Advertisement

ಜನಪ್ರಿಯ ಯೋಜನೆ ಬೆನ್ನೇರಿ…ಚುನಾವಣೆಗೆ ಮೂರು ತಿಂಗಳು ಇರುವಾಗಲೇ ಆಮಿಷ ಆರಂಭ

10:44 PM Jan 26, 2023 | Team Udayavani |

ಮೈಸೂರು: ಕರ್ನಾಟಕದ ರಾಜಕಾರಣದಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವಾಗ ಜನಪ್ರಿಯತೆಯ ಉಚಿತ ಯೋಜನೆಗಳನ್ನು ಪ್ರಕಟಿಸುವುದು ಅಥವಾ ನಿರ್ದಿಷ್ಟ ಯೋಜನೆಯನ್ನು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡುವುದು ಅಪರೂಪ. ಆದರೆ ಈ ಬಾರಿ ರಾಜಕೀಯ ಪಕ್ಷಗಳು ಮತ ಸೆಳೆಯಲು ಎಲ್ಲ ಪಕ್ಷಗಳೂ ಒಂದಲ್ಲ ಒಂದು ಜನಪ್ರಿಯ ಯೋಜನೆಗಳ ಮೊರೆ ಹೋಗಿವೆ.

Advertisement

ಕಾಂಗ್ರೆಸಿನ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಕೆ, ಮನೆಯ ಯಜಮಾನಿಗೆ ಎರಡು ಸಾವಿರ ರೂ. ಸಹಾಯಧನ, ಹತ್ತು ಕೆ.ಜಿ. ಅಕ್ಕಿ ಉಚಿತ ವಿತರಣೆ, ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಘೋಷಣೆ ಇದಕ್ಕೆ ನಾಂದಿ ಹಾಡಿದರೆ, ಬಿಜೆಪಿ ಗೃಹಿಣಿಶಕ್ತಿ ಯೋಜನೆಯನ್ನು ಪ್ರಕಟಿಸಿದೆ. ಜೆಡಿಎಸ್‌ ಕೂಡ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದೆ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವ ವಾಡಿಕೆ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿದೆ. ಆದರೆ ಕರ್ನಾಟಕದ ರಾಜಕಾರಣದಲ್ಲೂ ಇಂತಹ ಓಟಿನ ಬೇಟೆಯ ನಡೆ ಇದ್ದರೂ ಅದೊಂದು ವಾಡಿಕೆಯಂತೆ ಇಲ್ಲ. ರಾಜ್ಯ ರಾಜಕಾರಣದಲ್ಲಿ ಸಾಮಾನ್ಯವಾಗಿ ಅಧಿಕಾರಕ್ಕೆ ಬಂದ ಅನಂತರ ಇಂತಹ ಉಚಿತ ಕಾರ್ಯಕ್ರಮಗಳನ್ನು ಪ್ರಕಟಿಸಿರುವುದು ಹೆಚ್ಚು. ಕೆಲವೊಮ್ಮೆ ಚುನಾವಣೆಗೂ ಮುನ್ನವೇ ಪ್ರಣಾಳಿಕೆಯಲ್ಲಿ ಉಚಿತ ಕಾರ್ಯಕ್ರಮಗಳ ಜಾರಿಯ ಭರವಸೆಗಳಿವೆ.

ಕರ್ನಾಟಕದಲ್ಲಿ ಇಂತಹ ಜನಪ್ರಿಯ ಯೋಜನೆಗಳ ಹೆಜ್ಜೆಯನ್ನು ದಿವಂಗತ ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಗುರುತಿಸ ಬಹುದು. ಅರಸರು ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಉಚಿತ ಕಾರ್ಯಕ್ರಮಗಳನ್ನು ಪ್ರಕಟಿಸಿದ್ದರು. ಜನತಾ ಮನೆಗಳನ್ನು ಕೊಟ್ಟರು. ಅಂದಿನ ಇಂದಿರಾ ಕಾಂಗ್ರೆಸ್ಸಿನ ಗರೀಬಿ ಹಠಾವೋ ಎಂಬ ಸ್ಲೋಗನ್ನೇ ಫ್ರೀ ಬಿ ಎಂದು ವಿಶ್ಲೇಷಿಸುವ ಚಿಂತಕರೂ ಇದ್ದಾರೆ. ಇದು ಇಂದಿರಾಗಾಂಧಿ ಕಾಂಗ್ರೆಸಿಗೆ ಓಟ್‌ ಬ್ಯಾಂಕ್‌ ಆಗಿ ಪರಿವರ್ತನೆಯಾಗಿದ್ದನ್ನು ಅವರು ವಿವರಿಸುತ್ತಾರೆ.

ಅದು ವಿಧಾನಸಭೆಗೆ ನಡೆದ 1985ರ ಮಧ್ಯಾಂತರ ಚುನಾವಣೆ. ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು 1984ರ ಲೋಕಸಭಾ ಚುನಾವಣೆಯಲ್ಲಿ ಜನತಾಪಕ್ಷದ ಕಳಪೆ ಸಾಧನೆ ಯಿಂದಾಗಿ ಎರಡೇ ವರ್ಷದಲ್ಲಿ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಧಾರ ಕೈಗೊಂಡು ಮಧ್ಯಾಂತರ ಚುನಾವಣೆಗೆ ಹೋದರು. ಆಗ ನೆರೆಯ ಆಂಧ್ರ ಪ್ರದೇಶದಲ್ಲಿ ತೆಲುಗು ದೇಶಂನ ಎನ್‌.ಟಿ.ರಾಮರಾವ್‌ ಮುಖ್ಯಮಂತ್ರಿಯಾಗಿದ್ದರು. ಎನ್‌ಟಿಆರ್‌ ಜನಪ್ರಿಯ ಯೋಜನೆಗಳ ಸರದಾರರಾಗಿದ್ದರು. ಇದರಿಂದ ಪ್ರಭಾವಿತಗೊಂಡ ಜನತಾಪಕ್ಷವು ಚುನಾವಣ ಪ್ರಣಾಳಿಕೆಯಲ್ಲಿ ಜನಪ್ರಿಯ ಭರವಸೆ ನೀಡಿತು.

Advertisement

ಶಾಲಾ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕಗಳ ವಿತರಣೆ, ಪುರುಷರಿಗೆ ಪಂಚೆ, ಮಹಿಳೆಯರಿಗೆ ಸೀರೆ ವಿತರಣೆ, ಎರಡು ರೂಪಾಯಿಗೆ ಒಂದು ಕೆ.ಜಿ. ಆಕ್ಕಿ ವಿತರಿಸುವ ಕಾರ್ಯಕ್ರಮವನ್ನು ಜನತಾಪಕ್ಷ ಪ್ರಕಟಿಸಿತು. ಮೊದಲು ಬಿಡು ಗಡೆಯಾದ ಚುನಾವಣ ಪ್ರಣಾಳಿಕೆಯಲ್ಲಿ ಇವುಗಳು ಇರಲಿಲ್ಲ. ಅನಂತರ ವಿಶೇಷ ಪ್ರಣಾಳಿಕೆಯಲ್ಲಿ ಇವುಗಳನ್ನು ಪ್ರಕಟಿಸಲಾಯಿತು. ಜನತಾಪಕ್ಷ ಬಹುಮತ ಪಡೆದು ಮರಳಿ ಅಧಿಕಾರಕ್ಕೆ ಬಂದು ರಾಮಕೃಷ್ಣ ಹೆಗಡೆ ಮತ್ತೆ ಮುಖ್ಯಮಂತ್ರಿಯಾದರು. ಈ ಕಾರ್ಯಕ್ರಮಗಳನ್ನು ಜಾರಿಗೆ ತಂದಿತು.

ಉಚಿತವಾಗಿ ಅಕ್ಕಿಯನ್ನು ವಿತರಿಸುವ ಜನಪ್ರಿಯ ಯೋಜನೆಯ ಕಲ್ಪನೆ ನೆರೆಯ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಬಂದವು. ತಮಿಳುನಾಡಿನಲ್ಲಿ ಅಲ್ಲಿನ ರಾಜಕೀಯ ಪಕ್ಷವೊಂದು ಮನೆಮನೆಗೆ ಕಲರ್‌ ಟಿವಿ ನೀಡುವ ಕಾರ್ಯಕ್ರಮವನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದು ಹೆಚ್ಚು ಪ್ರಚಾರ ಪಡೆದಿತ್ತು.

ಬಂಗಾರಪ್ಪ ಅವರು ಮುಖ್ಯಮಂತ್ರಿಯಾ ಗಿ ದ್ದಾಗ ಶಾಲಾ ಮಕ್ಕಳು ತರಗತಿಗೆ ಹಾಜರಾದರೆ ಒಂದು ರೂಪಾಯಿ ನೀಡುವ ಕಾರ್ಯಕ್ರಮ ಜಾರಿಗೆ ತಂದಿದ್ದರು. ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ಹತ್ತು ಎಚ್‌ಪಿ ಮೋಟಾರ್‌ವರೆಗೂ ಉಚಿತ ವಿದ್ಯುತ್‌ ಪೂರೈಕೆ ನೀಡಿದ್ದರು. ಪಂಪ್‌ಸೆಟ್‌ಗಳಿಗೆ ಮೀಟರ್‌ ಇಲ್ಲದೇ ಉಚಿತ ವಿದ್ಯುತ್‌ ನೀಡಲಾಗಿತ್ತು.

ಜನತಾದಳ 1994ರಲ್ಲಿ ಅಧಿಕಾರಕ್ಕೆ ಬಂದಾಗ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿ ತ ವಾಗಿ ವಿದ್ಯುತ್‌ ಪೂರೈಸುವ ಕಾರ್ಯಕ್ರಮ ಜಾರಿಗೆ ತಂದಿತು. ಎಚ್‌.ಡಿ. ದೇವೇಗೌಡ ಅವರು ಪ್ರಧಾನಮಂತ್ರಿ ಯಾಗಿದ್ದಾಗ ರಸಗೊಬ್ಬರ ಗಳಿಗೆ ಸಬ್ಸಿಡಿ ನೀಡುವ ಕಾರ್ಯಕ್ರಮವನ್ನು ಘೋಷಿಸಿ ಜಾರಿಗೆ ತಂದರು. ಸಾಮಾನ್ಯವಾಗಿ ಅಧಿ ಕಾರಕ್ಕೆ ಬಂದ ಅನಂತರ ಜನಪ್ರಿಯ ಕಾರ್ಯಕ್ರಮ ಗಳನ್ನು ಘೋಷಿಸಿ ಜಾರಿಗೊಳಿಸಿದ್ದು ಹೆಚ್ಚು.

ಎಸ್‌.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ ಜಾರಿಗೆ ಬಂದ ಮಧ್ಯಾಹ್ನದ ಬಿಸಿಯೂ ಟವೂ ಒಂದು ರೀತಿ ಉಚಿತವೇ. ರೈತರ ಸಾಲಮನ್ನಾ ಕೂಡ ಒಂದು ರೀತಿ ಉಚಿತ ಕಾರ್ಯಕ್ರಮ ಎನ್ನುವವರು ಇದ್ದಾರೆ. ಉಚಿತ ಎನ್ನುವುದು ಬೇರೆ ಬೇರೆ ರೂಪಗಳಲ್ಲಿರುತ್ತವೆ. ಉದ್ಯಮಿ ಗಳಿಗೆ ತೆರಿಗೆ ವಿನಾಯಿತಿ, ರಿಯಾಯಿತಿ ನೀಡುವುದು ಒಂದು ರೀತಿ ಉಚಿತವೇ ಎಂಬುದು ಅವರ ವಾದ. ಅದು 2006ನೇ ಇಸವಿ. ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರಕಾರ. ಆಗ ಹಣಕಾಸು ಖಾತೆಯನ್ನೂ ಹೊತ್ತಿದ್ದ ಅಂದಿನ ಉಪ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶಾಲಾ ಹೆಣ್ಣು ಮಕ್ಕಳಿಗೆ ಉಚಿತವಾಗಿ ಸೈಕಲ್‌ ವಿತರಿಸುವ ಕಾರ್ಯಕ್ರಮವನ್ನು ಪ್ರಕಟಿಸಿದರು. ಸಿದ್ದರಾಮಯ್ಯ ಅವರು 2013ರಲ್ಲಿ ಸಿಎಂ ಆದ ಅನಂತರ ಭಾಗ್ಯಗಳ ಯೋಜನೆಗಳನ್ನು ಜಾರಿಗೆ ತಂದರು. ಅನ್ನಭಾಗ್ಯ, ಶಾದಿಭಾಗ್ಯ ಯೋಜನೆಯನ್ನು ಅನುಷ್ಠಾನಗೊಳಿಸಿದರು. ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದ ಸಾರಥ್ಯ ವಹಿಸಿದ್ದಾಗ ಎಚ್‌.ಡಿ.ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಯೋಜನೆಯನ್ನು ಪ್ರಕಟಿಸಿ ಜಾರಿಗೆ ತಂದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಅನಂತರ ಈಗ ಸಪ್ತಪದಿ ಎಂಬ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಉಚಿತವಾಗಿ ತಾಳಿ, ಸೀರೆ, ಪಂಚೆಯನ್ನು ವಿತರಿಸುತ್ತಿದೆ.

ಇಂದಿರಾ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದಾಗಲೇ ಉಚಿತ ಎಂಬುದು ಆರಂಭವಾಯಿತು. ಇಂದಿರಾ ಗಾಂಧಿ ಅವರ ಗರೀಬಿ ಹಠಾವೋ ಸ್ಲೋಗನ್ನೇ ಫ್ರೀ ಬೀ. ಇದು ಕಾಂಗ್ರೆಸಿಗೆ ಓಟ್‌ ಬ್ಯಾಂಕ್‌ ಆಗಿ ಪರಿವರ್ತನೆಯಾಯಿತು. ದೇಶದಲ್ಲಿ ಬಡವರ ಸಂಖ್ಯೆ ಅಧಿಕ. ಹೀಗಾಗಿ ಸರಕಾರಗಳು ಉಚಿತವಾಗಿ ನೀಡುವ ಪದ್ಧತಿ ಆರಂಭಿಸಿತು. ರೈತರ ಸಾಲ ಮನ್ನಾ ಕೂಡ ಒಂದು ರೀತಿ ಉಚಿತವೇ. ಉದ್ಯಮಿಗಳಿಗೆ ತೆರಿಗೆ ವಿನಾಯಿತಿ, ರಿಯಾ ಯಿತಿಯೂ ಉಚಿತದ ಮತ್ತೂಂದು ರೂಪ ಆದರೆ ಫ್ರೀ ಬೀಗಳು ಅಂತಹ ಪಕ್ಷವನ್ನು ಅಧಿಕಾರಕ್ಕೆ ತರುತ್ತದೆ ಎಂಬ ಗ್ಯಾರಂಟಿ ಏನೂ ಇಲ್ಲ.
– ಮುಜಾಫ‌ರ್‌ ಅಸ್ಸಾದಿ, ರಾಜಕೀಯ ಚಿಂತಕರು

– ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next