Advertisement

ಲಕ್ಷ್ಮೇಶ್ವರ: ಬಿಜೆಪಿಗೆ ಪ್ರತಿಷ್ಠೆ –ಕಾಂಗ್ರೆಸ್‌ಗೆ ಅಸ್ತಿತ್ವ ಪ್ರಶ್ನೆ

05:17 PM Oct 10, 2020 | sudhir |

ಲಕ್ಷ್ಮೇಶ್ವರ: ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪಟ್ಟಿ ಬಿಡುಗಡೆ ಆಗುತ್ತಿದ್ದಂತೇ ಅಧಿಕಾರದ
ಚುಕ್ಕಾಣಿಗಾಗಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಇಲ್ಲಿನ ಪುರಸಭೆಗೆ 2018ರ ಚುನಾವಣೆ ಫಲಿತಾಂಶ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಒಟ್ಟು 23 ಸದಸ್ಯರ ಬಲ ಹೊಂದಿರುವ ಪುರಸಭೆಗೆ 9-ಕಾಂಗ್ರೆಸ್‌, 7-ಬಿಜೆಪಿ, 2-ಜೆಡಿಎಸ್‌ ಮತ್ತು 5 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಪ್ರತಿಷ್ಠೆಯಾದರೆ,
ಕಾಂಗ್ರೆಸ್‌ಗೆ ಅಸ್ತಿತ್ವದ ಪ್ರಶ್ನೆಯಾಗಿದೆ. ಇಬ್ಬರಿಗೂ ಜೆಡಿಎಸ್‌ ಮತ್ತು ಪಕ್ಷೇತರರ ಬೆಂಬಲ ಅಗತ್ಯವಾಗಿದೆ.

Advertisement

ಕಾಂಗ್ರೆಸ್‌ ಬಲಾಬಲ: ಎರಡು ವರ್ಷದ ಹಿಂದೆ ಫಲಿತಾಂಶ ಪ್ರಕಟವಾದ ವೇಳೆ ಸಮ್ಮಿಶ್ರ ಸರ್ಕಾರ ಇದ್ದರಿಂದ ಇಬ್ಬರು ಜೆಡಿಎಸ್‌ ಸದಸ್ಯರು ಮತ್ತು 2 ಪಕ್ಷೇತರ ಸದಸ್ಯರ ಬಲದಿಂದ ಕಾಂಗ್ರೆಸ್‌ ಪಕ್ಷ 13 ಸ್ಥಾನಗಳಿಂದ ಬಹುಮತ ಸ್ಪಷ್ಟಪಡಿಸಲು ಸಿದ್ಧವಾಗಿತ್ತು. ಈಗಲೂ ಜೆಡಿಎಸ್‌ ಮತ್ತು ಪಕ್ಷೇತರರ ನಿಲುವು ಬದಲಾಗದಿದ್ದರೆ ಮಾತ್ರ ಕಾಂಗ್ರೆಸ್‌ ಆಸೆ ಜೀವಂತ. ಅಧ್ಯಕ್ಷ ಸ್ಥಾನಕ್ಕೆ ಜಯಕ್ಕ
ಕಳ್ಳಿ, ಜಯವ್ವ ಅಂದಲಗಿ ಹೆಸರು ಕೇಳಿ ಬರುತ್ತಿವೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದ ದಂಧೆ: ನಾಲ್ವರ ಬಂಧನ

ಬಿಜೆಪಿಗೇನು ಬಲ?: ರಾಜ್ಯ, ಕೇಂದ್ರ, ಜಿಲ್ಲೆ, ತಾಲೂಕಿನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಬಹುಮತ ಇಲ್ಲದಿದ್ದರೂ ಪಕ್ಷೇತರ, ಜೆಡಿಎಸ್‌ ಸದಸ್ಯರ ಬೆಂಬಲ ಪಡೆದು ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇ ಬೇಕು ಎಂದು ತಂತ್ರ ರೂಪಿಸುತ್ತಿದೆ. ಬಿಜೆಪಿ ಏಳು ಸದಸ್ಯರ ಬಳಗಕ್ಕೆ ಇಬ್ಬರು ಪಕ್ಷೇತರರ ಬೆಂಬಲವಿದೆ. ತಮ್ಮ ಬೆಂಬಲ ಯಾರಿಗೆ ಎಂಬುದನ್ನು ಸ್ಪಷ್ಟಪಡಿಸದ
ಓರ್ವ ಪಕ್ಷೇತರ ಸದಸ್ಯ ಮತ್ತು ಈಗ ಸಮ್ಮಿಶ್ರ ಸರ್ಕಾರ ಇಲ್ಲದಿದ್ದರಿಂದ ಇಬ್ಬರು ಜೆಡಿಎಸ್‌ ಸದಸ್ಯರನ್ನು ಸೆಳೆಯುವ ತಂತ್ರ ನಡೆಸಿದ್ದಾರೆ. ಅಲ್ಲದೇ ಸಂಸದ, ಶಾಸಕ ಬೆಂಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿಯುವ ಆತ್ಮ ವಿಶ್ವಾಸ ಬಿಜೆಪಿಯದ್ದಾಗಿದೆ.
ಆದರೆ ಭಿನ್ನಾಭಿಪ್ರಾಯ ಬಿಟ್ಟು ಪಕ್ಷದ ತೀರ್ಮಾನಕ್ಕೆ ಎಲ್ಲ ಸದಸ್ಯರು ಬದ್ಧರಾಗಿರಬೇಕಾಗುತ್ತದೆ. ಬಿಜೆಪಿಯಲ್ಲಿ 7 ಜನ ಮಹಿಳಾ ಸದಸ್ಯರಿದ್ದು, ಪೂರ್ಣಿಮಾ ಪಾಟೀಲ, ಅಶ್ವಿ‌ನಿ ಅಂಕಲಕೋಟಿ ಹೆಸರುಗಳು ಮುಂಚೂಣಿಯಲ್ಲಿವೆ.

