Advertisement

Election Bond:ನಿರ್ಮಲಾ, ನಡ್ಡಾ, ಬಿವೈವಿ, ನಳಿನ್‌ ಸೇರಿ ಹಲವರ ವಿರುದ್ಧದ ಎಫ್‌ಐಆರ್‌ಗೆ ತಡೆ

08:42 PM Sep 30, 2024 | Team Udayavani |

ಬೆಂಗಳೂರು: ಚುನಾವಣಾ ಬಾಂಡ್ ಮೂಲಕ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜೆ.ಪಿ.ನಡ್ಡಾ, ವಿಜಯೇಂದ್ರ, ನಳಿನ್ ಕುಮಾರ್ ಕಟೀಲ್,  ಇ.ಡಿ. ಅಧಿಕಾರಿಗಳು ಸೇರಿ ಹಲವರ ವಿರುದ್ಧ ಬೆಂಗಳೂರಿನಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

Advertisement

ಚುನಾವಣಾ ಬಾಂಡ್ ಹೆಸರಿನಲ್ಲಿ ಸುಲಿಗೆ ಮಾಡಲಾಗಿದೆ ಎಂದು ಆರೋಪಿಸಿ ಆದರ್ಶ ಅಯ್ಯರ್  ಬೆಂಗಳೂರಿನ ತಿಲಕ್​ ನಗರ ಠಾಣೆಗೆ ದೂರು ದಾಖಲಿಸಿದ್ದರು.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ತಿಲಕನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ ಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿ ಮುಂದಿನ ವಿಚಾರಣೆಯ ಅ.22ಕ್ಕೆ ಮುಂದೂಡಿದೆ.

ನಳಿನ್ ಕುಮಾರ್ ಕಟೀಲು ಪರ ಕೆ.ಜಿ.ರಾಘವನ್ ವಾದ ಮಂಡಿಸಿ ಸುಲಿಗೆ ವ್ಯಾಖ್ಯಾನದ ಸನಿಹದಲ್ಲೂ ಆರೋಪ ಬರುವುದಿಲ್ಲ. ಜಾರಿ ನಿರ್ದೇಶನಾಲಯವನ್ನೂ ಆರೋಪಿಯಾಗಿಸಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದರು. ಇನ್ನು ದೂರುದಾರ ಆದರ್ಶ್ ಅಯ್ಯರ್ ಪರ ಹಿರಿಯ ವಕೀಲ ಪ್ರಶಾಂತ ಭೂಷಣ್ ವಾದ ಮಂಡಿಸಿ ಇಡಿ ಭಯದಲ್ಲಿ ರಾಜಕೀಯ ಪಕ್ಷಕ್ಕೆ ದೇಣಿಗೆ ಸಂಗ್ರಹಿಸಲಾಗಿದೆ. ಇದು ಸುಲಿಗೆ ಅಲ್ಲದೇ ಮತ್ತೇನೂ ಅಲ್ಲವೆಂದು ಹೇಳಿದರು.

ಇದಕ್ಕೆ ಮಧ್ಯ ಪ್ರವೇಶಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, ಸುಲಿಗೆ ಎಂದರೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರಬೇಕು. ಸುಲಿಗೆಗೆ ಒಳಗಾದವರೇ ಪೊಲೀಸರಿಗೆ ದೂರು ನೀಡಬೇಕು. ಆದರೆ ದೂರುದಾರ ತಾವು ಸುಲಿಗೆಗೆ ಒಳಗಾಗಿದ್ದೇನೆಂದು ಹೇಳಿಲ್ಲ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಜತೆಗೆ ಕೇಂದ್ರ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲ್‌, ಕೇಂದ್ರ ಹಾಗೂ ರಾಜ್ಯ ಬಿಜೆಪಿ ಕಚೇರಿ ಮತ್ತು ಇ.ಡಿ. ವಿರುದ್ಧ ದೂರು ದಾಖಲಿಸಲಾಗಿತ್ತು. 2019ರ ಏಪ್ರಿಲ್‌ನಿಂದ 2022ರ ಆಗಸ್ಟ್‌ವರೆಗೆ ಉದ್ಯಮಿ ಅನಿಲ್‌ ಅಗರ್ವಾ‌ಲ್‌ ಸಂಸ್ಥೆಯ ಕಡೆಯಿಂದ ಸುಮಾರು 230 ಕೋಟಿ ರೂ. ಮತ್ತು ಅರೊಬಿಂದೋ ಫಾರ್ಮಸಿ ಸಂಸ್ಥೆಯಿಂದ 49 ಕೋಟಿ ರು.ನಷ್ಟು ಚುನಾವಣಾ ಬಾಂಡ್‌ಗಳ ಮೂಲಕ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next