Advertisement

ಚುನಾವಣೆ ಹಿನ್ನೆಲೆ ಪಾಲಿಕೆ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ!

09:26 PM Apr 10, 2019 | Sriram |

ಮಹಾನಗರ: “ಇಲ್ಲ ಸರ್‌ ಈಗ ನಿಮ್ಮ ಯಾವುದೇ ಕೆಲಸ ಆಗಲ್ಲ; ಎಲ್ಲರೂ ಎಲೆಕ್ಷನ್‌ನಲ್ಲಿ ಬಿಜಿಯಿದ್ದಾರೆ. ಏನಿದ್ದರೂ ಚುನಾವಣೆ ಮುಗಿಯಲಿ; ಆ ಮೇಲೆ ನೋಡೋಣ ಸರ್‌…!’

Advertisement

ಮಹಾನಗರ ಪಾಲಿಕೆ ಸಹಿತ ನಗರದ ಪ್ರಮುಖ ಸರಕಾರಿ ಕಚೇರಿಗಳಲ್ಲಿ ಜನಸಾಮಾನ್ಯರು ಅಧಿಕಾರಿಗಳನ್ನು ಹುಡುಕಿಕೊಂಡು ತಮ್ಮ ಕುಂದು-ಕೊರತೆ ಅಥವಾ ಇತರೆ ಯಾವುದೇ ಸರಕಾರಿ ಕೆಲಸ ಮಾಡಿಸುವುದಕ್ಕೆ ಹೋದರೆ, ಅಲ್ಲಿ ಕೇಳಿಬರುತ್ತಿರುವ ಸಾಮಾನ್ಯ ಮಾತು.

ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದ್ದಂತೆ ಅತ್ತ ಆಡಳಿತ ಯಂತ್ರ ವ್ಯವಸ್ಥೆ ಕೂಡ ಸ್ವಲ್ಪ ಮಟ್ಟಿಗೆ ನಿಧಾನವಾಗುವ ಮೂಲಕ ಅಧಿಕಾರಿಗಳು ಜನರ ಕೆಲಸಗಳಿಗೆ ಸಿಗುವುದು ಅನುಮಾನ ಎನ್ನುವ ಪರಿಸ್ಥಿತಿ ಬಹುತೇಕ ಎಲ್ಲ ಸರಕಾರಿ ಕಚೇರಿಗಳಲ್ಲಿ ಈಗ ಇದೆ. ಜನರು ತಮ್ಮ ತುರ್ತು ಕೆಲಸಗಳನ್ನು ಮಾಡಿಸಿಕೊಳ್ಳಲು ಹೋದರೆ ಕಚೇರಿಯಲ್ಲಿ ಯಾರೂ ಇಲ್ಲ. ಎಲ್ಲರೂ ಚುನಾವಣ ಕರ್ತವ್ಯದಲ್ಲಿ ತೊಡಗಿಕೊಂಡಿದ್ದಾರೆ ಎನ್ನುವ ಸಿದ್ಧ ಉತ್ತರ ದೊರೆಯುತ್ತದೆ. ಇದರಿಂದ ಅಗತ್ಯ ಕೆಲಸಗಳನ್ನು ಮಾಡಿಸಿಕೊಳ್ಳಲು ಸರಕಾರಿ ಕಚೇರಿಗೆ ತೆರಳುವ ಜನರು ಮಾತ್ರ ಖಾಲಿ ಕೈಯಲ್ಲಿ ಹಿಂದಿರುಗಬೇಕಾದ ಸ್ಥಿತಿಯಿದೆ.

ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತಾವಧಿ ಮುಕ್ತಾಯಗೊಂಡು ಸುಮಾರು ಒಂದು ತಿಂಗಳು ಕಳೆದಿದೆ. ಈ ಕಾರಣಕ್ಕೆ ಯಾವುದೇ ವಾರ್ಡ್‌ಗಳಲ್ಲಿ ಕುಡಿಯುವ ನೀರು, ರಸ್ತೆ-ಚರಂಡಿ ಮುಂತಾದ ಸಮಸ್ಯೆಗಳಿಗೆ ಜನರು ಸ್ಥಳೀಯ ವಾರ್ಡ್‌ ಸದಸ್ಯರನ್ನು ಪರಿಹಾರ ಕಲ್ಪಿಸುವಂತೆ ಕೇಳುವ ಪರಿಸ್ಥಿತಿ ಇಲ್ಲ. ಏನಿದ್ದರೂ ಅಧಿಕಾರಿ ವರ್ಗದವರನ್ನೇ ಅವಲಂಬಿಸಬೇಕಾಗಿದೆ. ಚುನಾವಣೆ ಕಾರ್ಯಗಳಿಂದಾಗಿ ಅತ್ತ ಅಧಿಕಾರಿಗಳಿಗೂ ಸಂಬಂಧಪಟ್ಟ ಇಲಾಖಾ ಕೆಲಸಗಳತ್ತ ಗಮನಹರಿ ಸುವುದಕ್ಕೆ ಕಷ್ಟಸಾಧ್ಯ ವಾಗಿದೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆಯಾಗುತ್ತಿದೆ.

ಪಾಲಿಕೆ ಕೆಲಸಗಳು ನಡೆಯುತ್ತಿಲ್ಲ
ಪಾಲಿಕೆಯ ಯಾವುದೇ ಕಚೇರಿಗೆ ತೆರಳಿದರೆ ಅಲ್ಲಿ ಅರ್ಧದಷ್ಟು ಅಧಿಕಾರಿ ಗಳ ಅನುಪಸ್ಥಿತಿ ಎದ್ದು ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಆಗಬೇಕಾದ ಡೋರ್‌ ನಂ. ನೀಡು ವುದು, ಉದ್ದಿಮೆ ಪರವಾನಿಗೆ, ಖಾತಾ ಬದಲಾ ವಣೆ, ಕುಡಿಯುವ ನೀರಿನ ಬಿಲ್‌ ಸಮಸ್ಯೆ ಸಹಿತ ಬಹುತೇಕ ಕೆಲಸಗಳು ನಡೆಯುತ್ತಿಲ್ಲ. ಈ ಬಗ್ಗೆ ಕೇಳಿದರೆ ಚುನಾವಣೆಯ ಕಾರಣವನ್ನು ಅಧಿಕಾರಿಗಳು ನೀಡುತ್ತಿದ್ದಾರೆ. ಆದರೆ ನಗರದಲ್ಲಿ ಮನೆ, ಫ್ಲಾ éಟ್‌ ಹೊಂದಿ ವಿದೇಶದಲ್ಲಿ ನೆಲೆಸಿರುವ ಕುಟುಂಬಸ್ಥರು ಎಪ್ರಿಲ್‌, ಮೇ ರಜೆಯಲ್ಲಿ ನಗರದಲ್ಲಿ ತಮ್ಮ ಅಗತ್ಯ ಕೆಲಸಗಳನ್ನು ಮಾಡಿಸಿಕೊಳ್ಳಬೇಕೆಂದಿದ್ದರೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ.

Advertisement

ಕ್ರಮಬದ್ಧವಾಗಿ ಕರ್ತವ್ಯ ಹಂಚಿಕೆಯಾಗಲಿ
ಅಗತ್ಯ ಕೆಲಸಗಳು ನಡೆಯಬೇಕಾದ ಇಲಾಖೆಯ ಅಧಿಕಾರಿಗಳನ್ನು ಕಡಿಮೆ ಪ್ರಮಾಣದಲ್ಲಿ ಚುನಾವಣ ಕರ್ತವ್ಯಗಳಿಗೆ ಬಳಸುವುದರಿಂದ ಸಾಮಾನ್ಯ ಜನರಿಗೆ ಸಮಸ್ಯೆಯಾಗುವುದು ತಪ್ಪುತ್ತದೆ. ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಕುಡಿಯುವ ನೀರಿನ ಯೋಜನೆ ಸಹಿತ ಜನರಿಗೆ ಅಗತ್ಯವಿರುವ ಇಲಾಖೆಯ ಅಧಿಕಾರಿಗಳಿಗೆ ಚುನಾವಣ ಕೆಲಸದಿಂದ ಕೊಂಚ ರಿಯಾಯಿತಿ ನೀಡಿದರೆ, ಜನರ ಕೆಲಸಗಳು ವೇಗವಾಗಿ ನಡೆಯಲು ಸಾಧ್ಯವಾಗುತ್ತದೆ. ಒಂದು ಇಲಾಖೆಯಲ್ಲಿ 10 ಜನ ಅಧಿಕಾರಿಗಳಿದ್ದರೆ ಅವರಲ್ಲಿ ದಿನಕ್ಕೆ ಕೆಲವು ಜನರಿಗೆ ಮಾತ್ರ ಚುನಾವಣ ಕೆಲಸ, ಬಾಕಿ ಉಳಿದಿರುವವರಿಗೆ ಜನರು ದೈನಂದಿನ ಕೆಲಸಗಳನ್ನು ಮಾಡುವ ಅವಕಾಶ ಕಲ್ಪಿಸಬಹುದಿತ್ತು. ಆದರೆ ಈಗ ಎಲ್ಲರನ್ನೂ ಚುನಾವಣ ಕೆಲಸಗಳಿಗೆ ಕಳುಹಿಸಲಾಗುತ್ತಿದೆ. ಇದರಿಂದ ಸಾಮಾನ್ಯ ಜನರ ಕಚೇರಿ ಕೆಲಸಗಳು ಮೂಲೆಗುಂಪಾಗುತ್ತಿವೆ.

