕೆ ಬಂದರೆ ಇಬ್ಬರೂ ಬೇರೆ ಬೇರೆ ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದಾರೆ.

ಮಾಮನಿ ಬ್ರದರ್ಸ್‌ ಫೈಟ್‌
ಸವದತ್ತಿ-ಯಲ್ಲಮ್ಮ ಕ್ಷೇತ್ರ ಸಹ ಸಹೋದರರ ಸವಾಲಿಗೆ ಸಾಕ್ಷಿಯಾಗಿತ್ತು. ಇದು ಕೂಡ ಜಿಲ್ಲೆಯ ರಾಜಕಾರಣದ ವಿಶೇಷ. 2013ರಲ್ಲಿ ಯಡಿಯೂರಪ್ಪ ಸ್ಥಾಪಿಸಿದ್ದ ಕರ್ನಾಟಕ ಜನತಾ ಪಕ್ಷ (ಕೆಜೆಪಿ)ಯಿಂದ ಸ್ಪರ್ಧೆ ಮಾಡಿದ್ದ ವಿಶ್ವನಾಥ ಮಾಮನಿ ತಮ್ಮ ಸಹೋದರನ ಮಗ ಹಾಗೂ ಬಿಜೆಪಿ ಅಭ್ಯರ್ಥಿ ಆನಂದ ಮಾಮನಿ ವಿರುದ್ಧ ಸ್ಪರ್ಧೆ ಮಾಡಿದ್ದರು. ಆದರೆ ಬಹಳ ಅಂತರದಿಂದ ಸೋಲು ಅನುಭವಿಸಿದರು.

ಗೋಕಾಕ
ಜಾರಕಿಹೊಳಿ ಬ್ರದರ್ ಫೈಟ್‌
ಗಡಿ ಜಿಲ್ಲೆ ಬೆಳಗಾವಿ ರಾಜಕಾರಣ ಎಂದರೆ ಥಟ್ಟನೆ ನೆನಪಾಗುವುದು ಜಾರಕಿಹೊಳಿ ಸಹೋದರರ ಕುಟುಂಬ ರಾಜಕೀಯ ಮತ್ತು ಗೋಕಾಕ ಕ್ಷೇತ್ರದಲ್ಲಿ ಸಹೋದರರ ಮುಖಾಮುಖೀ. 1999ರಿಂದ ಗೋಕಾಕ ಕ್ಷೇತ್ರವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿದೆ ಈ ಕುಟುಂಬ. ಅಚ್ಚರಿಯ ಸಂಗತಿ ಎಂದರೆ ಆರು ಬಾರಿ ಈ ಕ್ಷೇತ್ರದಿಂದ ಶಾಸಕರಾಗಿ ದಾಖಲೆ ಮಾಡಿರುವ ರಮೇಶ ಜಾರಕಿಹೊಳಿ ಮೂರು ಬಾರಿ ತಮ್ಮ ಸ್ವಂತ ಸಹೋದರರಿಂದ ಸ್ಪರ್ಧೆ ಎದುರಿಸಿದ್ದಾರೆ. 2008ರಲ್ಲಿ ಬಿಜೆಪಿಯಿಂದ ಸಹೋದರ ಭೀಮಶಿ ಜಾರಕಿಹೊಳಿ ಸ್ಪರ್ಧೆ ಮಾಡಿದಾಗ “ಡಮ್ಮಿ ಕ್ಯಾಂಡಿಡೇಟ್‌’ ಎಂಬ ಆರೋಪ ಕೇಳಿಬಂದಿತ್ತು. ಒಂದೇ ಮನೆಯಲ್ಲಿ ಎರಡು ಪಕ್ಷಗಳ ಅಭ್ಯರ್ಥಿಗಳು ಎಂಬುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಮುಂದೆ 2013ರ ಚುನಾವಣೆಯಲ್ಲಿ ಭೀಮಶಿ ಮತ್ತೆ ರಮೇಶ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 2018ರಲ್ಲಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ಉಪಚುನಾವಣೆ ಎದುರಿಸಿದ ರಮೇಶಗೆ ಮತ್ತೂಬ್ಬ ಸಹೋದರ ಲಖನ್‌ ಜಾರಕಿಹೊಳಿ ಕಾಂಗ್ರೆಸ್‌ದಿಂದ ಸ್ಪರ್ಧೆಯೊಡ್ಡಿದ್ದರು. ಇಲ್ಲಿಯೂ ಲಖನ್‌ ಡಮ್ಮಿ ಅಭ್ಯರ್ಥಿ ಎಂಬ ಮಾತುಗಳು ಕೇಳಿಬಂದಿದ್ದವು.

