Advertisement

ವಿಧಾನ-ಕದನ 2023: ಉಡುಪಿ ಬಿಜೆಪಿಯಲ್ಲಿ ಹೊಸ ಮುಖಗಳ ಪ್ರಯೋಗಕ್ಕೆ ಕಾಲ ಕೂಡಿ ಬಂತೇ?

11:52 PM Mar 26, 2023 | Team Udayavani |

ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿಯು ಟಿಕೆಟ್‌ ಹಂಚಿಕೆಯಲ್ಲಿ ಗೊಂದಲಕ್ಕಿಂತ ಕಾದು ನೋಡುವ ತಂತ್ರ ಅನುಸರಿಸುತ್ತಿದೆ. ತನ್ನದೇ ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಬದಲಾವಣೆ ಹಾಗೂ ಹೊಸ ಮುಖಗಳ ಪರಿಚಯದಂಥ ಅಂಶಗಳಿಗೆ ಮನ್ನಣೆ ನೀಡಲು ಮನಸ್ಸು ಹದಗೊಳಿಸಿಕೊಂಡಿದೆ. ಪ್ರತಿಸ್ಪರ್ಧಿಗಳ ತಂತ್ರಗಳನ್ನು ಆಧರಿಸಿ ನಿರ್ಧರಿಸಲಿದೆ.

Advertisement

ಮೂಲಗಳ ಪ್ರಕಾರ ಹೌದು. ಉಡುಪಿ ಜಿಲ್ಲೆಯ ಎರಡು ಅಥವಾ ಮೂರು ಕ್ಷೇತ್ರದಲ್ಲಿ ಈ ಬಾರಿ ಹೊಸ ಪ್ರಯೋಗ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ. ಈ ಬಾರಿ ಪ್ರತೀ ಕ್ಷೇತ್ರದಲ್ಲೂ ಟಿಕೆಟ್‌ ನೀಡುವಾಗ ಹಲವು ಹಂತಗಳ ಸಮೀಕ್ಷೆಗಳನ್ನೂ ನಡೆಸಿ ಅದರಲ್ಲಿನ ಅಂಶಗಳನ್ನೂ ಮುಖ್ಯವಾಗಿ ಪರಿಗಣಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗಿಂತ ಹೊಸ ಮುಖಕ್ಕೆ ಆದ್ಯತೆ ನೀಡಿದರೆ, ಕ್ಷೇತ್ರ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬ ಅಂಶ ಉಲ್ಲೇಖವಾಗಿದೆ. ಇದಕ್ಕೆ 3-4 ಅವಧಿ ಕಂಡಲ್ಲಿ ಹೊಸ ಮುಖದ ಆಗ್ರಹ, ಇನ್ನು ಕೆಲವೆಡೆ ಬದಲಾವಣೆಯ ಕೂಗು ಸಹ ಸೇರಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಹೊಸ ಮುಖಗಳನ್ನು ಪರಿಚಯಿಸಿ ಹಾಲಿ ವಿರೋಧಿ ಅಲೆಯ ದುಷ್ಪರಿಣಾಮ ತಡೆಯಲು ಸಜ್ಜಾಗುತ್ತಿದ್ದಾರೆ. ಅದಕ್ಕೆ ತಕ್ಕಂತೆ ಜಾತಿ ಲೆಕ್ಕಾಚಾರವನ್ನೂ ಗಮನದಲ್ಲಿಟ್ಟುಕೊಂಡು ತಂತ್ರ ಹೂಡುತ್ತಿದ್ದಾರೆ ಎನ್ನಲಾಗಿದೆ.

ಬಿಜೆಪಿ ಟಿಕೆಟ್‌ ಹಂಚಿಕೆ ಮಾಡುವಾಗ ಕಾಪುವಿನಲ್ಲಿ ಮೊಗವೀರ, ಉಡುಪಿಯಲ್ಲಿ ಬ್ರಾಹ್ಮಣ, ಕಾರ್ಕಳದಲ್ಲಿ ಬಿಲ್ಲವ, ಕುಂದಾಪುರ ಮತ್ತು ಬೈಂದೂರಿನಲ್ಲಿ ಬಂಟ ಸಮುದಾಯಕ್ಕೆ ಇದುವರೆಗೆ ಆದ್ಯತೆ ನೀಡಿದೆ. ಈ ಬಾರಿಯೂ ಒಟ್ಟೂ ಜಾತಿ ಲೆಕ್ಕಾಚಾರದಲ್ಲಿ ಏರುಪೇರಾಗದು. ಆದರೆ ಕ್ಷೇತ್ರ ಹಂಚಿಕೆಯಲ್ಲಿ ಅದಲು ಬದ ಲಾಗುವ ಸಾಧ್ಯತೆ ಕೇಳಿಬರುತ್ತಿದೆ.

ಇವೆಲ್ಲವೂ ಸರಿಯಾದರೆ ಬಿಜೆಪಿ ಹೊಸ ಮುಖಗಳ ಪ್ರಯೋಗದ ಜತೆಗೆ ಜಾತಿ ಲೆಕ್ಕ ವಾರು ಅದಲು ಬದಲಿನಲ್ಲೂ ಹೊಸ ಪ್ರಯೋಗ ನಡೆಸಿದಂತಾಗಲಿದೆ. ಇದಕ್ಕೆ ಪೂರಕವಾಗಿ ಕಾಂಗ್ರೆಸ್‌ ಕೂಡ ಜಿಲ್ಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹತ್ತಾರು ತಂತ್ರಗಳನ್ನು ರೂಪಿಸುತ್ತಿದೆ.

ಈಗಾಗಲೇ ಬೈಂದೂರಿನಲ್ಲಿ ಗೋಪಾಲ ಪೂಜಾರಿ ಹಾಗೂ ಕಾಪುವಿನಲ್ಲಿ ವಿನಯ ಕುಮಾರ್‌ ಸೊರಕೆ ಹೆಸರು ಖಚಿತವಾಗಿದೆ. ಕಾಂಗ್ರೆಸ್‌ ಈಗಾಗಲೇ ಕಾಪು, ಬೈಂದೂರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಆರಂಭಿಸಿದೆ. ಕಾರ್ಕಳ ಮತ್ತು ಉಡುಪಿಯಲ್ಲಿ ಅಭ್ಯರ್ಥಿ ಅಂತಿಮವಾಗಬೇಕಿದ್ದು, ಪ್ರಸ್ತುತ ಪಕ್ಷದ ನೆಲೆಯಲ್ಲಿ ಪ್ರಚಾರ ಚಾಲ್ತಿಯಲ್ಲಿದೆ. ಆದರೆ ಬಿಜೆಪಿಯ ತಂತ್ರವನ್ನು ಆಧರಿಸಿ ಈ ಎರಡು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಆಲೋಚನೆಯಲ್ಲಿದೆ. ಈ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರತಿತಂತ್ರ ರೂಪಿಸುವ ಸಾಧ್ಯತೆಯಿದೆ. ಬಿಜೆಪಿ ಕೂಡ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆಯ ಲೆಕ್ಕಾಚಾರವನ್ನು ಗಮನಿಸುತ್ತಿದೆ. ಇದರ ಆಧಾರದಲ್ಲೇ ಹೊಸ ಪ್ರಯೋಗದ ಭವಿಷ್ಯವೂ ನಿರ್ಧಾರವಾಗಲಿದೆ.

Advertisement

~ ರಾಜು ಖಾರ್ವಿ

Advertisement

Udayavani is now on Telegram. Click here to join our channel and stay updated with the latest news.

Next