ಮಂಡ್ಯ: ಹಿಂದಿನ ಸರ್ಕಾರಗಳ ನಿರಾಸಕ್ತಿಯಿಂದ ಎಲೆಚಾಕನಹಳ್ಳಿ ಏತ ನೀರಾವರಿ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ಜಯಪ್ರಕಾಶ್ ನಾರಾಯಣ್ ತೋಟದ ಬೆಳೆಗಾರರ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿ, ತೂಬಿನಕೆರೆ ವ್ಯಾಪ್ತಿಯ ಕೆರೆಗಳನ್ನು ತುಂಬಿಸಿ ನೀರಿನ ಕೊರತೆ ನೀಗಿಸುವ ಉದ್ದೇಶದಿಂದ ನಾನು ಜಲಸಂಪನ್ಮೂಲ ಸಚಿವನಾಗಿದ್ದ ವೇಳೆ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೆ. ನಂತರದ ಸರ್ಕಾರಗಳು ಯೋಜನೆ ಜಾರಿಗೆ ಮುತುವರ್ಜಿ ವಹಿಸಿದ್ದರೆ ಈ ವೇಳೆಗೆ ಪೂರ್ಣಗೊಳ್ಳುತ್ತಿತ್ತು. ಯಾರೂ ಸಹ ಯೋಜನೆಗೆ ಆಸಕ್ತಿ ವಹಿಸದೆ ಅಂತಿಮ ಹಂತದಲ್ಲಿ ಯೋಜನೆ ಸ್ಥಗಿತಗೊಂಡಿದೆ ಎಂದು ಹೇಳಿದರು.
ಕ್ರಮದ ಭರವಸೆ: ಯೋಜನೆ ಪೂರ್ಣಕ್ಕೆ ಅರಣ್ಯ ಇಲಾಖೆ ಜಾಗದಿಂದ ತೊಡಕಾಗಿದೆ ಎಂಬ ಮಾಹಿತಿ ಇದೆ. ಕೂಡಲೇ ಇದರ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ದೊಕರಿಸುವ ಜತೆಗೆ ಯೋಜನೆ ಪೂರ್ಣಕ್ಕೆ ಕ್ರಮ ವಹಿಸುವ ಭರವಸೆ ನೀಡಿದರು. ಸಹಕಾರ ಇಲಾಖೆ ನನಗೆ ತಾತ್ಕಾಲಿಕವಾಗಿ ದೊರಕಿದೆ. ತೂಬಿನಕೆರೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸ್ಥಾಪನೆಗೆ ಬೇಡಿಕೆ ಬಂದಿದ್ದು, ನನ್ನ ಅಕಾರದೊಳಗೆ ರೈತರಿಗೆ ಅನುಕೂಲ ಮಾಡಿಕೊಡುವುದಾಗಿ ಆಶ್ವಾಸನೆ ನೀಡಿದರು.
ಆರ್ಥಿಕ ಭದ್ರತೆ: ಸಹಕಾರ ಇಲಾಖೆ ರೈತರ ಆರ್ಥಿಕತೆಯ ಬೆನ್ನೆಲುಬಾಗಿದೆ. ಆದರೆ, ಸಹಕಾರ ರಂಗದ ಬೆಳವಣಿಗೆಯಲ್ಲಿ ನಾವು ಬಹಳ ಹಿಂದುಳಿದಿದ್ದೇವೆ. ರೈತರ ನೆರವಿಗೆ ಸಹಕಾರ ಕ್ಷೇತ್ರ ನಿಲ್ಲುವಂತೆ ಶಕ್ತಿ ತುಂಬುವ ಅಗತ್ಯವಿದೆ. ಸಹಕಾರ ಕ್ಷೇತ್ರದ ಕಾನೂನುಗಳಲ್ಲಿ ಬದಲಾವಣೆ ತಂದು ಆರ್ಥಿಕ ಭದ್ರತೆ ಒದಗಿಸುವ ಮೂಲಕ ಸಹಕಾರ ರಂಗವನ್ನು ಬಲಪಡಿಸಬೇಕು ಎಂದರು.
ಮಂಡ್ಯದ ಮೈಸೂರು ಸಕ್ಕರೆ ಕಾರ್ಖಾನೆ, ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ಹೊಸ ಕಾಯಕಲ್ಪ ನೀಡುವ ಅಗತ್ಯವಿದೆ. ಎರಡೂ ಕಾರ್ಖಾನೆಗಳನ್ನು ಆರಂಭಿಸುವ ವಿಚಾರವಾಗಿ ಈಗಾಗಲೇ ಸಿಎಂ ಜತೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಕಾರ್ಖಾನೆಗಳನ್ನು ಸುಸ್ಥಿತಿಗೆ ತಂದು ಕಬ್ಬು ಅರೆಯಲು ವ್ಯವಸ್ಥೆ ಮಾಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿದರು.
ನಾಲೆಗಳ ಅಭಿವೃದ್ಧಿ: ಹಿಂದೆ ನೀರಾವರಿ ಸಚಿವನಾಗಿದ್ದ ಸಮಯದಲ್ಲಿ ಕೃಷ್ಣರಾಜಸಾಗರ ಜಲಾಶಯದಲ್ಲಿ 16 ಗೇಟ್‌ಗಳು ಶಿಥಿಲಗೊಂಡು 300 ಕ್ಯೂಸೆಕ್‌ನಷ್ಟು ನೀರು ವ್ಯರ್ಥವಾಗಿ ಹರಿದುಹೋಗುತ್ತಿತ್ತು. ಅವುಗಳನ್ನು ಬದಲಾಯಿಸಿ ಹೊಸ ಗೇಟ್‌ಗಳನ್ನು ಅಳವಡಿಸುವ ಮೂಲಕ ಮುಂದಿನ 50 ವರ್ಷಗಳವರೆಗೆ ಸುಭದ್ರತೆ ಒದಗಿಸಿದೆ. ಆ ಸಮಯದಲ್ಲಿ ರಾಜ್ಯದ 14 ಅಣೆಕಟ್ಟುಗಳ ಪೈಕಿ 11 ಅಣೆಕಟ್ಟುಗಳ ಅಚ್ಚುಕಟ್ಟು ನಾಲೆಗಳ ಆಧುನೀಕರಣ ಮಾಡಿಸಿ ರೈತರಿಗೆ ಅನುಕೂಲ ಮಾಡಿರುವುದಾಗಿ ಹೇಳಿದರು.
ಎಲೆಚಾಕನಹಳ್ಳಿ ಬಸವರಾಜು, ತಾಪಂ ಮಾಜಿ ಅಧ್ಯಕ್ಷೆ ಕೆ.ಹೇಮಲತಾ, ಸಿ.ತ್ಯಾಗರಾಜು, ತೂಬಿನಕೆರೆ ಗ್ರಾಪಂ ಅಧ್ಯಕ್ಷ ಅಶೋಕ್ ಪಟೇಲ್, ಮುಖಂಡರಾದ ವೈ.ಬಿ.ಬಸವರಾಜು, ಶಶಿಧರ್, ಪಟೇಲ್ ಶಂಕರ್, ಯೋಗೇಶ್, ಕೆ.ಎಂ.ನಾಗರಾಜು, ಕೌಡ್ಲೆ ಚನ್ನಪ್ಪ ಇದ್ದರು.