ಉಡುಪಿ: ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹೊರತುಪಡಿಸಿ ಅನ್ಯ ಪಕ್ಷಕ್ಕೆ ನೆಲೆಯಿಲ್ಲ ಎಂಬ ಮಾತಿದೆ. ಜೆಡಿಎಸ್ ತನ್ನ ಇರುವಿಕೆಯ ಪ್ರದರ್ಶನಕ್ಕೆ ಆಗಾಗ್ಗೆ ಪ್ರಯತ್ನಿಸುತ್ತಿದೆ.
ಚುನಾವಣೆ ಸಂದರ್ಭದಲ್ಲಿ ಹೆಚ್ಚು ಕ್ರಿಯಾಶೀಲವಾಗುವ ಜೆಡಿಎಸ್ ಬಳಿಕ ಗಮನಕ್ಕೆ ಬರುವುದು ಕಡಿಮೆ. ಕಾಪು ಪುರಸಭೆಯಲ್ಲಿ ಒಂದು ಸೀಟನ್ನು ಗಳಿಸಿದ್ದು, ಈ ಬಾರಿಯೂ ಚುನಾವಣೆಗೆ ಜೋರಾಗಿ ಸಜ್ಜಾಗುತ್ತಿದೆ.
ಕಾರ್ಕಳ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಜಿದ್ದಾಜಿದ್ದಿ ನಡೆಯಲಿದೆ. ಕಾರ್ಕಳದಲ್ಲಿ ಶ್ರೀರಾಮಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ ಈಗಾಗಲೇ ಬಿರುಸಿನ ಪ್ರಚಾರ ಆರಂಭಿಸಿದ್ದು ತ್ರಿಕೋನ ಸ್ಪರ್ಧೆಯ ಸಾಧ್ಯತೆಯನ್ನು ಎತ್ತಿ ಹಿಡಿದಿದೆ. ದಿನೇದಿನೆ ಮುತಾಲಿಕ್ ಸಹ ಕ್ಷೇತ್ರದಲ್ಲಿ ಪ್ರಚಾರವನ್ನು ತೀವ್ರಗೊಳಿಸುವಲ್ಲಿ ನಿರತರಾಗಿರುವುದು ಕುತೂಹಲ ಮೂಡಿಸಿದೆ. ಕಾರ್ಕಳದಲ್ಲಿ ಈ ಬಾರಿ ಚುನಾವಣೆಯ ಮೇಲಾಟ ರಾಷ್ಟ್ರೀಯ ಪಕ್ಷಗಳಿಗೆ ಸೀಮಿತವಾಗಿಲ್ಲ ಎಂಬ ಅಭಿಪ್ರಾಯ ಮೂಡಿಸುತ್ತಿದೆ.
ಕಾಪು, ಉಡುಪಿ ಮತ್ತು ಕಾರ್ಕಳದಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಜೆಡಿಎಸ್ ಸಹ ಪ್ರಯತ್ನಿಸುತ್ತಿದೆ. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕರಪತ್ರವನ್ನು ಗ್ರಾ.ಪಂ. ಮಟ್ಟದಲ್ಲಿ ಹಂಚಲಾಗುತ್ತಿದೆ. ಕಾಪುವಿನಲ್ಲಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಮುಖಂಡ ಸಂಕಪ್ಪ ಅವರು ಟಿಕೆಟ್‌ಗೆ ಕಸರತ್ತು ನಡೆಸುತ್ತಿದ್ದಾರೆ. ಉಡುಪಿ ಮತ್ತು ಕಾರ್ಕಳದಲ್ಲಿ ಅಭ್ಯರ್ಥಿಯ ಹುಡುಕಾಟದಲ್ಲಿದ್ದಾರೆ. ಕುಂದಾಪುರ ಮತ್ತು ಬೈಂದೂರಿನಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ಚಾಲ್ತಿಯಲ್ಲಿದೆ.
ಕಾಪು ಪುರಸಭೆಯಲ್ಲಿ ಮೂರು ಸೀಟು ಗೆದ್ದಿರುವ ಎಸ್‌ಡಿಪಿಐ, ಕಾಪುವಿನಲ್ಲಿ ಹನೀಫ್ ಮೂಳೂರು ಅವರನ್ನು ಕಣಕ್ಕಿಳಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಆರಂಭಿಸಿದೆ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧೆಯ ಕುರಿತು ಇನ್ನೂ ಸ್ಪಷ್ಟವಾಗಿಲ್ಲ.
ಜಿಲ್ಲೆಯಲ್ಲಿ ಜಯಪ್ರಕಾಶ್ ಹೆಗ್ಡೆ, ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸಿದ ಉದಾಹರಣೆಗಳು ಇಲ್ಲ. ಈ ಬಾರಿಯೂ ಐದು ಕ್ಷೇತ್ರದಲ್ಲೂ ಸ್ವತಂತ್ರ ಅಭ್ಯರ್ಥಿಯಾಗಿ ದೊಡ್ಡ ಮಟ್ಟದ ಪರಿಣಾಮ ಬೀರಬಲ್ಲ ಅಭ್ಯರ್ಥಿಗಳ ಹೆಸರು ಇದುವರೆಗೂ ಕೇಳಿಬಂದಿಲ್ಲ. ಮುಂದಿನ ದಿನಗಳ ರಾಜಕೀಯ ಬದಲಾವಣೆಯ ಹಿನ್ನೆಲೆಯಲ್ಲಿ ಯಾವ ಗಾಳಿ ಬೀಸಬಹುದೋ ತಿಳಿದಿಲ್ಲ.
ಜಿಲ್ಲೆಯಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಎಲ್ಲಿಯೂ ಅಭ್ಯರ್ಥಿಯ ಹೆಸರುಗಳನ್ನು ಅಂತಿಮವಾಗಿಲ್ಲ. ಕಾಪು, ಉಡುಪಿ, ಕಾರ್ಕಳ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ.
– ಯೋಗೀಶ್ ವಿ. ಶೆಟ್ಟಿ, ಜೆಡಿಎಸ್ ಜಿಲ್ಲಾಧ್ಯಕ್ಷ
~ರಾಜು ಖಾರ್ವಿ ಕೊಡೇರಿ