ಟೆಲ್ ಅವಿಲ್(Middle East war): ಲೆಬನಾನ್ ಭಯೋತ್ಪಾದಕ ಸಂಘಟನೆ ಹೆಜ್ಬುಲ್ಲಾ ಮುಖ್ಯಸ್ಥ ಹಸನ್ ನಸರಲ್ಲಾಹ್ ಹ*ತ್ಯೆ ನಡೆಸಿದ ಬೆನ್ನಲ್ಲೇ ಇಸ್ರೇಲ್ ಸೇನೆ ಇರಾನ್ ಮೇಲೆ ರಾಕೆಟ್ ಸುರಿಮಳೆಗೈದಿದೆ.
ಒಂದೋ ನಾವೀರಬೇಕು, ಇಲ್ಲವೇ ನೀವಿರಬೇಕು: ಇರಾನ್ ಗೆ ಇಸ್ರೇಲ್ ಸಂದೇಶ!
ಇರಾನ್ ಮೇಲಿನ ಪ್ರತೀಕಾರದ ದಾಳಿ ಯಾವ ಸಮಯದಲ್ಲಿ ಮಾಡಬೇಕು ಎಂಬುದು ನಮ್ಮ ಆಯ್ಕೆಯಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಯ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗಾರಿ ಎಚ್ಚರಿಕೆ ನೀಡಿದ್ದರೆ, ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಇರಾನ್ ಅನ್ನು ನಾಶ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಅಲ್ಲದೇ ಯುದ್ಧದಲ್ಲಿ ಒಂದೋ ಇಸ್ರೇಲ್ ಅಥವಾ ಇರಾನ್ ಅಸ್ತಿತ್ವದಲ್ಲಿ ಇರಬೇಕು ಎಂದು ಹೇಳುವ ಮೂಲಕ ಭೀಕರ 3ನೇ ವಿಶ್ವ ಯುದ್ಧದ ಮುನ್ಸೂಚನೆ ನೀಡಿರುವುದಾಗಿ ವರದಿಗಳು ತಿಳಿಸಿವೆ.
ಇಸ್ರೇಲ್ ಸೇನೆ ಯುದ್ಧ ಆರಂಭಿಸಿದ್ದು, ಇರಾನ್ ಗೆ ಇನ್ನು ಯಾವುದೇ ಆಯ್ಕೆಗಳಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದರು. ಇಸ್ರೇಲ್ ಈಗಾಗಲೇ ಲೆಬನಾನ್, ಇರಾನ್ ನ ಪ್ರತಿ ನಗರವನ್ನು ಗುರಿಯಾಗಿರಿಸಿಕೊಂಡು ಮಿಸೈಲ್, ರಾಕೆಟ್ ದಾಳಿ ನಡೆಸುತ್ತಿದೆ.
ಇಸ್ರೇಲ್ ಮೇಲೆ ಇರಾನ್ 180ಕ್ಕೂ ಅಧಿಕ ಬ್ಯಾಲಿಸ್ಟಿಕ್ ಮಿಸೈಲ್ ದಾಳಿ:
ಇರಾನ್ ನಮ್ಮ ಮೇಲೆ 180ಕ್ಕೂ ಅಧಿಕ ಬ್ಯಾಲಿಸ್ಟಿಕ್ ಮಿಸೈಲ್ ದಾಳಿ ನಡೆಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆಯ ವಕ್ತಾರ ಡೇನಿಯಲ್ ಹಗಾರಿ ತಿಳಿಸಿದ್ದಾರೆ. ಇರಾನ್ ದಾಳಿಯಿಂದ ಇಸ್ರೇಲ್ ಗೆ ಯಾವುದೇ ಗಂಭೀರವಾದ ಪರಿಣಾಮ ಬೀರಿಲ್ಲ. ಬಹುತೇಕ ಮಿಸೈಲ್ ಅನ್ನು ಇಸ್ರೇಲ್ ಹೊಡೆದುರುಳಿಸಿದೆ. ನಮ್ಮನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ. ಆದರೆ ನಾವು ಇರಾನ್ ಮೇಲೆ ಯಾವ ಸಂದರ್ಭದಲ್ಲೂ ದಾಳಿ ನಡೆಸಬಹುದಾಗಿದೆ ಎಂದು ಡೇನಿಯಲ್ ಸಂದೇಶ ರವಾನಿಸಿದ್ದಾರೆ.
ಇಸ್ರೇಲ್ ನಿಂದ ಇರಾನ್ ಮೇಲೆ ದಾಳಿ:
ಇಸ್ರೇಲ್ ಮತ್ತು ಇರಾನ್ ಕೂಡಲೇ ಕದನ ವಿರಾಮ ಘೋಷಿಸಬೇಕೆಂದು ವಿಶ್ವಸಂಸ್ಥೆ ಆಗ್ರಹಿಸಿದೆ. ಆದರೆ ವಿಶ್ವಸಂಸ್ಥೆಯ ಮನವಿಯನ್ನು ಲೆಕ್ಕಿಸದ ಇಸ್ರೇಲ್ ಪಡೆ ಇರಾನ್ ಮೇಲೆ ರಾಕೆಟ್ ದಾಳಿ ಮುಂದುವರಿಸಿರುವುದಾಗಿ ವರದಿ ತಿಳಿಸಿದೆ.