Advertisement

ಸಾಗರ
ಅಳಿಯನ ಸವಾಲ್‌
ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಮಾವನಿಗೆ ಅಳಿಯನೇ ಸೋಲಿನ ರುಚಿ ತೋರಿಸಿದ್ದು ವಿಶೇಷ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಅವರ ತಂಗಿಯ ಮಗ ಬೇಳೂರು ಗೋಪಾಲಕೃಷ್ಣ ಮೂರು ಬಾರಿ ಮುಖಾಮುಖೀಯಾಗಿದ್ದಾರೆ. ಎರಡು ಬಾರಿ ಮಾವನೇ ಸೋತಿದ್ದಾರೆ. 2004, 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬೇಳೂರು ಗೋಪಾಲಕೃಷ್ಣ ಅವರು ಕಾಂಗ್ರೆಸ್‌ನ ಕಾಗೋಡು ಅವರನ್ನು ಮಣಿಸಿದ್ದರು. 2013ರಲ್ಲಿ ಕಾಗೋಡು ತಿಮ್ಮಪ್ಪ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಬೇಳೂರು ಅವರಿಗೆ ಸೋಲುಣಿಸಿದರು. 2018ರ ಬದಲಾದ ಸನ್ನಿವೇಶದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು ಮಾವ ಕಾಗೋಡು ಅವರಿಗೆ ಬೆಂಬಲ ಸೂಚಿಸಿದರೂ ಗೆಲುವು ಸಿಗಲಿಲ್ಲ.

ಬೆಳ್ತಂಗಡಿ
ಸಹೋದರರ ಸವಾಲ್‌!
ಇಲ್ಲಿನ ವಸಂತ ಬಂಗೇರ ಹಾಗೂ ಪ್ರಭಾಕರ ಬಂಗೇರ ಸಹೋದರರು ಈ ಕ್ಷೇತ್ರದಲ್ಲಿ ಹಲವು ವಿಧಾನಸಭಾ ಚುನಾವಣೆಯಲ್ಲಿ ಎದುರು ಬದುರಾಗಿ ಸ್ಪರ್ಧಿಸುವ ಮೂಲಕ ಗಮನ ಸೆಳೆದಿದ್ದಾರೆ. 1989ರ ಚುನಾವಣೆಯಲ್ಲಿ ಪ್ರಭಾಕರ ಬಂಗೇರ ಅವರು ಸಹೋದರನಿಗೆ ಸವಾಲ್‌ ಆಗಿ ಬಿಜೆಪಿಯಿಂದ ಸ್ಪರ್ಧಿಸಿದ್ದರೂ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು. ಈ ಅವಧಿಯಲ್ಲಿ ವಸಂತ ಬಂಗೇರ ಜನತಾದಳದಿಂದ ಸ್ಪರ್ಧಿಸಿ ಎರಡನೇ ಸ್ಥಾನಕ್ಕೆ ಬಂದಿದ್ದರು. 1994ರಲ್ಲಿ ಮತ್ತೆ ಸಹೋದರರು ಪ್ರತಿಸ್ಪರ್ಧಿಗಳಾಗಿದ್ದರು. ಜನತಾದಳದಿಂದ ಸ್ಪರ್ಧಿಸಿದ್ದ ವಸಂತ ಬಂಗೇರ ಜಯಗಳಿಸಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಭಾಕರ ಬಂಗೇರ ದ್ವಿತೀಯ ಸ್ಥಾನ ಪಡೆದಿದ್ದರು. 1999 ಹಾಗೂ 2004ರಲ್ಲಿಯೂ ಸಹೋದರರು ಸ್ಪರ್ಧಿಸಿದ್ದು ಎರಡೂ ಅವಧಿಯಲ್ಲಿಯೂ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಭಾಕರ ಬಂಗೇರ ಜಯಗಳಿಸಿ, ಜನತಾದಳದಿಂದ ಸ್ಪರ್ಧಿಸಿದ್ದ ಸಹೋದರ ವಸಂತ ಬಂಗೇರರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. 2008ರಲ್ಲಿ ಮತ್ತೆ ವಸಂತ ಬಂಗೇರ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದು, ಬಿಜೆಪಿಯ ಪ್ರಭಾಕರ ಬಂಗೇರ ದ್ವಿತೀಯ ಸ್ಥಾನದಲ್ಲಿದ್ದರು.

