ನವದೆಹಲಿ: ಭೂಗತ ಪಾತಕಿ, ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ದಾವೂದ್ ಇಬ್ರಾಹಿಂನ ಕುರಿತು ಇತ್ತೀಚೆಗೆ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ಸೆರೆ ಸಿಕ್ಕಿದ್ದ ಎಜಾಜ್ ಲಕ್ಡಾವಾಲಾ ತನಿಖೆ ವೇಳೆ ಬಾಯ್ಬಿಟ್ಟಿರುವುದಾಗಿ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಮುಂಬೈ ಕ್ರೈಂ ಬ್ರ್ಯಾಂಚ್ ನ ಸುಲಿಗೆ ನಿಗ್ರಹ ದಳದ ತಂಡ ಪಾಟ್ನಾದಲ್ಲಿ ದಾವೂದ್ ಮಾಜಿ ಬಂಟ ಎಜಾಜ್ ಲಕ್ಡಾವಾಲಾನನ್ನು ಬಂಧಿಸಿತ್ತು. ತನಿಖೆ ವೇಳೆ ಲಕ್ಡಾವಾಲಾ, ದಾವೂದ್ ಇಬ್ರಾಹಿಂ ಈಗಲೂ ಕರಾಚಿಯಲ್ಲಿ ಇದ್ದಿರುವುದನ್ನು ಹಾಗೂ ಕರಾಚಿಯ ಎರಡು ವಿಳಾಸವನ್ನು ಖಚಿತಪಡಿಸಿರುವುದಾಗಿ ವರದಿ ವಿವರಿಸಿದೆ.
ದಾವೂದ್ ವಾಸ್ತವ್ಯ ಇರುವ ಪ್ರದೇಶದಲ್ಲಿ ಪಾಕಿಸ್ತಾನದ ಐಎಸ್ ಐ ಉನ್ನತ ದರ್ಜೆಯ ಕಮಾಂಡೋ ಪಡೆಗಳನ್ನು ಭದ್ರತೆಗಾಗಿ ನೀಡಲಾಗಿದೆ. ಆದರೆ ಇದು ಪಾಕಿಸ್ತಾನದ ಪ್ರಧಾನಿ ಹಾಗೂ ಆರ್ಮಿ ಮುಖ್ಯಸ್ಥರಿಗೆ ತಿಳಿಯದೇ ಈ ರೀತಿ ಭದ್ರತೆ ಕೊಡಲು ಸಾಧ್ಯವಿಲ್ಲ ಎಂದು ಲಕ್ಡಾವಾಲಾ ತನಿಖೆ ವೇಳೆ ತಿಳಿಸಿರುವುದಾಗಿ ವರದಿ ವಿವರಿಸಿದೆ.
ದಾವೂದ್ ಜತೆಗೆ ಅನೀಸ್ ಹಾಗೂ ಚೋಟಾ ಶಕೀಲ್ ಗೂ ಕೂಡಾ ಐಎಸ್ ಐ ಭದ್ರತೆಯನ್ನು ನೀಡಿದೆ. ಅಷ್ಟೇ ಅಲ್ಲ ವಿವಿಧ ದೇಶಗಳಿಗೆ ಪ್ರಯಾಣ ಬೆಳೆಸಲು ನಕಲಿ ಪಾಸ್ ಪೋರ್ಟ್ ಗಳನ್ನು ಕೂಡಾ ಒದಗಿಸುತ್ತಿದೆ ಎಂದು ಲಕ್ಡಾವಾಲಾ ತಿಳಿಸಿರುವುದಾಗಿ ವರದಿ ಹೇಳಿದೆ.
ಕೊಲೆ ಯತ್ನ ಹಾಗೂ 40ಕ್ಕೂ ಅಧಿಕ ಸುಲಿಗೆ ಪ್ರಕರಣಗಳಲ್ಲಿ ಲಕ್ಡಾವಾಲಾ ಮುಂಬೈ, ದಿಲ್ಲಿ ಹಾಗೂ ಇತರ ಪೊಲೀಸರಿಗೆ ಬೇಕಾಗಿದ್ದು, ಇದೀಗ ಮುಂಬೈ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಚೋಟಾ ರಾಜನ್ ಗ್ಯಾಂಗ್ ಸೇರಿಕೊಂಡಿದ್ದ ಲಕ್ಡಾವಾಲಾ ಮೇಲೆ 2002ರಲ್ಲಿ ಚೋಟಾ ಶಕೀಲ ಬ್ಯಾಂಕಾಂಕ್ ನಲ್ಲಿ ಲಕ್ಡಾವಾಲಾ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದ, ಇದರಲ್ಲಿ ಲಕ್ಡಾವಾಲಾಗೆ 7 ಗುಂಡುಗಳು ತಗುಲಿದ್ದವು..ಆದರೆ ಲಕ್ಡಾವಾಲಾ ಥೈಲ್ಯಾಂಡ್ ನಿಂದ ದಕ್ಷಿಣಾ ಆಫ್ರಿಕಾಕ್ಕೆ ಪರಾರಿಯಾಗಿದ್ದ ಎಂದು ವರದಿ ತಿಳಿಸಿದೆ.
2008ರಲ್ಲಿ ಲಕ್ಡಾವಾಲಾ ತನ್ನದೇ ಆದ ಸ್ವತಂತ್ರ ಗ್ಯಾಂಗ್ ಕಟ್ಟಿಕೊಂಡು ಸುಲಿಗೆ ಪ್ರಕರಣದಲ್ಲಿ ತೊಡಗಿದ್ದ. ಈ ನಿಟ್ಟಿನಲ್ಲಿ ಮುಂಬೈ ಪೊಲೀಸರು ಕಳೆದ ಆರು ತಿಂಗಳನಿಂದ ಈತನ ಬಂಧನಕ್ಕೆ ಸಿದ್ಧತೆ ನಡೆಸುತ್ತಿದ್ದರು. ಅದರಂತೆ ಜನವರಿ 8ರಂದು ಲಕ್ಡಾವಾಲಾನನ್ನು ಪಾಟ್ನಾದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು.