ಬೆಂಗಳೂರು: ದಿಲ್ಲಿಯಲ್ಲಿ ರಸ್ತೆ ಅಪಘಾತ ಎಸಗಿ ಮಹಿಳೆಯನ್ನು ಸುಮಾರು ಒಂದು ಗಂಟೆಗಳ ಕಾಲ ಎಳೆದೊಯ್ದು ಆಕೆ, ಸಾವಿಗೀಡಾದ ಆಘಾತಕಾರಿ ಘಟನೆ ಮಾಸುವ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಂತಹದೇ ಕ್ರೂರ ಘಟನೆ ನಡೆದಿದೆ.
ಮಾಗಡಿ ರಸ್ತೆಯ ಟೋಲ್ ಬಳಿ ಅಪಘಾತ ಎಸಗಿದ್ದನ್ನು ಪ್ರಶ್ನಿಸಿದ ಬೊಲೆರೊ ವಾಹನ ಚಾಲಕನನ್ನು ಸುಮಾರು ಒಂದು ಕಿ.ಮೀ. ದೂರದವರೆಗೆ ದ್ವಿಚಕ್ರ ವಾಹನ ಸವಾರ ಎಳೆದೊಯ್ದಿರುವ ಅಮಾನವೀಯ ಘಟನೆ ನಡೆದಿದೆ.
ದುರ್ಘಟನೆಯಲ್ಲಿ ಹೆಗ್ಗನಹಳ್ಳಿ ನಿವಾಸಿ, ಬೊಲೆರೊ ವಾಹನ ಚಾಲಕ ಮುತ್ತಪ್ಪ ಶಿವಯೋಗಿ ತೋಂಟಾಪುರ್(71) ಗಾಯಗೊಂಡಿದ್ದಾರೆ. ಈ ಭೀಕರ ಕೃತ್ಯ ಎಸಗಿದ ನಾಯಂಡಹಳ್ಳಿ ನಿವಾಸಿ, ದ್ವಿಚಕ್ರ ವಾಹನ ಸವಾರ ಶಾಹಿಲ್ (25)ನನ್ನು ಬಂಧಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಮುತ್ತಪ್ಪ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುತ್ತಪ್ಪ ಪ್ರಾಣಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಉತ್ತರ ಕರ್ನಾಟಕ ಮೂಲದ ಮುತ್ತಪ್ಪ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಬೊಲೆರೊದಲ್ಲಿ ವೆಸ್ಟ್ ಆಫ್ ಕಾರ್ಡ್ ರಸ್ತೆ ಮೂಲಕ ಮಾಗಡಿ ರಸ್ತೆ ಟೋಲ್ ಗೇಟ್ ಅಂಡರ್ ಬ್ರಿಡ್ಜ್ ಬಳಿ ಹೋಗುತ್ತಿದ್ದರು. ಆಗ ವೇಳೆ ಫೋನ್ ಬಂದಿದ್ದು, ವಾಹನವನ್ನು ಪಕ್ಕಕ್ಕೆ ನಿಲ್ಲಿಸಿದ್ದಾರೆ. ಅದೇ ವೇಳೆ ಅತೀವೇಗವಾಗಿ ಬಂದ ಶಾಹಿಲ್ ಹಿಂದಿನಿಂದ ಬೊಲೆರೊ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾನೆ. ಬಳಿಕ ಏಕಾಏಕಿ ಪರಾರಿಯಾಗಲು ಯತ್ನಿಸಿದ್ದ. ಆಗ ಮುತ್ತಪ್ಪ ಆತನ ಬೈಕ್‌ನ ಹಿಂಬದಿ ಹಿಡಿದುಕೊಂಡು ನಿಲ್ಲಿಸುವಂತೆ ಕೋರಿದ್ದಾರೆ. ಆದರೆ, ಆರೋಪಿ ಅಮಾನವೀಯವಾಗಿ ನಡೆದುಕೊಂಡು ಎಳೆದೊಯ್ದಿದ್ದಾನೆ.
Related Articles
ಮಾಗಡಿ ರಸ್ತೆ ಟೋಲ್‌ಗೇಟ್‌ನಿಂದ ಹೊಸಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಎಳೆದೊಯ್ದಿದ್ದಾನೆ. ಸಾರ್ವಜನಿಕರೊಬ್ಬರು ಈ ಅಮಾನವೀಯ ದೃಶ್ಯ ಸೆರೆ ಹಿಡಿದು ನಿಲ್ಲಿಸುವಂತೆ ಹೇಳಿದರೂ ಅವರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ. ಅನಂತರ ಸ್ಥಳೀಯರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಲ್ಲಿ ಮುತ್ತಪ್ಪರ ಎರಡು ಕಾಲುಗಳು, ಮೊಣಕಾಲು ಮಂಡಿಗಳು, ಸೊಂಟದ ಮೇಲೆ ಹಾಗೂ ಇತರೆಡೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದರು.
ಆರೋಪಿ ಶಾಹೀಲ್
ವಿರುದ್ಧ 2 ಕೇಸ್ ದಾಖಲು
ಆರೋಪಿ ಶಾಹಿಲ್ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಜಯ ನಗರ ಸಂಚಾರ ಠಾಣೆ ಮತ್ತು ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.