ದೇವದುರ್ಗದಲ್ಲಿ ಸ್ಪರ್ಧಿಸಿದ್ದ ಅಜ್ಜ-ಮೊಮ್ಮಗ
ದೇವದುರ್ಗ ಕ್ಷೇತ್ರದ ಹಾಲಿ ಶಾಸಕ ಕೆ. ಶಿವನಗೌಡ ನಾಯಕ ಈ ಹಿಂದೆ ಅವರ ತಾತ ವೆಂಕಟೇಶ ನಾಯಕ, ಮಾವಂದಿರಾದ ಬಿ.ವಿ. ನಾಯಕ, ರಾಜಶೇಖರ ನಾಯಕರ ವಿರುದ್ಧ ಸ್ಪರ್ಧಿಸಿದ್ದರು. ಮಾವ ಬಿ.ವಿ. ನಾಯಕರನ್ನು ಸೋಲಿಸಿದ್ದರೆ, ತಾತ ವೆಂಕಟೇಶ ನಾಯಕರ ವಿರುದ್ಧ ಸೋಲುಂಡಿದ್ದರು. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ 1994ರಲ್ಲಿ ಲಿಂಗಸುಗೂರು ಕ್ಷೇತ್ರದಿಂದ ತಮ್ಮ ಮಾವ ರಾಜಾ ಅಮರಪ್ಪ ನಾಯಕರ ವಿರುದ್ಧವೇ ಸ್ಪರ್ಧಿಸಿದ್ದರು. ಮಸ್ಕಿ ಕ್ಷೇತ್ರದಲ್ಲೂ 2013ರ ಚುನಾವಣೆಯಲ್ಲಿ ಪ್ರತಾಪಗೌಡ ಪಾಟೀಲ್‌ ವಿರುದ್ಧ ಅವರ ಮಾವ ಮಹಾದೇವಪ್ಪ ಗೌಡ ಕೆಜೆಪಿಯಿಂದ ಸ್ಪರ್ಧಿಸಿದ್ದರು.

