Advertisement

ಬಳವಡಗಿ ಏಲಾಂಬಿಕೆಗೆ ಉಧೋ..ಉಧೋ..

05:17 PM Dec 26, 2020 | Adarsha |

ವಾಡಿ: ಮಹಾಮಾರಿ ಕೋವಿಡ್ ಸಾಂಕ್ರಾಮಿಕ ರೋಗ ಹರಡುವ ಭೀತಿ ನಡುವೆಯೂ ಬಳವಡಗಿ ಗ್ರಾಮದ ಶ್ರೀ ಏಲಾಂಬಿಕೆ (ಯಲ್ಲಮ್ಮ) ದೇವಿ ಜಾತ್ರೆ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

Advertisement

ಡಿ.30ರ ಹುಣ್ಣಿಮೆಯಂದು ನಡೆಯಬೇಕಿದ್ದ ಜಾತ್ರೆ ತಾಲೂಕು ಆಡಳಿತ ವಿಧಿ ಸಿದ ಕಾನೂನು ಗೌರವಿಸಿ ಐದು ದಿನ ಮುಂಚಿತವಾಗಿಯೇ ನಡೆಯಿತು. ಭಕ್ತರು ಸಾಂಪ್ರದಾಯಿಕವಾಗಿ ದೇವಿಗೆ ಹಡ್ಡಲಗಿ ತುಂಬಿ, ಭಕ್ತಿ ಸಮರ್ಪಿಸಿದರು. ಅಸಂಖ್ಯಾತ ಭಕ್ತರನ್ನು ಹೊಂದಿರುವ ಬಳವಡಗಿ ಏಲಾಂಬಿಕೆ ದೇವಿ ಹಾಗೂ ಕೊಂಚೂರು ಶ್ರೀ ಹನುಮಾನ ದೇವರ ರಥೋತ್ಸವ ಪ್ರತಿ ವರ್ಷ ಏಕಕಾಲಕ್ಕೆ ನಡೆಯುತ್ತದೆ. ಪ್ರಸಕ್ತ ವರ್ಷ ಡಿ.30ರಂದು ಕೊಂಚೂರ ಹನುಮಾನ ರಥೋತ್ಸವ-ಬಳವಡಗಿ ಯಲ್ಲಮ್ಮನ ಜಾತ್ರೆ ನಿಗದಿಯಾಗಿತ್ತು.

ಕೋವಿಡ್ ನಿಯಮಗಳಡಿ ತಹಶೀಲ್ದಾರ್‌ ಉಮಾಕಾಂತ ಹಳ್ಳೆ ಜಾತ್ರೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದರು. ಪರಿಣಾಮ ಸಂದೇಶ ಅರಿತ ವಿವಿಧ  ತಾಲೂಕುಗಳ ಭಕ್ತರು, ಶುಕ್ರವಾರವೇ ದೇವಸ್ಥಾನಕ್ಕೆ ಬಂದು ಹಡ್ಡಲಗಿ ತುಂಬಿದರು.

ಡಿ.30ರಂದು ಜಾತ್ರೆಗೆ ಬರಲು ಪೊಲೀಸರು ಅವಕಾಶ ನೀಡುವುದಿಲ್ಲ ಎನ್ನುವ ಕಾರಣಕ್ಕೆ ಭಕ್ತರು ಐದು ದಿನ ಮೊದಲೇ ಬಳವಡಗಿಗೆ ಆಗಮಿಸಿ ಜಾತ್ರೆಯ ವಾತಾವರಣ ನಿರ್ಮಿಸಿದರು. ಪೊಲೀಸ್‌ ಬಂದೋಬಸ್ತ್ ಇಲ್ಲದ ಸಂದರ್ಭ ಬಳಸಿಕೊಂಡ ಭಕ್ತರು, ಯಲ್ಲಮ್ಮ ದೇವಸ್ಥಾನ ಸುತ್ತಲೂ ಪ್ರದಕ್ಷಿಣೆ ಹಾಕಿ ಉಧೋ..ಉಧೋ.. ಘೋಷವಾಕ್ಯ ಮೊಳಗಿಸಿದರು.

ಇದನ್ನೂ ಓದಿ:ಬೆಲೆ ಏರಿಕೆ: ರಸ್ತೆಯಲ್ಲಿ ಒಲೆ ಹಚ್ಚಿ ಆಕ್ರೋಶ

Advertisement

ಜಾತ್ರೆ ಆವರಣದಲ್ಲಿ ದೇವದಾಸಿಯರ ತಂಡವೇ ನೆರೆದಿತ್ತು. ದೇವಸ್ಥಾನ ಪ್ರವೇಶಿಸುವವರ ಹಣೆಗೆ ಭಂಡಾರ ಹಚ್ಚುವವರೂ ಇದ್ದರು. ಮಹಿಳೆಯರ ಅರೆಬೆತ್ತಲೆ ಸೇವೆ ಮುಂದುವರಿದಿತ್ತು. ಮಕ್ಕಳು ದೀಡ್‌ ನಮಸ್ಕಾರ ಹಾಕುತ್ತಿದ್ದರು. ರೊಟ್ಟಿ, ಹೋಳಿಗೆ, ಜೋಳದ ಕಡಬು, ಹೂರಣ ಕಡಬು,  ತರಕಾರಿ ದಿನಿಸು, ಕಾಳು ಪಲ್ಲೆ, ಜೋಳದ ಬಾನ, ಅನ್ನ ಸೇರಿದಂತೆ ವಿವಿಧ ಪದಾರ್ಥಗಳನ್ನು ಹಡ್ಡಲಗಿ ರೂಪದಲ್ಲಿ ದೇವಿಗೆ ನೈವೇದ್ಯ ಅರ್ಪಿಸಿದರು.

ಒಟ್ಟಾರೆ ಕೋವಿಡ್ ಸಂಕಷ್ಟದ ಕಾರಣಕ್ಕೆ ತಾಲೂಕು ಆಡಳಿತ ಹೊರಡಿಸಿದ್ದ ಜಾತ್ರೆ ರದ್ದು ಆದೇಶ ಕಡೆಗಣಿಸಿ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದರು. ವಿಶೇಷವೆಂದರೆ ಡಿ.30 ರಂದು ಸರಕಾರ ಜಾತ್ರೆ ನಡೆಸಲು ಅವಕಾಶ ನೀಡುವುದಿಲ್ಲ. ಶುಕ್ರವಾರವೇ ಹಡ್ಡಲಗಿ ತುಂಬಬೇಕು ಎಂದು ಗ್ರಾಮದಲ್ಲಿ ಡಂಗೂರ ಸಾರಲಾಗಿತ್ತು ಎನ್ನಲಾಗಿತ್ತು. ಸುದ್ದಿ ಒಬ್ಬರಿಂದ ಒಬ್ಬರಿಗೆ ಹಬ್ಬಿ ಭಕ್ತರು ಅಪಾರ ಸಂಖ್ಯೆಯಲ್ಲಿ ನೆರೆದು ಜಾತ್ರೆಯ ವಾತಾವರಣ ಸೃಷ್ಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next