ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ ಏಕನಾಥ್ ಶಿಂಧೆ ಅವರು ಮುಂಬೈನಲ್ಲಿ ವಿವಾದಾತ್ಮಕ ಮೆಟ್ರೋ ಕಾರ್ ಶೆಡ್ ಯೋಜನೆಗೆ ಸಂಬಂಧಿಸಿದಂತೆ ಉದ್ಧವ್ ಠಾಕ್ರೆ ಸರ್ಕಾರದ ನಿಲುವನ್ನು ಬದಲಾಯಿಸಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ
2019 ರಲ್ಲಿ ದೇವೇಂದ್ರ ಫಡ್ನವಿಸ್ ಸರ್ಕಾರದ ಅಡಿಯಲ್ಲಿ ಯೋಜಿಸಿದಂತೆ ಆರೆ ಕಾಲೋನಿಯಲ್ಲಿ ಮೆಟ್ರೋ ಕಾರ್ ಶೆಡ್ ನಿರ್ಮಿಸಲಾಗುವುದು ಎಂದು ನ್ಯಾಯಾಲಯದಲ್ಲಿ ದಾಖಲೆ ಸಲ್ಲಿಸುವಂತೆ ಏಕನಾಥ ಶಿಂಧೆ ಅವರು ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿ ಅವರಿಗೆ ಸೂಚಿಸಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
2019 ರಲ್ಲಿ ಈ ಮೆಟ್ರೋ ರೈಲು ಯೋಜನೆ ಮುಂಬೈನಲ್ಲಿ ಪರಿಸರ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆಯನ್ನು ಹುಟ್ಟುಹಾಕಿತ್ತು. ಮುಂಬೈನ ಹಸಿರು ಶ್ವಾಸಕೋಶ ಎಂದು ಕರೆಯಲ್ಪಡುವ ಆರೆ ಕಾಲೋನಿಯಲ್ಲಿ ಮರಗಳನ್ನು ಕಡಿಯಲು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ)ಗೆ ಮುಂಬೈ ಮೆಟ್ರೋ ರೈಲು ಕಾರ್ಪೊರೇಶನ್ ಅನುಮತಿಯನ್ನು ಕೋರಿತ್ತು. ಇದರಿಂದ ಮುಂಬೈನಲ್ಲಿ ಭಾರೀ ಪ್ರತಿಭಟನೆಗಳು ನಡೆದಿತ್ತು.
ಇದನ್ನೂ ಓದಿ:ದಾಖಲೆಯ ದೂರಕ್ಕೆ ಜಾವೆಲಿನ್ ಎಸೆದ ನೀರಜ್ ಚೋಪ್ರಾ; ಹೊಸ ದಾಖಲೆ ಬರೆದ ಚಿನ್ನದ ಹುಡುಗ| Video
ಕಾರ್ಯಕರ್ತರು ತಮ್ಮ ಆಂದೋಲನವನ್ನು ಹೆಚ್ಚಿಸುತ್ತಿದ್ದಂತೆ, ಅಂದಿನ ಮುಖ್ಯಮಂತ್ರಿ ಫಡ್ನವಿಸ್ ಅವರು ಮೆಟ್ರೋ ಕಾರ್ ಶೆಡ್‌ಗಾಗಿ ಗುರುತಿಸಲಾದ ಪ್ರದೇಶವನ್ನು ಜೀವವೈವಿಧ್ಯ ಅಥವಾ ಅರಣ್ಯ ಭೂಮಿ ಎಂದು ವರ್ಗೀಕರಿಸಲಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಅಲ್ಲದೆ ನಾವು ಮರಗಳನ್ನು ಸಂರಕ್ಷಿಸುವುದು ಇಂಗಾಲ ಕಡಿಮೆ ಮಾಡಲು. ನಾವು ಯೋಜಿಸಿರುವ ಮೆಟ್ರೋ ಯೋಜನೆಯಿಂದ ವಾಹನ ದಟ್ಟಣೆ ಕಡಿಮೆಯಾಗಿ ಇಂಗಾಲದ ಪ್ರಮಾಣ ಕುಂಠಿತವಾಗುತ್ತದೆ ಎಂದು ಫಡ್ನವೀಸ್ ಹೇಳಿದ್ದರು.
ಬಿಜೆಪಿ ಜೊತೆ ಮೃತ್ರಿಯಲ್ಲಿದ್ದ ಶಿವಸೇನೆ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆ ಸರ್ಕಾರ ರಚಿಸಿದ ಶಿವಸೇನೆ, ಈ ಯೋಜನೆಯನ್ನು ಆರೆ ಕಾಲೋನಿಯಿಂದ ಕಂಜುರ್ಮಾರ್ಗ್ ಗೆ ಸ್ಥಳಾಂತರಿಸಿತ್ತು. ಅದರ ನಂತರ, ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಈ ಭೂಮಿಯು ಭೂಮಿ ತನ್ನ ಲವಣ ಇಲಾಖೆಗೆ ಸೇರಿದ್ದು ಎಂದು ಹೇಳಿ 2020 ರಲ್ಲಿ ಬಾಂಬೆ ಹೈಕೋರ್ಟ್‌ಗೆ ಮೆಟ್ಟಿಲೇರಿತ್ತು. ಆಗ ಹೈಕೋರ್ಟ್ ಯೋಜನೆಗೆ ತಡೆಯಾಜ್ಞೆ ನೀಡಿತ್ತು. ಅಂದಿನಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದೆ.
ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರು ಮುಂಬೈ ಮೆಟ್ರೋ ಕೆಲಸವನ್ನು ಮತ್ತೆ ಟ್ರ್ಯಾಕ್‌ಗೆ ತರುವುದಾಗಿ ಟ್ವೀಟ್ ಮಾಡಿದ್ದಾರೆ. ಠಾಕ್ರೆ ಬಣದಿಂದ ಹೊರಬಂದ ಶಿಂಧೆ ಇದೀಗ ಠಾಕ್ರೆಗೆ ಟಕ್ಕರ್ ಕೊಡಲು ಹೊರಟಿದ್ದಾರೆ.