Advertisement

ಕಷ್ಟಗಳನ್ನೇ ಬಾಳಿದಾಕೆ, ಚಿನ್ನ ಗೆದ್ದು ಬೀಗಿದಳು!

11:42 PM May 14, 2022 | Team Udayavani |

ಈಕೆಯ ಹೆಸರು ಏಕ್ತಾ ಕಪೂರ್‌. ಈ ಹೆಣ್ಣುಮಗಳನ್ನು ಸೋಲುಗಳು, ದುರದೃಷ್ಟ, ಅವಮಾನ, ಚುಚ್ಚುಮಾತುಗಳು ಹೆಜ್ಜೆ ಹೆಜ್ಜೆಗೂ ಕಾಡಿದವು. ಡಿಪ್ರಶನ್‌ಗೆ ತುತ್ತಾದ ಈಕೆ ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದರು. ಅನಂತರದಲ್ಲಿ ಈಕೆ ವಿಧಿಯ ವಿರುದ್ಧ, ಸೋಲುಗಳ ವಿರುದ್ಧ, ತನ್ನನ್ನು ಆಡಿಕೊಂಡವರ ವಿರುದ್ಧ ತಿರುಗಿಬಿದ್ದು ಗೆಲುವನ್ನು ಬೇಟೆಯಾಡಿದ ರೀತಿಯಿದೆಯಲ್ಲ; ಅದು ಹಲವರಿಗೆ ಪಾಠವಾಗಬಲ್ಲದು. ಆಕೆಯ ಮನದ ಮಾತುಗಳು ಇಲ್ಲಿವೆ. ಓದಿಕೊಳ್ಳಿ

Advertisement

“ನಮ್ಮದು ಮಿಡ್ಲ್ ಕ್ಲಾಸ್‌ ಫ್ಯಾಮಿಲಿ. ಉತ್ತರಾಖಂಡ ರಾಜ್ಯದ ನೈನಿತಾಲ್‌ ನನ್ನ ಹುಟ್ಟೂರು. ಹುಟ್ಟಿದ್ದು ಹೆಣ್ಣುಮಗು ಎಂದು ಗೊತ್ತಾದ ತತ್‌ಕ್ಷಣ ಮುಖ ಸಿಂಡರಿಸಿಕೊಂಡು- “ಹೆಣ್ಣಾ? ನನಗದು ಬೇಡ. ಯಾರಿಗಾದ್ರೂ ದತ್ತು ಕೊಟ್ಟು ಬಿಡೋಣ’ ಅಂದುಬಿಟ್ಟಳಂತೆ ಅಮ್ಮ. ತತ್‌ಕ್ಷಣವೇ- “ಛೆ ಛೆ, ಎಂಥಾ ಮಾತಾಡ್ತೀಯ? ನಮ್ಮ ಮಗೂನ ಬೇರೆಯವರಿಗೆ ಕೊಡುವುದಾ? ಸಾಧ್ಯವೇ ಇಲ್ಲ’ ಅಂದರಂತೆ ಅಪ್ಪ. ಆಮೇಲೆ ಏನಾಯಿತೆಂದರೆ- ಅಪ್ಪನನ್ನೂ, ನನ್ನನ್ನೂ ಬಿಟ್ಟು ಅಮ್ಮ ಡೈವೊರ್ಸ್‌ ತಗೊಂಡು ಹೋಗಿಯೇ ಬಿಟ್ಟಳು! ನಾನಾಗ ಕೇವಲ 15 ದಿನದ ಕೂಸು ಆಗಿದ್ದೆನಂತೆ! ಹೆತ್ತ ತಾಯಿಯೇ ನನ್ನನ್ನು ತಿರಸ್ಕರಿಸಿ ಹೋದ ಮೇಲೆ, ಮಗಳು ನಮ್ಮ ಪಾಲಿನ ದೇವರು ಅನ್ನುತ್ತಿದ್ದ ಅಪ್ಪ. ಅಮ್ಮನ ಪಾತ್ರವನ್ನೂ ನಿಭಾಯಿಸುತ್ತಾ ನನ್ನನ್ನು ಸಾಕುತ್ತಿದ್ದರು. ನೈನಿತಾಲ್‌ನಲ್ಲಿರುವ ಬಿರ್ಲಾ ವಿದ್ಯಾಮಂದಿರ ಬಾಯ್ಸ್ ಸ್ಕೂಲ್‌ನಲ್ಲಿ ಅಪ್ಪ ಶಿಕ್ಷಕರಾಗಿದ್ದರು. ಶಾಲಾ ಸಿಬಂದಿಯ ಹೆಣ್ಣುಮಕ್ಕಳಿಗೆ ಮಾತ್ರ ಅಲ್ಲಿ ಕಲಿಯುವ ಅವಕಾಶವಿತ್ತು. ಹಾಗಾಗಿ ನಾನು ಹುಡುಗರ ಜತೆಯೇ ಆಡಿಕೊಂಡು- ಹಾಡಿಕೊಂಡು ಅವರೊಂದಿಗೆ ಹಲವು ವಿಷಯಗಳನ್ನು ಮುಕ್ತವಾಗಿ ಚರ್ಚಿಸುತ್ತಾ ಬೆಳೆದೆ. ಮನೆಯಲ್ಲಿ ಅಮ್ಮನಿಲ್ಲದ ಕಾರಣ, ಪೌಷ್ಟಿಕಾಂಶ ಹೊಂದಿದ ಆಹಾರ ಸೇವನೆಯ ಭಾಗ್ಯವಿರಲಿಲ್ಲ. ಸಂಜೆ ಬೇಗ ಮನೆಗೆ ಬಾ, ಹೋಂವರ್ಕ್‌ ಮಾಡು ಅನ್ನುವವರೂ ಇರಲಿಲ್ಲ. ಆಟವೇ ಪಾಠ ಆಗಿ ಹೋಗಿತ್ತು. ಕೃಶದೇಹದ ನನ್ನನ್ನು ಎಲ್ಲರೂ ಅಯ್ಯೋಪಾಪ ಅನ್ನುವಂತೆ ನೋಡುತ್ತಿದ್ದರು.

ನನಗೆ 18 ವರ್ಷ ತುಂಬುತ್ತಿದ್ದಂತೆಯೇ, ಮದುವೆಯ ಆಫ‌ರ್‌ ಬಂತು. ಅಪ್ಪನ ಎದುರು ನಿಂತ ಬಂಧುಗಳು-“ಒಳ್ಳೆಯ ಸಂಬಂಧ ಬಂದಿದೆ. ಒಂಟಿಯಾಗಿ ಬೆಳೆದ ಮಗು, ತುಂಬು ಕುಟುಂಬದಲ್ಲಿ ಸುಖವಾಗಿರಲಿ, ಮದುವೆ ಮಾಡಿ ಬಿಡು’ ಎಂದು ಸಲಹೆ ನೀಡಿದರು. ಅದಕ್ಕೆ ಅಪ್ಪನೂ ಒಪ್ಪಿದರು. ನೋಡನೋಡುತ್ತಿದ್ದಂತೆಯೇ ನನ್ನ ಮದುವೆಯಾಗಿ ಹೋಯಿತು. ನೂರಾರು ಆಸೆಗಳೊಂದಿಗೆ ಗಂಡನ ಮನೆಗೆ ಬಂದವಳಿಗೆ ಕೆಲವೇ ದಿನಗಳಲ್ಲಿ ಎದೆಯೊಡೆಯುವಂಥ ವಿಷಯ ಗೊತ್ತಾಯಿತು: ಏನೆಂದರೆ ಗಂಡಿನ ಕಡೆಯವರು ಸುಳ್ಳು ಹೇಳಿ ಸಂಬಂಧ ಬೆಳೆಸಿದ್ದರು. ವಾಸ್ತವದಲ್ಲಿ ನನ್ನ ಕೈಹಿಡಿದವನು ದುಷ್ಟನಾಗಿದ್ದ. ಕುಕೃತ್ಯಗಳಲ್ಲಿ ತೊಡಗಿ ಹೆಸರು ಕೆಡಿಸಿಕೊಂಡಿದ್ದ.

ವಿಷಯ ತಿಳಿದಾಗ ಅಪ್ಪ ತುಂಬಾ ನೊಂದುಕೊಂಡರು. ಧಾವಿಸಿ ಬಂದು ನೈನಿತಾಲ್‌ ಕರೆದೊಯ್ದರು. ಸಮಾಧಾನದಿಂದ ಇರು. ಡೈವೋರ್ಸ್‌ ಕೇಳೋಣ, ಅಂದರು. ಆಗ ಮಧ್ಯೆ ಪ್ರವೇಶಿಸಿದ ಬಂಧುಗಳು- “ಡೈವೋರ್ಸ್‌ ತಗೊಂಡ್ರೆ ಜನ ಆಡಿಕೊಳ್ತಾರೆ. ಮುಂದಕ್ಕೆ ಅವಳಿಗೆ ಜೀವನ ಕಷ್ಟ ಆಗುತ್ತೆ. ದುಡುಕಬೇಡ’ ಎಂದು ಬುದ್ಧಿ ಹೇಳಿದರು. ಆಗ ಅಪ್ಪ- ಸರಿ. ಅವರಿಗೆ ಒಂದು ಚಾನ್ಸ್ ಕೊಟ್ಟು ನೋಡೋಣ. ತಪ್ಪು ತಿದ್ದಿಕೊಂಡು ಜವಾಬ್ದಾರಿಯಿಂದ ಬದುಕಲಿ’ ಅಂದರು. ನಾನು ಮತ್ತೆ ಗಂಡನ ಮನೆಗೆ ಬಂದೆ. ಆದರೆ ನನ್ನ ದೌರ್ಜನ್ಯವೇ ಆತನ ದಿನಚರಿಯಾದಾಗ ಅಪ್ಪನ ಮನೆಗೆ ವಾಪಸ್‌ ಬಂದು ಬಿಟ್ಟೆ. ಡೈವೋರ್ಸ್‌ಗೆ ಅರ್ಜಿ ಹಾಕಿದೆ.

ಬಾಲ್ಯದಿಂದಲೇ ಜತೆಯಾದ ದುರದೃಷ್ಟ, ಮುರಿದು ಬಿದ್ದ ಮದುವೆ, ಒಡೆದು ಹೋದ ಕನಸುಗಳ ಕಾರಣಕ್ಕೆ ನಾನು ಮಾನಸಿಕ ರೋಗಿಯಂತಾದೆ. ಡಿಪ್ರಶನ್‌ಗೆ ಹೋಗಿಬಿಟ್ಟೆ. ಒಂದಲ್ಲ, ಎರಡಲ್ಲ, ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದೆ. ಅಪ್ಪ, ಮೂರು ಬಾರಿಯೂ ನನ್ನನ್ನು ಉಳಿಸಿಕೊಂಡರು. ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋದಾಗಲೇ ಮತ್ತೂಂದು ಸಂಗತಿ ಗೊತ್ತಾಯಿತು: ನಾನು ಗರ್ಭಿಣಿಯಾಗಿದ್ದೆ!

Advertisement

ಮತ್ತೂಂದು ಕಷ್ಟ ಸಹಿಸುವ ಶಕ್ತಿ ನನಗಿಲ್ಲ ಅಂದುಕೊಂಡೇ ಅಬಾರ್ಷನ್‌ಗೆ ಅನುಮತಿ ಕೇಳಿದೆ. ಹಿಮೋಗ್ಲೋಬಿನ್‌ ಪ್ರಮಾಣ ಕಡಿಮೆ ಇರುವ ಕಾರಣ, ಅಬಾರ್ಷನ್‌ ಮಾಡಲು ಆಗಲ್ಲ ಅಂದರು ಡಾಕ್ಟರ್‌. ಕೆಲವು ತಿಂಗಳುಗಳ ಅನಂತರ ಮಗಳು ಮಡಿಲಿಗೆ ಬಂದಳು. ದತ್ತು ಕೊಡಲು ನನಗೆ ಮನಸ್ಸು ಬರಲಿಲ್ಲ. “ಯಾರಿಗೂ ಕೊಡಲ್ಲ, ನಾವೇ ಸಾಕ್ತೇವೆ’ ಅನ್ನುತ್ತಾ ಅಪ್ಪ ನನ್ನ ಜತೆಗೆ ನಿಂತರು. ಇದುವರೆಗೂ ನಾನು ಒಬ್ಬಳೇ ಇದ್ದೆ. ಜವಾಬ್ದಾರಿಯ ಅರಿವಿರಲಿಲ್ಲ. ಆದರೆ ಈಗ ಮಗಳಿಗಾಗಿ ನಾನು ಬದುಕಬೇಕು, ನೌಕರಿ ಪಡೆಯಲು ಕೆಲವು ಕೋರ್ಸ್‌ಗಳನ್ನು ಮಾಡಿದೆ. “ನಿನಗೆ ಒಳ್ಳೆಯದಾದ್ರೆ ಸಾಕು’ ಅನ್ನುತ್ತಾ ಅಪ್ಪ ಕೇಳಿದಾಗೆಲ್ಲ ಹಣ ಕೊಟ್ಟರು. ದಿಲ್ಲಿ, ಮುಂಬಯಿಯೂ ಸೇರಿದಂತೆ ಹಲವು ನಗರಗಳಲ್ಲಿ, ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದೆ.

ಯಾವುದರಲ್ಲೂ ತೃಪ್ತಿ ಸಿಗಲಿಲ್ಲ.
ನಾನು ಎಲ್ಲಿಯೂ ಸಲ್ಲುತ್ತಿಲ್ಲವಲ್ಲ ಯಾಕೆ ಅಂದುಕೊಳ್ಳುತ್ತಲೇ ಕನ್ನಡಿಯ ಎದುರು ನಿಂತವಳನ್ನು ನನ್ನ ನರಪೇತಲ ದೇಹ ಅಣಕಿಸಿತು. ಡಿಪ್ರಶನ್‌ನಿಂದ ಪಾರಾಗಲು ಯೋಗ ಮತ್ತು ಫಿಟ್ನೆಸ್ ತರಗತಿಗೆ ಸೇರಿಕೊಂಡೆ. ಆಗಲೇ ಪವಾಡ ನಡೆದು ಹೋಯಿತು. ಕ್ರೀಡೆಯನ್ನು ನೆನಪಿಸುವಂತಿದ್ದ ಈ ಕ್ಷೇತ್ರಕ್ಕೆ ನನ್ನ ದೇಹ ಮತ್ತು ಮನಸ್ಸು ಬೇಗನೆ ಅಡ್ಜಸ್ಟ್ ಆಯಿತು. ಫಿಟ್ನೆಸ್ ತರಗತಿಯಲ್ಲಿಯೇ ಶಶಾಂಕ್‌ ಖಂಡೂರಿ ಎಂಬ ಹೃದಯವಂತನ ಪರಿಚಯವೂ ಆಯಿತು. ಅವರೂ ಉತ್ತರಾಖಂಡ ಮೂಲದವರು ಎಂದು ತಿಳಿದನಂತರ ಗೆಳೆತನ ಗಾಢವಾಯಿತು. ಶಶಾಂಕ್‌ ನನ್ನ ಸ್ಟ್ರೆಂತ್‌ ಮತ್ತು ವೀಕ್ನೆಸ್ಸ್ ಗಳನ್ನು ಗುರುತಿಸಿದರು. “ಮಹತ್ವದ್ದನ್ನು ಸಾಧಿಸುವ ಶಕ್ತಿ ನಿನ್ನಲ್ಲಿದೆ, ಮುನ್ನುಗ್ಗು ‘ಎಂದು ಪ್ರೋತ್ಸಾಹಿಸಿದರು. ಪವರ್‌ ಲಿಫ್ಟಿಂಗ್‌ ಕಡೆಗೆ ಗಮನ ಸೆಳೆದರು. ಜಿಮ್‌ ಟ್ರೈನರ್‌ ಆಗುವ ಗುಟ್ಟು ಹೇಳಿಕೊಟ್ಟರು. ಕಡೆಗೊಮ್ಮೆ ನಾವು ಮದುವೆಯಾಗೋಣ. ಒಪ್ಪಿಗೆಯಾ? ಅಂದರು!

ಶಶಾಂಕ್‌ ಅವರೊಂದಿಗೆ ಹೊಸ ಬದುಕು ಆರಂಭಿಸಿದೆ. ಎಂಬಿಎ ಮಾಡಿದೆ. 2015ರಲ್ಲಿ ರಾಷ್ಟ್ರಮಟ್ಟದ ಪವರ್‌ ಲಿಫ್ಟಿಂಗ್‌ನಲ್ಲಿ ದೇಶವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದೆ. 2018ರಲ್ಲಿ ಸ್ಟ್ರಾಂಗೆಸ್ಟ್ ವಿಮನ್‌ ಆಫ್ ಇಂಡಿಯಾ ಪ್ರಶಸ್ತಿಗೆ ಕೊರಳೊಡ್ಡಿದೆ. ಅಮೆರಿಕದ ಶಾಲೆಯಿಂದ ಫಿಟ್ನೆಸ್ ಟ್ರೈನಿಂಗ್‌ ಕೋರ್ಸ್‌ ಸರ್ಟಿಫಿಕೆಟ್‌ ಪಡೆದೆ. ಉತ್ತರಾಖಂಡ ರಾಜ್ಯದ ಶ್ರೇಷ್ಠ ಕ್ರೀಡಾಪಟು ಅನ್ನಿಸಿಕೊಂಡೆ. ಈಗ ಡೆಹ್ರಾಡೂನ್‌ ನಲ್ಲಿ ಮೌಂಟ್‌ ಸ್ಟ್ರಾಂಗ್‌ ಹೆಸರಿನ ಫಿಟ್ನೆಸ್ ಟ್ರೈನಿಂಗ್‌ ಸೆಂಟರ್‌ ತೆರೆದಿದ್ದೇನೆ. ಸೆಲೆಬ್ರಿಟಿ ಅನ್ನಿಸಿಕೊಂಡಿದ್ದೇನೆ. ಮಗಳು ಜತೆಗಿದ್ದಾಳೆ. ಇಷ್ಟುದಿನ ನನ್ನ ಕಷ್ಟದ ಬದುಕು ನೋಡಿ ಕಂಬನಿ ಸುರಿಸುತ್ತಿದ್ದ ಅಪ್ಪ, ಈಗ ನನ್ನ ಖುಷಿ ಕಂಡು ಸಂಭ್ರಮಿಸುತ್ತಿದ್ದಾರೆ.

ಸೋಲುಗಳಿಗೆ ಸವಾಲು ಹಾಕಿ ಗೆದ್ದ ಏಕ್ತಾ ಕಪೂರ್‌ ಅವರಿಗೆ ಅಭಿನಂದನೆ ಹೇಳಲು- kapoormountstrong@gmail.com

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next