ಅಧಿಕಾರಿಗಳಿಗೂ ಒತ್ತಡ
ಚುನಾವಣ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಿರಬೇಕು ಎನ್ನುವ ಆದೇಶವಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಬಹುತೇಕ ಅಧಿಕಾರಿಗಳು ಚುನಾವಣ ಕೆಲಸಕ್ಕೆ ತೆರಳುತ್ತಿದ್ದಾರೆ. ರಜಾದಿನಗಳಲ್ಲೂ ಕೆಲಸ ಮಾಡಬೇಕಾದ ಅನಿವಾರ್ಯ ಅವರಿಗಿದೆ.

 ಅರ್ಜಿ ಕೊಟ್ಟು ಎರಡು ತಿಂಗಳು !
ನಾನು ಉದ್ದಿಮೆ ಪರವಾನಿಗೆ ನವೀಕರಣಕ್ಕೆ ಫೆ. 6ರಂದು ಪಾಲಿಕೆಗೆ ಅರ್ಜಿ ನೀಡಿದ್ದೆ. ಆದರೆ, ಚುನಾವಣೆ ದಿನಾಂಕ ಘೋಷಣೆ ಆಗುವ ತನಕ ನನ್ನ ಅರ್ಜಿಯನ್ನು ವಿಲೇವಾರಿ ಮಾಡಿರಲಿಲ್ಲ. ಈಗ ಕೇಳಿದರೆ, ಅಧಿಕಾರಿಗಳೆಲ್ಲ ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಏನಿದ್ದರೂ ಚುನಾವಣೆ ಕಳೆದು ಬನ್ನಿ ಎಂದು ಸಬೂಬು ಹೇಳುತ್ತಿದ್ದಾರೆ. ನನ್ನ ರೀತಿಯಲ್ಲಿ ಅನೇಕ ಜನರು ಅರ್ಜಿ ಕೊಟ್ಟು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ.
– ನವೀನ್‌ ,ವ್ಯಾಪಾರಿ

 ಮಾಹಿತಿ ಇಲ್ಲ
ಚುನಾವಣೆ ಕರ್ತವ್ಯವನ್ನು ನಿಭಾಯಿಸಬೇಕಾಗಿರುವುದು ಅಧಿಕಾರಿಗಳ ಕರ್ತವ್ಯ. ಆದರೆ ಅದರಿಂದ ದೈನಂದಿನ ಕೆಲಸಗಳಿಗೆ ತೊಂದರೆ ಆಗಿರುವುದರ ಬಗ್ಗೆ ನನಗೆ ಮಾಹಿತಿ ಬಂದಿಲ್ಲ. ಯಾರಿಗಾದರೂ ಸಮಸ್ಯೆಯಾಗಿದ್ದರೆ ನನ್ನ ಬಳಿ ಬರಲಿ.
– ನಾರಾಯಣಪ್ಪ,
ಪಾಲಿಕೆ ಪ್ರಭಾರ ಆಯುಕ್ತ

– ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next