ಜೆಡಿಎಸ್‌ ನಡೆ ನಿಗೂಢ: ಓರ್ವ ಪಕ್ಷೇತರ ಮತ್ತು ಇಬ್ಬರು ಜೆಡಿಎಸ್‌ ಸದಸ್ಯರ ನಡೆ ನಿಗೂಢವಾಗಿದೆ. ಆದರೆ ನಡೆಯುತ್ತಿರುವ ಬೆಳವಣಿಗೆ ಮತ್ತು ಚುನಾವಣೆ ಪ್ರಕ್ರಿಯೆಯ ಕೊನೆ ಘಳಿಗೆಯಲ್ಲಿ ಜೆಡಿಎಸ್‌ ಮತ್ತು ಪಕ್ಷೇತರರು ಕೈಗೆ ಜೈ ಎನ್ನುತ್ತಾರೋ?
ಕಮಲ ಅರಳಿಸುತ್ತಾರೋ ಎಂಬ ಕುತೂಹಲದ ಪ್ರಶ್ನೆಯ ಉತ್ತರಕ್ಕಾಗಿ ಕಾಯಬೇಕಿದೆ.

Advertisement

ಇದನ್ನೂ ಓದಿ:ಮೊಳಕಾಲ್ಮೂರು: ಸಿಡಿಲು ಬಡಿದು‌ ಕುರಿಗಾಯಿ ಸಾವು

ಹೊಂದಾಣಿಕೆ ರಾಜಕಾರಣವಾದರೂ ಅಚ್ಚರಿಯಿಲ್ಲ: ಆದರೆ ಎಲ್ಲ ಲೆಕ್ಕಾಚಾರ, ರಾಜ್ಯದ ರಾಜಕಾರಣದ ಪರಿಸ್ಥಿತಿ ಮೀರಿ
ಕಳೆದ ಅವಧಿಯಂತೆ ಪುರಸಭೆಯಲ್ಲಿ ರಾಜಕೀಯ ಕಿತ್ತಾಟ ಬೇಡ, ಪಟ್ಟಣದ ಅಭಿವೃದ್ಧಿ ಮುಖ್ಯ ಎಂಬ ತೀರ್ಮಾನಕ್ಕೆ
ಮೂರೂ ಪಕ್ಷದ ನಾಯಕರು, ಮುಖಂಡರು ಬಂದರೆ ಈ ಹಿಂದಿನಂತೆ (ಸಮಬಾಳು – ಸಮಪಾಲು) ಲಕ್ಷ್ಮೇಶ್ವರ ಪುರಸಭೆಯಲ್ಲಿ ಹೊಂದಾಣಿಕೆ ಮೂಲಕ ಆಡಳಿತ ಮಂಡಳಿ ರಚನೆಯಾದರೂ ಅಚ್ಚರಿಪಡಬೇಕಿಲ್ಲ. ಈ ಹಿಂದೆ ಎರಡೂ ಪಕ್ಷಕ್ಕೂ ಅಧಿಕಾರ
ನಡೆಸುವ ಅವಕಾಶವಿದ್ದಾಗಲೂ ಸ್ಥಳೀಯ ಪ್ರಮುಖ ಪಕ್ಷದ ಮುಖಂಡರು, ಹಿರಿಯರು, ಸದಸ್ಯರು ಲಕ್ಷ್ಮೇಶ್ವರದ ಹಿತಾಭಿವೃದ್ಧಿ ಸಮಿತಿ ರಚಿಸಿ ಹೊಂದಾಣಿಕೆಯ ರಾಜಕಾರಣಕ್ಕೆ ಅಂಕಿತ ಹಾಕಿದ್ದುಂಟು.

Advertisement

Udayavani is now on Telegram. Click here to join our channel and stay updated with the latest news.

Next