Advertisement

ಉಪ ಚುನಾವಣೆ: 17 ಅಭ್ಯರ್ಥಿಗಳು ಕಣದಲ್ಲಿ

03:45 AM Mar 25, 2017 | |

ಗುಂಡ್ಲುಪೇಟೆ/ಮೈಸೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನಾಮಪತ್ರ ವಾಪಸ್‌ ಪಡೆಯಲು ಶುಕ್ರವಾರ ಕೊನೆಯ ದಿನವಾಗಿದ್ದು, ಒಟ್ಟು ಮೂವರು ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದಿದ್ದಾರೆ. ಇದರಿಂದಾಗಿ ಉಭಯ ಕ್ಷೇತ್ರಗಳಲ್ಲಿ ಒಟ್ಟು 17 ಅಭ್ಯರ್ಥಿಗಳು ಕಣದಲ್ಲಿ ಉಳಿದಂತಾಗಿದೆ.

Advertisement

ನಂಜನಗೂಡಿನಲ್ಲಿ ಪಕ್ಷೇತರರಾಗಿ ಉಮೇದುವಾರಿಕೆ ಸಲ್ಲಿಸಿದ್ದ ಮಲ್ಲಣ್ಣ ಎಸ್‌.ನಾಮಪತ್ರ ವಾಪಸ್‌ ಪಡೆದಿದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ(ಹಸ್ತ), ಬಿಜೆಪಿಯ ವಿ.ಶ್ರೀನಿವಾಸಪ್ರಸಾದ್‌ (ಕಮಲ), ಕರುನಾಡು ಪಕ್ಷದ ಎಂ.ಪ್ರದೀಪ್‌ ಕುಮಾರ್‌(ಬ್ಯಾಟುಗಾರ) ಪಕ್ಷೇತರರಾದ ಆನಂದ ಜಿ.(ಮೇಣದಬತ್ತಿಗಳು), ಡಿ.ಈಶ್ವರ್‌ ಸ್ವಾಭಿಮಾನಿ (ಹೊಲಿಗೆಯಂತ್ರ), ಗುರುಲಿಂಗಯ್ಯ (ತೆಂಗಿನಕಾಯಿ), ಡಿ.ಕೆ.ತುಳಸಪ್ಪ (ಹೆಲ್ಮೆಟ್‌), ಆರ್‌.ಪ್ರಸನ್ನ ಗೋಳೂರು (ಆಟೋ ರಿûಾ), ಬಿ.ಎಸ್‌.ಮಹದೇವಸ್ವಾಮಿ (ಗ್ಯಾಸ್‌ ಸ್ಟೌ), ಸುಬ್ಬಯ್ಯ (ಗ್ಯಾಸ್‌ ಸಿಲಿಂಡರ್‌) ಹಾಗೂ ಎಚ್‌.ಪಿ.ಶೇಷಣ್ಣ (ಐಸ್‌ ಕ್ರೀಂ) ಕಣದಲ್ಲಿ ಉಳಿದಂತಾಗಿದೆ.

ಗುಂಡ್ಲುಪೇಟೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ಪಿ.ಎಸ್‌.ಯಡಿಯೂರಪ್ಪ ಮತ್ತು ಶೇಖರ್‌ರಾಜ್‌ ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಅಂತಿಮವಾಗಿ ಕಾಂಗ್ರೆಸ್‌ನ ಡಾ.ಗೀತಾ ಮಹದೇವಪ್ರಸಾದ್‌, ಬಿಜೆಪಿಯ ಸಿ.ಎಸ್‌.ನಿರಂಜನಕುಮಾರ್‌, ಭಾರತೀಯ ಡಾ.ಬಿ.ಆರ್‌.ಅಂಬೇಡ್ಕರ್‌ ಜನತಾಪಾರ್ಟಿಯ ಹೊನ್ನೂರಯ್ಯ, ರಿಪಬ್ಲಿಕನ್‌ ಪಾರ್ಟಿಯ ಶಿವರಾಜು, ಪಕ್ಷೇತರರಾದ ಸೋಮಶೇಖರ್‌, ಮಹದೇವಪ್ರಸಾದ್‌ ಕಣದಲ್ಲಿ ಉಳಿದಿದ್ದಾರೆ.

ಬಿಜೆಪಿ ವಿರುದ್ಧ ಪ್ರಕರಣ ದಾಖಲು
ಚಾಮರಾಜನಗರ:
ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

ಬುಧವಾರದಂದು ಪ್ರಚಾರಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ 100 ರಿಂದ 150 ಕಾರ್ಯಕರ್ತರೊಡನೆ ಗುಂಡ್ಲುಪೇಟೆ ಜಾಕೀರ್‌ ಹುಸೇನ್‌ ಬಡಾವಣೆಯಿಂದ ಮಹದೇವಪ್ರಸಾದ್‌ ನಗರದವರೆಗೆ ತೆರಳಲು ಅನುಮತಿ ನೀಡಲಾಗಿತ್ತು. ಆದರೆ, ಅನುಮತಿ ಪಡೆದಿರುವ ಸಂಖ್ಯೆಗಿಂತ ಹೆಚ್ಚಿನ ಕಾರ್ಯಕರ್ತರು ಈ ವೇಳೆ ಪಾಲ್ಗೊಂಡಿದ್ದರು. ಜೊತೆಗೆ, ಅನುಮತಿಯಿಲ್ಲದೆ ವಾಹನಕ್ಕೆ ಧ್ವನಿವರ್ಧಕ ಅಳವಡಿಸಿಕೊಂಡು ಮತಯಾಚಿಸಿದ್ದರು. ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ನಲಿನ್‌ ಅತುಲ್‌ ತಿಳಿಸಿದ್ದಾರೆ. ಈ ಮಧ್ಯೆ, ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿರುವ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಲಾದ 1.7 ಲೀಟರ್‌ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next