ಕಾನ್ಪುರ: ಕೊಲೆ ಯತ್ನ ಆರೋಪಿ ವಿಕಾಸ್ ದುಬೆಯನ್ನು ಪತ್ತೆಹಚ್ಚಲು ತೆರಳಿದ್ದ ಪೊಲೀಸ್ ತಂಡದ ಮೇಲೆ ಏಕಾಏಕಿ ದುಷ್ಕರ್ಮಿಗಳು ಗುಂಡು ಹಾರಿಸಿದ ಪರಿಣಾಮ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮೂವರು ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಎಂಟು ಮಂದಿ ಪೊಲೀಸ್ ಸಿಬ್ಬಂದಿ ಹತ್ಯೆಗೀಡಾದ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ವಿಕಾಸ್ ದುಬೆ ಎಂಬ ವ್ಯಕ್ತಿಯ ವಿರುದ್ಧ ರಾಹುಲ್ ತಿವಾರಿ ಎಂಬವರು ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದರು. ಶುಕ್ರವಾರ (ಇಂದು) ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ತೆರಳಿದ್ದ ವೇಳೆಯಲ್ಲಿ ರೌಡಿಶೀಟರ್ ಗಳು ಏಕಾಏಕಿ ಗುಂಡು ಹಾರಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾನ್ಪುರ ಜಿಲ್ಲೆಯ ಚೌಬೆಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕ್ರು ಗ್ರಾಮದಲ್ಲಿ ಈ ದಾಳಿ ನಡೆದಿದ್ದು, ಉಪ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಮಿಶ್ರಾ, ಮೂವರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ನಾಲ್ವರು ಕಾನ್ ಸ್ಟೆಬಲ್‌ಗಳು ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇತರ 6 ಮಂದಿ ಪೊಲೀಸ್ ಸಿಬ್ಬಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಕಾಸ್ ದುಬೆ 60 ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಈ ಕಾರಣಕ್ಕಾಗಿ ನಿನ್ನೆ ತಡರಾತ್ರಿ ಕಾರ್ಯಾಚರಣೆ ನಡೆದಿತ್ತು. ಆದರೆ ವಿಕಾಸ್ ದುಬೆ ಅಡಗುತಾಣದ ರೂಫ್ ಟಾಪ್ ನಿಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಕಾನ್ಪುರದ ಪೊಲೀಸ್ ಅಧೀಕ್ಷಕರು ಮತ್ತು ಇತರರು ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತಿದ್ದಾರೆ. ಲಕ್ನೋದಿಂದ ವಿಧಿವಿಜ್ಞಾನ ತಂಡವೊಂದನ್ನು ಸ್ಥಳಕ್ಕೆ ಕರೆದೊಯ್ಯಲಾಗಿದ್ದು, ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಗೆ ಪ್ರಕರಣದ ಉಸ್ತುವಾರಿ ನೀಡಲಾಗಿದೆ.
ಘಟನೆಯ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದು, ಗುಂಡಿನ ದಾಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸೂಚಿಸಿದರು.