ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದ ಬೆನ್ನಲ್ಲೇ ಬಂಡಾಯ ಎದ್ದ ಏಕನಾಥ ಶಿಂಧೆಯನ್ನು ಶಿವಸೇನಾ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಮಂಗಳವಾರ (ಜೂನ್ 21) ವಜಾಗೊಳಿಸಲಾಗಿದೆ.
ಇದನ್ನೂ ಓದಿ:ಗೋವಾ ಬೀಚ್ ನಲ್ಲಿ ಪಲ್ಟಿ ಹೊಡೆಯುವಾಗ ನಟ ದಿಗಂತ್ ಕತ್ತಿಗೆ ಬಲವಾದ ಪೆಟ್ಟು
ಮತ್ತೊಂದೆಡೆ ಸೆವ್ರಿ ಶಾಸಕ ಅಜಯ್ ಚೌಧರಿ ಅವರನ್ನು ಶಿವಸೇನಾ ಶಾಸಕಾಂಗ ಪಕ್ಷದ ನೂತನ ನಾಯಕನನ್ನಾಗಿ ಆಯ್ಕೆ ಮಾಡಿರುವುದಾಗಿ ಘೋಷಿಸಿದೆ ಎಂದು ಎಎನ್ ಐ ವರದಿ ಮಾಡಿದೆ.
ಮಹಾರಾಷ್ಟ್ರ ಸಚಿವ, ಶಿವಸೇನಾದ ಹಿರಿಯ ಮುಖಂಡ ಏಕನಾಥ ಶಿಂಧೆ ಜೊತೆ ಮಾತುಕತೆ ನಡೆಸುವ ಮುನ್ನವೇ, ರಾಜ್ಯದಲ್ಲಿನ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಲು ಶಿಂಧೆ ಮೂರನೇ ಬಾರಿ ಪ್ರಯತ್ನಿಸಿರುವುದಾಗಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದರು.
ಏತನ್ಮಧ್ಯೆ ಇದೊಂದು ಶಿವಸೇನಾದ ಆಂತರಿಕ ವಿಷಯವಾಗಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ ಎಂದು ಶರದ್ ಪವಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾ ವಿಕಾಸ್ ಅಘಾಡಿ ಸರ್ಕಾರ ರಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಶರದ್ ಪವಾರ್, ನಮ್ಮ ಸರ್ಕಾರ ಪೂರ್ಣ ಐದು ವರ್ಷಗಳ ಕಾಲ ಆಡಳಿತ ನಡೆಸಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಅಲ್ಲದೇ ಒಂದು ವೇಳೆ ಸರ್ಕಾರ ಪತನವಾದರೆ ಬಿಜೆಪಿ ಜೊತೆ ಕೈಜೋಡಿಸಲಾಗುತ್ತದೆ ಎಂಬ ಊಹಾಪೋಹವನ್ನು ಪವಾರ್ ತಳ್ಳಿಹಾಕಿದ್ದಾರೆ.