Advertisement

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

10:22 AM Apr 18, 2024 | Team Udayavani |

ಮೂಡಿಗೆರೆ: ದೇಶದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಓರ್ವ ಆದರ್ಶ ಮತ್ತು ಪ್ರಾಮಾಣಿಕ ರಾಜಕಾರಣಿ. ಕೋಟ ಅವರನ್ನು ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮಾಜಿ ಪ್ರಧಾನಿ ದೇವೇಗೌಡ ಮನವಿ ಮಾಡಿದರು.

Advertisement

ಅವರು ಮೂಡಿಗೆರೆಯಲ್ಲಿ ಬುಧವಾರ ನಡೆದ ಬಿಜೆಪಿ ಜೆಡಿಎಸ್‌ ಕಾರ್ಯಕರ್ತರ ಜಂಟಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ನನಗೆ ಇನ್ನು ಅಧಿಕಾರದ ಆಸೆ ಇಲ್ಲ. ಆದರೆ ದೇಶವಾಸಿಗಳು ನೆಮ್ಮದಿಯಿಂದ ಇರಬೇಕು ಎನ್ನುವ ನನ್ನ ಆಸೆಗೆ ಪ್ರಧಾನಿ ಆಗಲು ಸಾಮರ್ಥ್ಯ ಇರುವ ವ್ಯಕ್ತಿ ಮೋದಿ ಬಿಟ್ಟರೆ ಬೇರೆ ಯಾವುದೇ ವ್ಯಕ್ತಿ ಭಾರತದಲ್ಲಿಲ್ಲ.ಆ ಹಿನ್ನೆಲೆಯಲ್ಲಿ ಯಾವುದೇ ಷರತ್ತಿಲ್ಲದೆ ನಾನು ಮೋದಿಯವರನ್ನು ಬೆಂಬಲಿಸಿದೆ ಎಂದರು.

ಭಾರತ ಅಖಂಡವಾಗಿದ್ದರೆ ಪಾಕ್‌ನಲ್ಲೂ ಅಂಬೇಡ್ಕರ್‌ ಜಯಂತಿ ಮಾಜಿ ಸಚಿವ ಸಿ.ಟಿ. ರವಿ ಮಾತ ನಾಡಿ, ಭೀಮ ಇಲ್ಲದೇ ಭಾರತವಿಲ್ಲ, ಭಾರತವಿಲ್ಲದೆ ಭೀಮ ಇಲ್ಲ. ಭಾರತ ಅಖಂಡವಾಗಿದ್ದರೆ ಪಾಕಿಸ್ಥಾನದಲ್ಲಿ ಕೂಡ ಅಂಬೇಡ್ಕರ್‌ ಜಯಂತಿ ನಡೆಯುತ್ತಿತ್ತು. ಕಾಂಗ್ರೆಸ್‌ನವರು ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ನ. 26 ಸಂವಿಧಾನ ಕೊಟ್ಟ ದಿನವನ್ನು ಮೋದಿ ಸರಕಾರ ಬಂದ ಬಳಿಕ ನ. 26ರಂದು ಸಂವಿಧಾನ ಗೌರವ ದಿನವೆಂದು ದೇಶಾದ್ಯಂತ ಆಚರಿಸಲಾಗುತ್ತಿದೆ ಎಂದರು.

ವಿಧಾನ ಪರಿಷತ್‌ ಉಪಸಭಾಪತಿ ಎಂ.ಕೆ. ಪ್ರಾಣೇಶ್‌ ಮಾತನಾಡಿ, ಧರ್ಮಕ್ಕೆ ಕಂಟಕ ಬಂದಾಗ ಕೃಷ್ಣ ಪರಮಾತ್ಮ ಬಂದಂತೆ, ದೇಶಕ್ಕೆ ಕಂಟಕ ಎದುರಾದಾಗ ಶ್ರೀಕೃಷ್ಣ ರೂಪದಲ್ಲಿ ಮೋದಿ ಬಂದಿದ್ದಾರೆ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ಎಸ್‌. ಭೋಜೇಗೌಡ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಈ ದೇಶ ಉಳಿಸುವ ಶಕ್ತಿ ಮೋದಿ ಬಿಟ್ಟರೆ ಬೇರಾರಿಗೂ ಇಲ್ಲ ಎಂದು ಹೇಳಿದರು. ಮೈತ್ರಿ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಮತದಾರರಲ್ಲಿ ಮನವಿ ಮಾಡಿದರು.