ಕುಣಿಗಲ್‌
ಸಹೋದರರ ಸ್ಪರ್ಧೆ, ಮೂರನೇಯವರಿಗೆ ಲಾಭ
ಕಲ್ಪತರು ನಾಡಿನ ಕುಣಿಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಅಣ್ಣ-ತಮ್ಮ ಕಲಹ 2008ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಿಂದ ನಡೆಯುತ್ತಲೇ ಇದ್ದು, ಮೂರನೇಯವರಿಗೆ ಲಾಭವಾಗಿ ಪರಿಣಮಿಸುತ್ತಿದೆ. 2008ರಿಂದ 2018ರ ವರೆಗೆ ಮೂರು ಚುನಾವಣೆಯಲ್ಲಿ ಅಣ್ಣ ಡಿ.ನಾಗರಾಜಯ್ಯ ಜೆಡಿಎಸ್‌ನಿಂದ ಸ್ಪರ್ಧಿಸಿದರೆ, ತಮ್ಮ ಡಿ.ಕೃಷ್ಣಕುಮಾರ್‌ ಬಿಜೆಪಿಯಿಂದ ಸ್ಪರ್ಧೆ ನೀಡುತ್ತಾ ಬಂದಿದ್ದು, ಎರಡು ಚುನಾವಣೆಯಲ್ಲಿ ಇಬ್ಬರೂ ಸೋಲು ಕಂಡಿದ್ದಾರೆ. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ.ಕೃಷ್ಣಕುಮಾರ್‌, ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ನಾಗರಾಜಯ್ಯ ಇಬ್ಬರೂ ಸೋತಿದ್ದರು. ಆಗ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದಿದ್ದರು. ಆದರೆ 2013ರಲ್ಲಿ ಡಿ.ನಾಗರಾಜಯ್ಯ ಡಿ.ಕೃಷ್ಣಕುಮಾರ್‌ ವಿರುದ್ಧ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ರಾಮಸ್ವಾಮಿಗೌಡ ಮೂರನೇ ಸ್ಥಾನಕ್ಕೆ ಹೋಗಿದ್ದರು. 2018ರಲ್ಲಿ ಮತ್ತೆ ಇಬ್ಬರ ನಡುವೆ ತೀವ್ರ ಕದನ ನಡೆದಿತ್ತು. ಆದರೆ ಈ ಬಾರಿ ಇಬ್ಬರೂ ಸೋತು ಮೂರನೆಯವರಾದ ಕಾಂಗ್ರೆಸ್‌ನ ಡಾ| ರಂಗನಾಥ್‌ ಗೆದ್ದಿದ್ದರು.

ದಾವಣಗೆರೆ
ರವೀಂದ್ರನಾಥ್‌- ಮಲ್ಲಿಕಾರ್ಜುನ್‌ ಸೆಣಸಾಟ
ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ಶಾಸಕ ಎಸ್‌.ಎ.ರವೀಂದ್ರನಾಥ್‌ ಹಾಗೂ ಕಾಂಗ್ರೆಸ್‌ನ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಸಂಬಂಧದಲ್ಲಿ ಅಣ್ಣ-ತಮ್ಮಂದಿರು. ಶಾಸಕ ಶಾಮನೂರು ಶಿವಶಂಕರಪ್ಪ ಅವರ ತಾಯಿ ಮತ್ತು ಎಸ್‌.ಎ.ರವೀಂದ್ರನಾಥ್‌ ಅವರ ತಾಯಿ ಒಂದೇ ಕುಟುಂಬದವರಾಗಿದ್ದಾರೆ. ಕೌಟುಂಬಿಕ ಸಂಬಂಧದಲ್ಲಿ ಎಸ್‌.ಎ.ರವೀಂದ್ರನಾಥ್‌ ಮತ್ತು ಎಸ್‌.ಎಸ್‌.ಮಲ್ಲಿಕಾರ್ಜುನ್‌ ಸಹೋದರರಾದರೂ ಚುನಾವಣ ಕಣದಲ್ಲಿ ಇನ್ನಿಲ್ಲದ ಪೈಪೋಟಿ ನಡೆಸುತ್ತಿದ್ದಾರೆ ಎಂಬುದಕ್ಕೆ 2008, 2013 ಮತ್ತು 2018ರ ಚುನಾವಣಾ ಫಲಿತಾಂಶವೇ ಸಾಕ್ಷಿ. 2008ರಲ್ಲಿ ಗೆದ್ದಿದ್ದ ಎಸ್‌.ಎ.ರವೀಂದ್ರನಾಥ್‌ 2013ರಲ್ಲಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ ವಿರುದ್ಧ ಭಾರೀ ಅಂತರದ ಸೋಲು ಕಂಡಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ರವೀಂದ್ರನಾಥ್‌ ರಾಜಕೀಯ ಪಂಡಿತರ ನಿರೀಕ್ಷೆಯನ್ನೇ ಉಲ್ಟಾ ಮಾಡಿ ಅಚ್ಚರಿಯ ಗೆಲುವು ಸಾಧಿಸಿದ್ದಾರೆ. 2023ರ ಚುನಾವಣೆಯಲ್ಲೂ ಅಣ್ಣ-ತಮ್ಮನ ಕಾದಾಟ ನಡೆಯುವ ಎಲ್ಲ ಸಾಧ್ಯತೆಗಳೂ ಇವೆ.