Advertisement

ಸಕಲೇಶಪುರ ಶಾಸಕ ಸಿಮೆಂಟ್‌ ಮಂಜು, ಮಾಜಿ ಶಾಸಕ ವೈಎಸ್‌ವಿ ದತ್ತ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್‌. ದೇವರಾಜ್‌ ಶೆಟ್ಟಿ, ತಾ| ಅಧ್ಯಕ್ಷ ಗಜೇಂದ್ರ, ಜೆಡಿಎಸ್‌ ಜಿಲ್ಲಾಧ್ಯಕ್ಷ ರಂಜನ್‌ ಅಜಿತ್‌, ತಾ| ಅಧ್ಯಕ್ಷ ಡಿ.ಜೆ. ಸುರೇಶ್‌, ಶೈಂಗೇರಿ ಸುಧಾಕರ ಶೆಟ್ಟಿ, ದೀಪಕ್‌ ದೊಡ್ಡಯ್ಯ, ಸುಶ್ಮಾವಿಭಾ, ಚೈತ್ರಶ್ರೀ, ಕಲ್ಮುರುಡಪ್ಪ, ಕುರುವಂಗಿ ವೆಂಕಟೇಶ್‌, ಜೆ.ಎಸ್‌. ರಘು ಉಪಸ್ಥಿತರಿದ್ದರು.

ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಿ
ಕೋಟ ಶ್ರೀನಿವಾಸ ಪೂಜಾರಿ ಅವರ ಎದುರು ನಿಂತ ಕಾಂಗ್ರೆಸ್‌ ಅಭ್ಯರ್ಥಿ ನನ್ನ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದವರು. ಆದರೆ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗೆ ಹೋಲಿಸಿದರೆ ಕೋಟ ಅವರ ವ್ಯಕ್ತಿತ್ವ ಬಹಳ ಎತ್ತರದಲ್ಲಿ ನಿಲ್ಲುತ್ತದೆ. ಇಂತಹ ರಾಜಕಾರಣಿಗಳು ಸಂಸತ್‌ ಪ್ರವೇಶ ಮಾಡಬೇಕಾದಂತಹ ಅಗತ್ಯವಿದೆ. ಕೋಟ ಅವರನ್ನು ಸಂಸತ್ತಿಗೆ ಕಳುಹಿಸಿ ಎಂಬ ಮೋದಿ ಮಾತಿಗೆ ನಾನು ಧ್ವನಿಗೂಡಿಸಿ ಕೋಟ ಅವರನ್ನು ಪ್ರಚಂಡ ಬಹುಮತ ದಿಂದ ಆಯ್ಕೆ ಮಾಡಬೇಕೆಂದು ಕೈ ಮುಗಿದು ಪ್ರಾರ್ಥಿಸುತ್ತೇನೆ ಎಂದು ಕರೆ ನೀಡಿದರು.

ಸಿದ್ದರಾಮಯ್ಯ ಅವರು ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅಲ್ಲದೇ ಕೊನೆ ಹಂತದಲ್ಲಿ ದೇವೇಗೌಡರು ಬಿಜೆಪಿ ಹಿಂದೆ ಹೋಗಿದ್ದಾರೆಂದು ತನ್ನ ಬಗ್ಗೆ ಕೂಡ ಹಗುರವಾಗಿ ಮಾತನಾಡುತ್ತಾರೆ. ನನ್ನ ಮನಸ್ಸಿಗೆ ವಯಸ್ಸಾಗಿಲ್ಲ. ಇನ್ನೂ ಶಕ್ತಿ ಇದೆ. ಮುಖ್ಯಮಂತ್ರಿ ಆದವರಿಗೆ ಅಧಿಕಾರದ ಅಹಂ ಇರಬಾರದು. ಅದು ಇದ್ದರೆ ಆ ಪಕ್ಷ ಹೆಚ್ಚು ಕಾಲ ಉಳಿಯುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next