ದೀಪಕ್‌ Vs ಆನಂದ್‌
ಹೊಸಪೇಟೆ ಕ್ಷೇತ್ರದಲ್ಲಿ ಆನಂದ್‌ ಸಿಂಗ್‌ ಮತ್ತು ದೀಪಕ್‌ ಸಿಂಗ್‌ ನಡುವೆ 2008 ಮತ್ತು 2018ರಲ್ಲಿ ಹೋರಾಟ ನಡೆದಿದೆ. ಈ ಎರಡೂ ಬಾರಿಯೂ ತಮ್ಮ ಸಹೋದರನ ವಿರುದ್ಧ ಆನಂದ್‌ ಸಿಂಗ್‌ ಗೆದ್ದಿದ್ದಾರೆ. 2008ರಲ್ಲಿ ದೀಪಕ್‌ ಸಿಂಗ್‌ ಬಂಡಾಯವಾಗಿ ಸ್ಪರ್ಧೆ ಮಾಡಿದ್ದರೆ ಆನಂದ್‌ ಸಿಂಗ್‌ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆಗ ಆನಂದ್‌ ಸಿಂಗ್‌ ಗೆದ್ದಿದ್ದರು. 2018ರಲ್ಲಿ ಆನಂದ್‌ ಸಿಂಗ್‌ ಕಾಂಗ್ರೆಸ್‌ನಿಂದ, ದೀಪಕ್‌ ಸಿಂಗ್‌ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿಯೂ ಆನಂದ್‌ ಸಿಂಗ್‌ ಅವರೇ ಜಯ ಗಳಿಸಿದ್ದರು.

ಬೀದರ್‌
ಖಂಡ್ರೆ ಸಹೋದರರ ಕಾಳಗ
ಬೀದರ ಜಿಲ್ಲೆಯ ಭಾಲ್ಕಿ ಕ್ಷೇತ್ರ ಖಂಡ್ರೆದ್ವಯರ ಕಾಳಗದಿಂದಲೇ ರಾಜ್ಯ ರಾಜಕಾರಣದ ಗಮನ ಸೆಳೆಯುತ್ತ ಬಂದಿದೆ. ಸಹೋದರ ಸಂಬಂಧಿಗಳಾದ ಶಾಸಕ ಈಶ್ವರ ಖಂಡ್ರೆ ಮತ್ತು ಮಾಜಿ ಶಾಸಕ ಪ್ರಕಾಶ ಖಂಡ್ರೆ ನಡುವೆ ಸ್ಪರ್ಧೆಯಿಂದ ಜಿದ್ದಾಜಿದ್ದಿನ ಕ್ಷೇತ್ರ ಎನಿಸಿಕೊಂಡಿದೆ. ಕ್ಷೇತ್ರ ಈವರೆಗೆ ಹದಿನೈದು ಚುನಾವಣೆಗಳನ್ನು ಎದುರಿಸಿದ್ದು, ಕಳೆದ ಐದು ದಶಕಗಳಿಂದ ಖಂಡ್ರೆ ಪರಿವಾರವೇ ಇಲ್ಲಿ ಗೆಲ್ಲುತ್ತಾ ಬಂದಿದೆ. ಹಾಲಿ ಶಾಸಕ ಈಶ್ವರ ಖಂಡ್ರೆ ಮೂರು ಬಾರಿ ವಿಧಾನಸಭೆಗೆ ಪ್ರವೇಶ ಮಾಡಿದ್ದರೆ; ಪ್ರಕಾಶ ಖಂಡ್ರೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next